

ಬೆಳ್ತಂಗಡಿ: ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿ ಗಳಿಸಿದ್ದು, 7.05 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 1020.75 ಕೋಟಿ ರೂ. ವ್ಯವಹಾರ ನಡೆಸಿ 4.30 ಕೋಟಿ ರೂ. ಲಾಭ ಗಳಿಸಿದೆ. ಶೇ.17 ಡಿವಿಡೆಂಡ್ ನೀಡಲು ನಿರ್ಣಯಿಸಲಾಗಿದೆ ಎಂದು ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಹೇಳಿದರು.
ಮಂಗಳವಾರ ಕೊಲ್ಲಿ ಶ್ರೀ ದುರ್ಗಾದೇವಿ ಕಲಾಮಂದಿರದಲ್ಲಿ ಆಯೋಜಿಸಲಾದ ಸಂಘದ ಮಹಾಸಭೆಯಲ್ಲಿ ಮಾತನಾಡಿ, ಸಂಘ ಆರು ಗ್ರಾಮಗಳ ಕಾರ್ಯವ್ಯಾಪ್ತಿ ಹೊಂದಿದ್ದು, 221.11 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಸದಸ್ಯರಿಗೆ 153.50 ಕೋಟಿ ರೂ. ಸಾಲ ವಿತರಿಸಿದೆ. ಶೇ.99.45 ಸಾಲ ವಸೂಲಾತಿಯಾಗಿದೆ. 127.16 ಕೋಟಿ ರೂ. ಠೇವಣಿ ಹೊಂದಿದೆ ಎಂದರು.
ಕೇಂದ್ರ ಸರ್ಕಾರದ ಯೋಜನೆಯಡಿ ಕಡಿರುದ್ಯಾವರ ಹಾಗೂ ಕನ್ಯಾಡಿಯ ಪಡ್ಪು ಎಂಬಲ್ಲಿ ಕಟ್ಟಡ ನಿರ್ಮಿಸಲು ತಲಾ 1.19 ಕೋಟಿ ರೂ. ಶೇ.3 ಬಡ್ಡಿ ದರದಲ್ಲಿ ನಬಾರ್ಡ್ನಿಂದ ಸಾಲ ಮಂಜೂರಾಗಿದೆ. ಸರಿಯಾದ ಮರುಪಾವತಿಗೆ ಶೇ.2 ಬಡ್ಡಿ ದರ ಪುನರ್ಧನವಾಗಿ ಲಭ್ಯವಾಗಲಿದೆ. ಕಡಿರುದ್ಯಾವರ ಶಾಖೆ ಕಟ್ಟಡ ಉದ್ಘಾಟನೆಗೊಂಡಿದ್ದು, ಕನ್ಯಾಡಿಯ ಪಡ್ಪು ಎಂಬಲ್ಲಿ ನೂತನ ಕಟ್ಟಡದ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಸಂಘವು 7 ಶಾಖೆಗಳನ್ನು ಹೊಂದಿದ್ದು ಎಲ್ಲ್ಲ ಶಾಖೆಗಳ ವ್ಯವಹಾರ ಸಂಪೂರ್ಣ ಗಣಕೀಕರಿಸಲಾಗಿದೆ ಎಂದರು.
ನಿರ್ದೇಶಕ, ಸಿಇಒ ದಯಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು. ನೌಕರ ರಮಾನಂದ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ವಸಂತ ಗೌಡ ವಂದಿಸಿದರು.
ಅಪೆಕ್ಸ್ ಬ್ಯಾಂಕಿನಿಂದ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಅತ್ಯುತ್ತಮ ಸಂಘ ಪ್ರಶಸ್ತಿ ಪಡೆದಿದೆ. ತಾಲೂಕಿನಲ್ಲಿ ಅತಿ ಹೆಚ್ಚಿನ ಕೃಷಿ ಸಾಲ ನೀಡುತ್ತಿರುವ ಸಂಸ್ಥೆಯಾಗಿದ್ದು, ಆರ್ಟಿಜಿಎಸ್, ನೆಫ್ಟ್, ಡಿಡಿ ಸೌಲಭ್ಯ, ಮೃತಪಟ್ಟ ಸದಸ್ಯರ ವಾರೀಸುದಾರರಿಗೆ 10 ಸಾವಿರ ರೂ. ಸಹಕಾರಿ ಸಾಂತ್ವನ ನಿಧಿ, ಸಂಘದ ನಿವೃತ್ತ ನೌಕರರಿಗೆ ಮಾಸಿಕ ಪಿಂಚಣಿ ಯೋಜನೆ ನೀಡಲಾಗುತ್ತಿದೆ. ಅಡಕೆ, ರಬ್ಬರ್ ಖರೀದಿ, ರಸಗೊಬ್ಬರ, ಸಿಮೆಂಟ್ ಗ್ರಾಹಕ ವಸ್ತುಗಳ ಮಾರಾಟ ಸೌಲಭ್ಯ, ಟಿವಿ, ಫ್ರಿಡ್ಜ್ ಇತ್ಯಾದಿ ಎಲೆಕ್ಟ್ರಾನಿಕ್ ಹಾಗೂ ಪೀಠೋಪಕರಣಗಳ ಖರೀದಿಗಾಗಿ ಶೀಘ್ರ ಸಾಲ ಸೌಲಭ್ಯವಿದೆ. ಪುತ್ತೂರು ಉಪವಿಭಾಗದಲ್ಲಿ ಅತಿ ಹೆಚ್ಚು ವ್ಯವಹಾರ ಹಾಗೂ ಲಾಭ ಗಳಿಸಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ ಎಂದು ಹರೀಶ್ ಸಾಲಿಯಾನ್ ತಿಳಿಸಿದರು.
ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 11 ಹಾಲು ಉತ್ಪಾದಕ ಸಹಕಾರಗಳ ಅಧ್ಯಕ್ಷ, ಕಾರ್ಯದರ್ಶಿಗಳನ್ನು ಗೌರವಿಸಲಾಯಿತು. ಸಂಘದಲ್ಲಿ 382 ನವೋದಯ ಸ್ವಸಹಾಯ ಗುಂಪುಗಳು ಕಾರ್ಯಾಚರಿಸುತ್ತಿದ್ದು, ಇದರಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ 19 ಗುಂಪುಗಳನ್ನು ಗೌರವಿಸಲಾಯಿತು. ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.