

ಹಾಸನ: ವಿಶ್ವ ಪಾರ್ಶ್ವವಾಯು ದಿನಾಚರಣೆ ಅಂಗವಾಗಿ ಡಿ.3ರಂದು ಪಾರ್ಶ್ವವಾಯು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಚ್.ಬಿ.ಮೋಹನ್ ತಿಳಿಸಿದರು.
ಎರಡು ವರ್ಷಗಳಿಂದ ಪಾರ್ಶ್ವವಾಯು ಕುರಿತು ಜಿಲ್ಲೆಯಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಸಾಕಷ್ಟು ಮಾಹಿತಿ ನೀಡಬೇಕು ಎಂದುಕೊಂಡಿದ್ದೆವು. ಆದರೆ ಸೂಕ್ತ ವೈದ್ಯರ ತಂಡ ಸಮಯಾವಕಾಶ ನೀಡದ ಕಾರಣ ಅದು ಸಾಧ್ಯವಾಗಿರಲಿಲ್ಲ. ಬೆಂಗಳೂರು ಕರ್ನಾಟಕ ಸ್ಟ್ರೋಕ್ ಫೌಂಡೇಶನ್ ಈಗ ನಮ್ಮ ಜತೆಗೂಡಿದೆ. ಆದ್ದರಿಂದ ಇದೇ ಡಿ.3 ಭಾನುವಾರದಂದು ಬೆಳಗ್ಗೆ 10.30ಕ್ಕೆ ನಗರ ರೆಡ್ ಕ್ರಾಸ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ಸ್ಟ್ರೋಕ್ ಫೌಂಡೇಶನ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ಸ್ ವತಿಯಿಂದ ಪಾರ್ಶ್ವವಾಯು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತದಲ್ಲಿ ವಯಸ್ಸಿನ ಇತಿಮಿತಿ ಇಲ್ಲದೆ ಪಾರ್ಶ್ವವಾಯುವಿಗೆ ತುತ್ತಾಗುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಈ ಕಾಯಿಲೆಗೆ ತುತ್ತಾಗುತ್ತಿದ್ದು ಪ್ರತಿ ನಾಲ್ಕು ನಿಮಿಷಕ್ಕೆ ಒಂದು ಸಾವು ಸಂಭವಿಸುತ್ತಿದೆ. ಜಗತ್ತಿನಾದ್ಯಂತ ಕಿಲ್ಲರ್ ಡಿಸಿಸ್ ಎಂದು ಗುರುತಿಸಿಕೊಂಡಿರುವ ಪಾರ್ಶ್ವವಾಯು (ಸ್ಟೋಕ್) ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಿ ಸೂಕ್ತ ಕಾಲಕ್ಕೆ ಚಿಕಿತ್ಸೆ ಕೊಡಿಸಿದರೆ ಬದುಕುಳಿಯಲು ಸಾಧ್ಯ ಎಂಬ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜಾಗತಿಕವಾಗಿ ಹೆಚ್ಚು ಸಾವು ಸಂಭವಿಸುವ ಕಾಯಿಲೆಗಳ ಪಟ್ಟಿಯಲ್ಲಿ ಹೃದಯಾಘಾತದ ನಂತರ ಪಾರ್ಶ್ವವಾಯು ಎರಡನೇ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ವಾರ್ಷಿಕವಾಗಿ ವಿಶ್ವದಾದ್ಯಂತ 15 ಮಿಲಿಯನ್ ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದೆ. ಈ ಪೈಕಿ 5 ಮಿಲಿಯನ್ ಜನರು ಸಾವನ್ನಪ್ಪಿದರೆ, ಇನ್ನೂ 5 ಮಿಲಿಯನ್ ಜನರು ಶಾಶ್ವತವಾಗಿ ಅಂಗವಿಕಲರಾಗುತ್ತಾರೆ. 40 ವರ್ಷದೊಳಗಿನ ಜನರಲ್ಲಿ ಪಾರ್ಶ್ವವಾಯು ಇತ್ತೀಚಿಗೆ ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಪಾರ್ಶ್ವವಾಯು ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಜರಾಗಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಉಚಿತ ಆರೋಗ್ಯ ಕ್ಲಿನಿಕ್:
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಜಿಲ್ಲಾ ಶಾಖೆ ವತಿಯಿಂದ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಸಂಜೆ 4 ರಿಂದ 6 ಗಂಟೆವರೆಗೆ ಮಹಿಳೆ ಹಾಗೂ ಮಕ್ಕಳ ಆರೋಗ್ಯ ಸಮಸ್ಯೆಗಳ ಕುರಿತು ತಪಾಸಣೆ ಹಾಗೂ ಸಲಹೆ ನೀಡಲು ಉಚಿತ ಆರೋಗ್ಯ ಕ್ಲಿನಿಕ್ ಸೇವೆಯನ್ನು ಆರಂಭಿಸಿದೆ. ಸಾಲಗಾಮೆ ರಸ್ತೆಯ ನೆಹರು ಯುವ ಕೇಂದ್ರ ಬಳಿ ಇರುವ ರೆಡ್ ಕ್ರಾಸ್ ಭವನದಲ್ಲಿ ಈ ಸೇವೆ ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.