

ಬೀದರ್: ಸರ್ಕಾರದ ಮಹತ್ವಾಕಾಂಕ್ಷಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ದಿನಾಂಕ ನಿಗದಿಪಡಿಸಿದೆ. ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಗ್ರಾಮ ವಾಸ್ತವ್ಯ ಮಾಡುವ ಬಗ್ಗೆ ಎಲ್ಲ ಅಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಇತರ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ್ಯ ಮಾಡಲು ಮತ್ತು ಸಾರ್ವಜನಿಕ ಕುಂದುಕೊರತೆ ಸ್ವೀಕರಿಸಲು ಸರ್ಕಾರ ನಿರ್ದೇಶನ ನೀಡಿದೆ. ಇದಕ್ಕಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಗ್ರಾಮಗಳಿಗೆ ಪ್ರತಿ ತಿಂಗಳ 3ನೇ ಶನಿವಾರ ಭೇಟಿ ಮಾಡಲು ಸಮಯ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಗ್ರಾಮಗಳ ಭೇಟಿ ನೀಡಲು ತಾಲೂಕಾವಾರು ವೇಳಾಪಟ್ಟಿ ಸಿದ್ದಪಡಿಸಲಾಗಿದೆ. ನಿಗದಿಪಡಿಸಿದ ಗ್ರಾಮಕ್ಕೆ ಭೇಟಿ ನೀಡುವ ಒಂದು ವಾರದ ಮುಂಚೆ ಕಂದಾಯ ಅಧಿಕಾರಿಗಳು ಖುದ್ದಾಗಿ ಅಲ್ಲಿಗೆ ಭೇಟಿ ಕೊಡಬೇಕು. ನಿಗದಿಪಡಿಸಿರುವ ಕಾರ್ಯಸೂಚಿಗಳನ್ವಯ ಫಲಾನುಭವಿಗಳಿಂದ ಅರ್ಜಿ ಸಂಗ್ರಹಿಸಿ, ಅವುಗಳ ಮೇಲೆ ಯಾರ ಹಂತದಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಕ್ಕೆ ಭೇಟಿ ನೀಡುವ ಮುಂಚೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಿಳಿಸಿದ್ದಾರೆ.
ನಿಗದಿಪಡಿಸಿದ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅರ್ಜಿ ವಿಲೇವಾರಿಯಾಗಿರುವ ಬಗ್ಗೆ ಸಂಬಂಧಪಟ್ಟ ಫಲಾನುಭವಿಗಳಿಗೆ ತಿಳಿಸಬೇಕು. ಉಳಿದ ಅರ್ಜಿಗಳ ಮೇಲೆ ಬೇರೆ ಬೇರೆ ಹಂತದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಗ್ರಾಮ ವಾಸ್ತವ್ಯ ಸಂಬಂಧ ಸುತ್ತೋಲೆಯಲ್ಲಿ ವಿವರಿಸಿದ ಎಲ್ಲ ಅಂಶಗಳ ಬಗ್ಗೆ ಮಾಹಿತಿ ಸಿದ್ಧಪಡಿಸಿ ಗ್ರಾಮ ವಾಸ್ತವ್ಯದ ಸಮಯದಲ್ಲಿ ಹಾಜರುಪಡಿಸಬೇಕು ಎಂದು ಹೇಳಿದ್ದಾರೆ.
ಜಿಲ್ಲೆಯ ಎಲ್ಲ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮ ವಾಸ್ತವ್ಯದಲ್ಲಿ ಹಾಜರಿರಬೇಕು. ಗ್ರಾಮ ವಾಸ್ತವ್ಯ ಮಾಡುವ ತಾಲೂಕಿನ ತಹಸೀಲ್ದಾರರು ಎಲ್ಲ ಪೂರ್ವಸಿದ್ಧತೆ ಮಾಡಲು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಗ್ರಾಮ ವಾಸ್ತವ್ಯದಲ್ಲಿ ಹಾಜರು ಇರಲು ತಿಳಿಸಬೇಕು ಎಂದು ಹೇಳಿದ್ದಾರೆ.
ಅಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಜಿಲ್ಲೆಯಲ್ಲಿ ಪ್ರತಿ ತಿಂಗಳ 3ನೇ ಶನಿವಾರ ದಿನ ನಿಗದಿಪಡಿಸಲಾಗಿದೆ. ಈ ದಿನದ ಮುನ್ನ ಶುಕ್ರವಾರ ಗ್ರಾಮ ವಾಸ್ತವ್ಯ ಮಾಡಿ ಶನಿವಾರದಂದು ಅಹವಾಲು ಮತ್ತು ಸಾರ್ವಜನಿಕ ಕುಂದುಕೊರತೆಗಳ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು.| ರಾಮಚಂದ್ರನ್, ಜಿಲ್ಲಾಧಿಕಾರಿ