

ಹನೂರು: ಶೈಕ್ಷಣಿಕ ವಲಯದ ಪೆದ್ದನಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಕರ್ಯದ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು 3ನೇ ದಿನವಾದ ಬುಧವಾರವೂ ಮುಂದುವರಿದಿದ್ದು, ಸಮಸ್ಯೆ ಬಗೆಹರಿಸದಿದ್ದಲ್ಲಿ ಜಿಲ್ಲಾಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಪಾಲಕರು ನಿರ್ಧರಿಸಿದ್ದಾರೆ.
ಶಾಲೆಗೆ ಅಗತ್ಯ ಮೂಲ ಸೌಕರ್ಯ ಒದಗಿಸದ ಪರಿಣಾಮ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ನಿರ್ಧರಿಸಿದ್ದು, ಆ.11 ರಿಂದಲೂ ಮಕ್ಕಳು ಶಾಲೆಗೆ ಗೈರಾಗಿದ್ದಾರೆ. ಬಿಇಒ ಗುರುಲಿಂಗಯ್ಯ ಭೇಟಿ ನೀಡಿ ಮನವೊಲಿಸುವ ಸಂಧಾನವೂ ವಿಫಲವಾಗಿದೆ. ಜತೆಗೆ ಪ್ರತಿನಿತ್ಯ ಶಾಲೆಗೆ ಆಗಮಿಸುವ ಶಿಕ್ಷಕರು ಸಹ ಮನವರಿಕೆ ಮಾಡುತ್ತಿದ್ದರೂ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಮನಸ್ಸು ಮಾಡುತ್ತಿಲ್ಲ. ಇತ್ತ ಮಕ್ಕಳನ್ನು ಶಾಲೆಗೆ ಕಳುಹಿಸದೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಷ್ಕರಿಸಲಾಗವುದು ಎಚ್ಚರಿಸಿದ್ದಾರೆ.
ಬುಧವಾರ ಅಧಿಕಾರಿಗಳು ಯಾರು ಗ್ರಾಮಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ಬೇಸತ್ತ ಪಾಲಕರು ಸಂಜೆ ಗ್ರಾಮದ ದೇಗುಲದ ಬಳಿ ಮಕ್ಕಳೊಂದಿಗೆ ತೆರಳಿ ಚರ್ಚಿಸಿದರು. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಪಡಿಸಿ ಜಿಲ್ಲಾಡಳಿತ ಕಚೇರಿ ಮುಂಭಾಗ ಮಕ್ಕಳೊಂದಿಗೆ ತೆರಳಿ ಪ್ರತಿಭಟನೆ ನಡೆಸುವುದಾಗಿ ಪಾಲಕರು ನಿರ್ಧರಿಸಿದರು.
ಗ್ರಾಪಂ ಅಧ್ಯಕ್ಷೆ ಮುರುಗೇಶ್ವರಿ, ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್, ಉಪಾಧ್ಯಕ್ಷ ಧನಪಾಲ್, ಪಾಲಕರಾದ ಮಾದೇಶ್, ಗೋವಿಂದ, ವೆಂಕಟರಾಜು, ಕುಮಾರ್, ಮುರುಗೇಶ್ ಹಾಗೂ ಇನ್ನಿತರರು ಇದ್ದರು.