

ಹಾಸನ: ಕಳೆದ ಹಲವಾರು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಮುಖ್ಯ ಬೇಡಿಕೆಯಾದ ಕಾಯಂಗೆ ಆಗ್ರಹಿಸಿ ಡಿಸಿ ಕಚೇರಿ ಮುಂದೆ ನಡೆಸಲಾಗುತ್ತಿರುವ ಪ್ರತಿಭಟನಾ ಧರಣಿಯು 3ನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕರ ಮುಷ್ಕರದಿಂದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕಳೆದ ಒಂದು ವಾರದಿಂದ ತರಗತಿಗಳು ನಡೆದಿಲ್ಲ. ಪರೀಕ್ಷೆ ಪ್ರಾರಂಭವಾಗುವ ಸೂಚನೆ ನೀಡಿದ್ದು, ಇದು ವಿದ್ಯಾರ್ಥಿಗಳಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಳೆದ 15-20 ವರ್ಷಗಳಿಂದ ಯಾವುದೇ ಸೌಲಭ್ಯಗಳಿಲ್ಲದೆ, ಕಾಯಮಾತಿ ಇಲ್ಲದೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಮಗೆ ಬದುಕು ನಡೆಸುವುದು ದುಸ್ತರವಾಗಿದೆ. ನಾವುಗಳು ಕಾಯಮಾತಿಗೆ ಹಲವಾರು ವರ್ಷಗಳ ಹೋರಾಟ ಮಾಡಿದರೂ ಯಾವುದೇ ಶಾಶ್ವತ ಪರಿಹಾರ ನೀಡದೆ, ಕೇವಲ ತಾತ್ಕಾಲಿಕ ಪರಿಹಾರವನ್ನು ನೀಡುವ ಮೂಲಕ ನಮ್ಮ ಬದುಕುಗಳನ್ನು ಹಿಂದಿನ ಎಲ್ಲಾ ಸರ್ಕಾರಗಳು ಕಸಿದುಕೊಳ್ಳುತ್ತಾ ಬಂದಿವೆ ಎಂದರು.
ಪ್ರಸ್ತುತ ಆಡಳಿತ ಸರ್ಕಾರ ಅತಿಥಿ ಉಪನ್ಯಾಸಕರ ಕಾಯಮಾತಿಗೆ ಕಾರ್ಯಯೋಜನೆ ರೂಪಿಸಲಾಗುವುದು ಎಂದು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಸರ್ಕಾರ ರಚನೆಯಾಗಿ 6 ತಿಂಗಳು ಆಡಳಿತ ನಡೆಸಿದರೂ ಇಲ್ಲಿಯವರೆಗೆ ಯಾವುದೇ ತೀರ್ಮಾನಗಳನ್ನು ತೆಗೆದುಕೊಂಡಿರುವುದಿಲ್ಲ. ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಕಾಯಂಮಾತಿ ಕಾರ್ಯ ಯೋಜನೆಯನ್ನು ರೂಪಿಸಲಾಗುತ್ತದೆಂದು ಘೋಷಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಕಾಲೇಜು ಶಿಕ್ಷಣ ಇಲಾಖೆ, ಹಾಗೂ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮನವಿ ನೀಡುತ್ತೇವೆ ಎಂದು ಅತಿಥಿ ಉಪನ್ಯಾಸಕರು ಹೇಳಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಸುನೀತಾ, ಸುರೇಶ್, ಮಹಮ್ಮದ್ ಆರೀಫ್ ಕಾರ್ಲೇ, ಅರಸೀಹಳ್ಳಿ ಮಂಜುನಾಥ್, ಧರಣೇಂದ್ರ, ಚೇತನ್, ಕುಮಾರ್, ಮಂಜೇಗೌಡ ಇತರರು ಉಪಸ್ಥಿತರಿದ್ದರು.