

ಬೆಳಗಾವಿ: ಒಂದು ವಾರದಿಂದ ಕರೊನಾ 3ನೇ ಅಲೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮಕ್ಕಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಡಾ.ದೇವಿಪ್ರಸಾದ ಶೆಟ್ಟಿ ನೇತೃತ್ವದಲ್ಲಿ ಚಿಕಿತ್ಸೆಗಾಗಿ ಅಗತ್ಯ ತಯಾರಿ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಬಿ. ಝಿರಲಿ ಹೇಳಿದರು.
ಇಲ್ಲಿನ ಸದಾಶಿವ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಕಾೃನಿಂಗ್‌ಗೆ ಸರ್ಕಾರ 2,500 ರೂ. ದರ ನಿಗದಿಪಡಿಸಿದ್ದರೂ ಕೆಲ ಆಸ್ಪತ್ರೆಯವರು 5,000 ರೂ. ವರೆಗೆ ಬಿಲ್ ಮಾಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕುತ್ತೇವೆ ಎಂದರು.
ಕರೊನಾ ಮುಕ್ತ ಬೂತ್: ವಿಜ್ಞಾನಕ್ಕೂ ಮೀರಿ ಕರೊನಾ ಮುಂದೆ ಹೋಗಿದೆ. ಆದರೂ ನಮ್ಮ ವಿಜ್ಞಾನಿಗಳು ವ್ಯಾಕ್ಸಿನ್ ಕಂಡು ಹಿಡಿದು, ಜನರ ಪ್ರಾಣ ಉಳಿಸುತ್ತಿದ್ದಾರೆ. ಗಡಿಜಿಲ್ಲೆ ಬೆಳಗಾವಿಯಲ್ಲಿ ಸೋಂಕು ಹೆಚ್ಚುತ್ತಿದೆ. ಹಳ್ಳಿ-ಹಳ್ಳಿಗಳಿಗೂ ದಾಂಗುಡಿ ಇಡುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯ ವಿವಿಧ ಅಂಗ ಸಂಸ್ಥೆಗಳು ‘ಸೇವಾ ಹೀ ಸಂಘಟನೆ’ ಎಂಬ ತತ್ತ್ವದಡಿ ಕೆಲಸ ಮಾಡುತ್ತಿವೆ. ಜತೆಗೆ ಕರೊನಾ ಮುಕ್ತ ಬೂತ್ ಮಾಡುವುದಕ್ಕೆ ಬಿಜೆಪಿ ಕಾರ್ಯಕರ್ತರೂ ಕೆಲಸ ಮಾಡುತ್ತಿದ್ದಾರೆ ಎಂದರು.
ಆಹಾರ ಕಿಟ್ ಹಂಚಿಕೆ: ಕರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಹಳ್ಳಿಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಅನುಸರಿಸಬೇಕಿರುವ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕಿದೆ.ಪಕ್ಷದ ವತಿಯಿಂದ ಜಿಲ್ಲಾದ್ಯಂತ 2.5 ಲಕ್ಷ ಆಹಾರ ಕಿಟ್ ಹಂಚಲಾಗಿದೆ. ಜತೆಗೆ ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆಯನ್ನೂ ಪಕ್ಷದ ಅಂಗ ಸಂಸ್ಥೆಗಳು ಮಾಡುತ್ತಿವೆ ಎಂದು ತಿಳಿಸಿದರು. ಸಂಸದೆ ಮಂಗಲ ಅಂಗಡಿ, ಮಾಜಿ ಶಾಸಕ ಸಂಜಯ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.
ವ್ಯಾಕ್ಸಿನ್ ಖರೀದಿಗೆ ರಾಜ್ಯ ಕಾಂಗ್ರೆಸ್‌ನಿಂದ ಸುಮಾರು 100 ಕೋಟಿ ರೂ. ನೀಡಲಾಗುವುದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಹೇಳಿದ್ದರು. ಆದರೆ, ಅವರು ತಮ್ಮ ಸ್ವಂತ ಹಣದಿಂದ ನೀಡುತ್ತಿಲ್ಲ. ಶಾಸಕರ ಅನುದಾನದಿಂದ ಬಂದ ಹಣವನ್ನೇ ಕೊಡುತ್ತಿದ್ದಾರೆ. ಸ್ವಂತ ಹಣ ಕೊಟ್ಟರೆ ನಮಗೂ ಸಂತೋಷವಾಗುತ್ತಿತ್ತು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ, ಈ ಭಾಗದ ಕಾಂಗ್ರೆಸ್ ನಾಯಕ ಪ್ರಕಾಶ ಹುಕ್ಕೇರಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂದು ಝಿರಲಿ ಹೇಳಿದರು.
ಹಿರೇಬಾಗೇವಾಡಿ ಸಮೀಪದ ಮರಿಕಟ್ಟಿ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳನ್ನು ಮೇ 21ರಿಂದ 28ರ ವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ಮರಿಕಟ್ಟಿ, ಗಣಿಕೊಪ್ಪ, ಶೀಗಿಹಳ್ಳಿ, ಪುಲಾರಕೊಪ್ಪ ಹಾಗೂ ನಾವಲಗಟ್ಟಿ ಗ್ರಾಮ ಸೀಲ್‌ಡೌನ್ ಆಗಲಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಆಸ್ಪತ್ರೆ ಮತ್ತು ಮೆಡಿಕಲ್ ಕಾರ್ಯ ನಿರ್ವಹಿಸಲಿವೆ. ಹಾಲಿನ ಅಂಗಡಿ ಬೆಳಗ್ಗೆ 6 ರಿಂದ 8ರ ವರೆಗೆ ಕಾರ್ಯ ನಿರ್ವಹಿಸಲಿವೆ. ಉಳಿದಂತೆ ಎಲ್ಲ ಅಂಗಡಿಗಳೂ ಒಂದು ವಾರ ಕಾಲ ಬಂದ್ ಇರಲಿವೆ. ಜನರ ಆರೋಗ್ಯ ದೃಷ್ಟಿಯಿಂದ ಸಂಪೂರ್ಣ ಲಾಕ್‌ಡೌನ್ ನಿರ್ಧಾರ ಕೈಗೊಳ್ಳಲಾಗಿದ್ದು, ಎಲ್ಲರೂ ಸಹಕರಿಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ, ಗ್ರಾಪಂ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.