ಮೂರನೇ ಹಂತದ ಕರೊನಾ ವ್ಯಾಕ್ಸಿನ್ ಆರಂಭ: ಡಿಸಿ ಕೆ.ಎನ್.ರಮೇಶ್

DC K N Ramesh
????????????????????????????????????
Published on

ಚಿಕ್ಕಮಗಳೂರು: ಮೂರನೇಯ ಹಂತದ ಕರೊನಾ ಲಸಿಕೆ ಕಾರ್ಯಕ್ರಮ ಸೋಮವಾರ ಆರಂಭಗೊಂಡಿದ್ದು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಮೊದಲು ಬಂದವರಿಗೆ ಸರದಿಯಲ್ಲಿ ಲಸಿಕೆ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಸ್ಪತ್ರೆಗಳಲ್ಲಿ ಸ್ಥಳಾವಕಾಶ, ಕೋಲ್ಡ್ ಸ್ಟೋರೇಜ್ ವ್ಯವಸ್ಥೆ, ಲಸಿಕಾ ಸಿಬ್ಬಂದಿ, ಅಡ್ಡ ಪರಿಣಾಮ ನಿರ್ವಹಣಾ ವ್ಯವಸ್ಥೆ, ಕೇಂದ್ರ ಸರ್ಕಾರದ ಹಲವು ಮಾನದಂಡಗಳ ಪ್ರಕಾರ ಖಾಸಗಿ ಆಸ್ಪತ್ರೆಗಳನ್ನು ಲಸಿಕಾ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲು ಮಾಡಿರುವುದು ಗೊತ್ತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸುತ್ತಿನಲ್ಲಿ ಯಾರ್ಯಾರಿಗೆ ಲಸಿಕೆ?:

1962ರ ಜ.1ಕ್ಕಿಂತ ಮೊದಲು ಜನಿಸಿದ ಎಲ್ಲರೂ ಈ ಸುತ್ತಿನಲ್ಲಿ ಲಸಿಕೆ ಪಡೆಯಬೇಕು. ಅಲ್ಲದೆ ಮೊದಲ ಹಾಗೂ ಎರಡನೇ ಹಂತದಲ್ಲಿ ಬಿಟ್ಟುಹೋಗಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗುತ್ತದೆ. 45ರಿಂದ 59 ವರ್ಷದವರು, ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಇರುವವರು ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ತಂದು ಲಸಿಕೆ ಪಡೆದುಕೊಳ್ಳಬಹುದು. ಮಧುಮೇಹ ಉಳ್ಳವರು ಲಸಿಕೆ ಪಡೆಯಲು ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ 250 ರೂ. ಶುಲ್ಕ:

ಜಿಲ್ಲೆಯ ಕಡೂರು, ತರೀಕೆರೆ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಾಗುವುದು. ಚಿಕ್ಕಮಗಳೂರು ನಗರದ ಕೆಆರ್‍ಎಸ್ ಮತ್ತು ಹೋಲಿಕ್ರಾಸ್ ಆಸ್ಪತ್ರೆಗಳಲ್ಲಿ ತಲಾ 250 ರೂ. ಶುಲ್ಕ ಪಾವತಿಸಿ ಲಸಿಕೆ ಹಾಕಿಸಿಕೊಳ್ಳಬಹುದು. ಜಿಲ್ಲಾಸ್ಪತ್ರೆಯಲ್ಲೂ ಲಸಿಕೆ ನೀಡುವ ಕಾರ್ಯ ಶೀಘ್ರ ಆರಂಭವಾಗಲಿದೆ. ಹಂತ ಹಂತವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಮೂಲಕ ಲಸಿಕೆ ಕಾರ್ಯವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ಸಂಗ್ರಹಿಸುವ 250 ರೂ. ಶುಲ್ಕದಲ್ಲಿ 100 ರೂ. ಅನ್ನು ಕೇಂದ್ರ ಸರ್ಕಾರದ ನಿರ್ದಿಷ್ಟ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಉಳಿದದ್ದನ್ನು ಆಸ್ಪತ್ರೆ ವೆಚ್ಚಕ್ಕೆ ಉಳಿಸಿಕೊಳ್ಳಬಹುದು. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಲಸಿಕೆಗಳನ್ನು ಮಾತ್ರ ಸರಬರಾಜು ಮಾಡಲಾಗುವುದು. ಉಳಿದಂತೆ ಎಲ್ಲ ವ್ಯವಸ್ಥೆಯನ್ನು ಆಯಾ ಆಸ್ಪತ್ರೆಗಳೇ ಮಾಡಿಕೊಳ್ಳಬೇಕು ಎಂದರು.

ಹೆಸರು ನೋಂದಣಿ ಹೇಗೆ?:

ಲಸಿಕೆ ಪಡೆಯುವವರು ಮೂರು ವಿಧದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಕೋವಿಡ್ 2.0 ವೆಬ್ ಪೋರ್ಟಲ್‍ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬೇಕು. ಲಸಿಕಾ ಕೇಂದ್ರಕ್ಕೆ ತೆರಳಿಯೂ ನೋಂದಾಯಿಸಿಕೊಳ್ಳಬಹುದು. ಆಶಾ ಮತ್ತು ಸ್ವಯಂ ಸೇವಕ ಸಂಘಗಳು ತಂಡವಾಗಿ ಕರೆತಂದು ನೋಂದಾಯಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ನೋಂದಣಿಗೆ ಆಧಾರ್, ಮತದಾರರ ಗುರುತಿನ ಪತ್ರ ಅಥವಾ ಭಾವಚಿತ್ರ ಸಹಿತ ಯಾವುದಾದರೂ ಗುರುತಿನ ಪತ್ರವನ್ನು ಒದಗಿಸಬೇಕು ಎಂದು ತಿಳಿಸಿದರು. ಒಂದು ಮೊಬೈಲ್‍ನಲ್ಲಿ ಕನಿಷ್ಠ ನಾಲ್ವರು ಹೆಸರು ನೋಂದಾಯಿಸಬಹುದು. ಆದರೆ ಅವರ ವೈಯಕ್ತಿಕ ಗುರುತಿನ ಚೀಟಿ ಮಾತ್ರ ಬೇರೆ ಬೇರೆ ಇರಬೇಕಾಗುತ್ತದೆ. ಮೊದಲ ಬಾರಿ ಲಸಿಕೆ ಪಡೆದರೆ ಅಲ್ಲಿಂದ 29 ದಿನಗಳ ನಂತರ ಎರಡನೇ ಲಸಿಕೆ ಪಡೆದುಕೊಳ್ಳಬಹುದು. ಎರಡನೇ ಬಾರಿ ಲಸಿಕೆ ಪಡೆಯಲು ನೋಂದಣಿಯ ಅಗತ್ಯವಿಲ್ಲ. ಬದಲಾಗಿ ಫಲಾನುಭವಿಗೆ ಸೂಚನೆ ಬರುತ್ತದೆ ಎಂದರು.

ವಿಶ್ವಾಸ ಮೂಡಿಸಿದ ಪ್ರಧಾನಿ:

ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮದ ಭೀತಿ ಇಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಮೂರನೇಯ ಹಂತದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಲಸಿಕೆ ಬಗ್ಗೆ ವಿಶ್ವಾಸ ಮೂಡಿಸಿದ್ದಾರೆ. ಜಿಲ್ಲಾದ್ಯಂತ ಮೊದಲೆರಡು ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಶೇ.80ರಷ್ಟು ಆರೋಗ್ಯ ಕಾರ್ಯಕರ್ತರು ಹಾಗೂ ಶೇ.74 ರಷ್ಟು ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ ಎಂದು ಅವರು ಹೇಳಿದರು. ಮೊದಲ ಎರಡು ಹಂತದಲ್ಲಿ ಜಿಲ್ಲಾಧಿಕಾರಿ ಮತ್ತಿತರ ಅಧಿಕಾರಿಗಳು, ಆರೋಗ್ಯ ಇಲಾಖೆಯ ಕಾರ್ಯಕರ್ತರು ಹಾಗೂ ಮುಂಚೂಣಿಯ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ. ಯಾರಲ್ಲೂ ಅಡ್ಡ ಪರಿಣಾಮ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಲಸಿಕೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡರು.

ಜಿಪಂ ಸಿಇಒ ಎಸ್.ಪೂವಿತಾ ಮಾತನಾಡಿ, ದಿನವಹಿ ಒಂದು ಆಸ್ಪತ್ರೆಯಲ್ಲಿ 200 ಜನರಂತೆ ಜಿಲ್ಲೆಯಲ್ಲಿ 1600 ಮಂದಿಗೆ ಲಸಿಕೆ ಹಾಕಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ವಾರದ ಎಲ್ಲ ದಿನಗಳಲ್ಲಿ ಲಸಿಕೆ ಪಡೆಯಬಹುದು ಎಂದು ತಿಳಿಸಿದರು. ಡಿಎಚ್‍ಒ ಡಾ. ಎಸ್.ಎನ್.ಉಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net