

ಮಂಜುನಾಥ ತಿಮ್ಮಯ್ಯ ಮೈಸೂರು
ವಾಹನ ಚಾಲಕರೇ, ಎಚ್ಚರ..! ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿ ತಪ್ಪಿಸಿಕೊಳ್ಳಲಾಗಲ್ಲ. ಏಕೆಂದರೆ, 3ನೇ ಕಣ್ಣು ಸದಾ ನಿಗಾ ಇಟ್ಟಿದೆ. ಅದರಿಂದ ಬಚಾವ್ ಆಗಲಾಗಲ್ಲ.
ನಗರದ ಎಲ್ಲ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ‘ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ’ (ಐಟಿಎಂಎಸ್) ಇದೀಗ 3ನೇ ಕಣ್ಣಾಗಿ ಕಾರ್ಯನಿರ್ವಹಿಸುತ್ತಿದೆ. ಆಧುನಿಕ ಸುಧಾರಿತ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕ್ಯಾಮೆರಾಗಳು ಪೊಲೀಸರಿಲ್ಲದೆ ಸಂಚಾರ ನಿಯಮ ಉಲ್ಲಂಘನೆಯ ದೃಶ್ಯಾವಳಿಯನ್ನು ಸೆರೆ ಹಿಡಿಯುತ್ತವೆ.
ಸಿಸಿ ಕ್ಯಾಮೆರಾಗಿಂತ ಇದು 10 ಪಟ್ಟು ಆಧುನಿಕ ಕಾರ್ಯಕ್ಷಮತೆ ಹೊಂದಿದ್ದು, ಉಲ್ಲಂಘನೆ ಮಾಡುವ ವಾಹನಗಳ ಸಂಖ್ಯೆ ನಿಖರವಾಗಿ ಪತ್ತೆ ಹಚ್ಚುತ್ತದೆ. ಸ್ವಯಂ ಚಾಲಿತವಾಗಿ ದಂಡ ವಿಧಿಸುತ್ತದೆ. ಇದು ಆಯಾಯ ವಾಹನ ಸಂಖ್ಯೆಯ ಹೆಸರಿನಲ್ಲಿ ಸಂಚಾರ ಉಲ್ಲಂಘನೆಯ ಪ್ರಕರಣವನ್ನು ಸುಲಭ, ವೇಗವಾಗಿ ದಾಖಲಾಗುತ್ತದೆ. ಹೀಗಾಗಿ, ಎಷ್ಟು ಸಲ ನಿಯಮ ಉಲ್ಲಂಘನೆ ಮಾಡುತ್ತಿರೋ ಹಾಗೆಯೇ ದಂಡದ ಪ್ರಮಾಣವೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು.
ಬೆಂಗಳೂರಿನಿಂದ ಬಂದ ಪ್ರವಾಸಿಗರೊಬ್ಬರು ತಮ್ಮ ಕಾರಿನಲ್ಲಿ ಮೈಸೂರು ನಗರವನ್ನು ಒಂದು ಸಲ ಪ್ರದಕ್ಷಣೆ ಹಾಕಿದ್ದಾರೆ. ಮಾರ್ಗಮಧ್ಯದಲ್ಲಿ ಸಂಚಾರಿ ಪೊಲೀಸರು ತಪಾಸಣೆ ಮಾಡಿದ್ದಾರೆ. ಒಂದೇ ದಿನದಲ್ಲಿ ಬರೋಬ್ಬರಿ 5,500 ರೂ. ದಂಡ ಬಿದ್ದಿದೆ. ಇದರಿಂದ ಚಾಲಕ ಕಕ್ಕಾಬಿಕ್ಕಿಯಾಗಿದ್ದಾರೆ.
ಯಾವ ಸಮಯದಲ್ಲಿ, ಯಾವ ಸ್ಥಳದಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ಪ್ರದರ್ಶಿಸುತ್ತಿದ್ದಂತೆ ಅವರು ಇನ್ನಷ್ಟು ತೆಪ್ಪಗಾಗಿದ್ದಾರೆ. ದಂಡವನ್ನು ತೆತ್ತು ತೆರಳಿದ್ದಾರೆ. ಇದು ಇವರೊಬ್ಬರ ಅವಾಂತರವಲ್ಲ. ಬಹಳಷ್ಟು ವಾಹನ ಸಂಚಾರರು ಹೀಗೆ ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟಿದ್ದಾರೆ.
ಈ ವ್ಯವಸ್ಥೆ ಜಾರಿಯಾದ ಬಳಿಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ತ್ವರಿತಗತಿಯಲ್ಲಿ ಪತ್ತೆಯಾಗುತ್ತಿವೆ. ಆದರೆ, ಬಹಳಷ್ಟು ಸವಾರರಿಗೆ ಈ ಕುರಿತು ಅರಿವು ಇಲ್ಲ. ಆದ್ದರಿಂದ ಮಾಡಿದ ತಪ್ಪನ್ನು ಮೇಲಿಂದ ಮೇಲೆ ಪುನರಾವರ್ತನೆ ಮಾಡುತ್ತಿದ್ದಾರೆ.
ಸಂಚಾರ ಪೊಲೀಸರು ಇಲ್ಲ, ಸಿಸಿ ಕ್ಯಾಮೆರಾ ಕಣ್ಣು ತಪ್ಪಿಸಿಕೊಂಡು ಹೇಗೆ ವಾಹನ ಓಡಿಸಿಕೊಂಡು ಹೋದರೂ ನಡೆಯುತ್ತದೆ ಎಂಬ ಮನೋಭಾವ ಬಹಳಷ್ಟು ಚಾಲಕರದ್ದು. ಈಗಲೂ ಬಹಳಷ್ಟು ಕಾರ್ ಸವಾರರು ಸೀಟ್ ಬೆಲ್ಟ್ ಧರಿಸಲ್ಲ. ಬೈಕ್ ಓಡಿಸುವಾಗ ಹೆಲ್ಮಟ್ ಹಾಕಲ್ಲ. ಟ್ರಾಫಿಕ್ ಸಿಗ್ನಲ್ ಜಂಪ್, ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಕೆ, ಅತಿವೇಗದ ಚಾಲನೆ, ಕೆಂಪು ದೀಪ ಉಲ್ಲಂಘನೆ, ಸ್ಟಾಪ್ ಲೇನ್ ಉಲ್ಲಂಘನೆ, ತ್ರಿಬಲ್ ರೈಡಿಂಗ್.. ಹೀಗೆ ವಿವಿಧ ಸಂಚಾರ ನಿಯಮಗಳನ್ನು ಎಗ್ಗಿಲ್ಲದೇ ಗಾಳಿಗೆ ತೂರಿ ಮುಂದೆ ಸಾಗುತ್ತಿದ್ದಾರೆ. ಇದನ್ನು ಯಾರೂ ಗಮನಿಸಿಲ್ಲ ಎಂದು ಬಹಳಷ್ಟು ಚಾಲಕರು ತಿಳಿದುಕೊಂಡಿದ್ದಾರೆ. ಆದರೆ, ಐಟಿಎಂಎಸ್ ವ್ಯವಸ್ಥೆ ಕಣ್ಗಾವಲು ಇದನ್ನೆಲ್ಲ ಗಮನಿಸಿ ದಾಖಲೆ ಸಹಿತವಾಗಿ ದಾಖಲು ಮಾಡಿಕೊಳ್ಳುತ್ತಿದೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ಝಿಬ್ರಾ ಕ್ರಾಸ್ ಮೇಲೆ ವಾಹನ ನಿಲ್ಲಿಸಿದ್ದರೂ ಅದನ್ನೂ ಇದು ನಿಖರವಾಗಿ ಗಮನಿಸಿ ಸೆರೆಹಿಡಿಯುತ್ತದೆ.
ನಗರ ವ್ಯಾಪ್ತಿಯಲ್ಲಿ ಅಷ್ಟೇ ಅಲ್ಲ, ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿರುವ ಎಐ ಕ್ಯಾಮೆರಾಗಳು ವಾಹನಗಳ ಚಲನ ವಲನಗಳ ಮೇಲೆ ಕಣ್ಣಿಟ್ಟಿದೆ. ನಗರದಾಚೆ ಯಾರೂ ಗಮನಿಸುವುದಿಲ್ಲ ಎಂಬ ಭಾವವೂ ಬೇಡ.
ಎಐ ಕ್ಯಾಮೆರಾಗಳು ದಾಖಲಿಸುವ ನಿಯಮ ಉಲ್ಲಂಘನೆ ಮಾಹಿತಿಯನ್ನು ಆಧರಿಸಿಯೇ ಪೊಲೀಸರು ಕ್ಷಿಪ್ರಗತಿಯಲ್ಲಿ ದಂಡ ವಸೂಲು ಮಾಡುತ್ತಿದ್ದಾರೆ. ಆದ್ದರಿಂದ ಇದರಿಂದ ತಪ್ಪಿಸಿಕೊಳ್ಳಲಾಗಲ್ಲ. ಆದ್ದರಿಂದ ಸವಾರರು ಈ ಕುರಿತು ಜಾಗೃತರಾಗಿ. ಸಂಚಾರ ನಿಯಮ ಪಾಲನೆ ಮಾಡಿ. ಈ ಮೂಲಕ ದಂಡ ಪಾವತಿಯಿಂದಲೂ ತಪ್ಪಿಸಿಕೊಳ್ಳಿ….! ಇದು ನಗರ ಪೊಲೀಸರು ಕಿವಿಮಾತು.
ಸಂಚಾರ ನಿರ್ವಹಣೆಗಾಗಿಯೇ ಮೈಸೂರು ನಗರದ ಪ್ರಮುಖ ವೃತ್ತಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತವಾಗಿ ಕೆಲಸ ಮಾಡುವ 259 ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಇದರ ಸಹಾಯದ ಮೂಲಕ ಐಟಿಎಂಎಸ್ ಕೆಲಸ ಮಾಡುತ್ತಿದ್ದು, ಈ ವ್ಯವಸ್ಥೆ ಈಗಾಗಲೇ ಬೆಂಗಳೂರು ನಗರದಲ್ಲಿದ್ದು, ಅದನ್ನು ಇದೀಗ ಮೈಸೂರು ನಗರ, ಜಿಲ್ಲಾ ವ್ಯಾಪ್ತಿಯಲ್ಲೂ ಈ ಆಧುನಿಕ ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವವರು ಹೆಚ್ಚಾಗಿದ್ದರಿಂದ ಈ ವ್ಯವಸ್ಥೆ ಜಾರಿ ತರುವ ಮೂಲಕ ತಹಬದ್ದಿಗೆ ತರಲು ಪೊಲೀಸ್ ಇಲಾಖೆ ಮುಂದಾಗಿದೆ.
ಸಂಚಾರ ನಿಯಮ ಉಲ್ಲಂಘಿಸುವವರ ಗುಣಮಟ್ಟದ ಚಿತ್ರವನ್ನು ಸೆರೆ ಹಿಡಿಯುವುದು ಎಐ ಕ್ಯಾಮೆರಾದ ವಿಶೇಷತೆ. ಅವುಗಳನ್ನು ನಿಯಂತ್ರಿಸುವುದಕ್ಕಾಗಿಯೇ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಂಟ್ರೋಲ್ ರೂಂ ಇದೆ. ಅಲ್ಲಿ ಬೃಹತ್ ಎಲ್‌ಇಡಿ ಪರದೆ ಮೂಲಕ ನಗರ ಇಡೀ ಸಂಚಾರ ವ್ಯವಸ್ಥೆ, ಟಾಫ್ರಿಕ್ ಸಿಗ್ನಲ್, ಪ್ರಮುಖ ರಸ್ತೆಗಳ ಸ್ಥಿತಿಗತಿಯನ್ನು ದಿನದ 24 ಗಂಟೆಯೂ ವೀಕ್ಷಣೆ ಮಾಡಲಾಗುತ್ತದೆ. ಈ ವ್ಯವಸ್ಥೆ ನಿರ್ವಹಣೆಗಾಗಿ ಅಂದಾಜು 30 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ನಗರದಲ್ಲಿ ಈ ಹಿಂದೆ ಅಂದಾಜು 110 ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ, ಅವುಗಳಲ್ಲಿ ಎಐ ತಂತ್ರಜ್ಞಾನ ವ್ಯವಸ್ಥೆ ಇರಲಿಲ್ಲ. ವಾಹನ ಸಂಖ್ಯೆ ಸ್ಪಷ್ಟವಾಗಿ ಗುರುತಿಸಲಾಗುತ್ತಿರಲಿಲ್ಲ. ಹೀಗಾಗಿ, ಎಐ ಕ್ಯಾಮೆರಾಗಳ ಹೆಚ್ಚು ಪರಿಣಾಮಕಾರಿಯಾಗಿ, ಬಳಕೆದಾಯಕವಾಗಿವೆ. ಪೊಲೀಸರ ಸಹಾಯವಿಲ್ಲದೆ ಸಂಚಾರ ಉಲ್ಲಂಘನೆಯನ್ನು ಐಟಿಎಂಎಸ್ ಪತ್ತೆ ಹಚ್ಚುವುದರಿಂದ ವಾಹನ ಸಂಚಾರ ನಿರ್ವಹಣೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಬಹುದು. ಈ ಕ್ಯಾಮೆರಾಗಳು ದಿನದ 24 ಗಂಟೆ ವಾರದ 7 ದಿನವೂ ರೆಕಾರ್ಡ್ ಮಾಡುತ್ತವೆ. ಇವುಗಳು ಸ್ವಯಂಚಾಲಿತವಾಗಿದೆ. ಇದು ನಗರದಲ್ಲಿ ಸಂಚಾರ ಶಿಸ್ತು ಹೆಚ್ಚಿಸಲಿದೆ. ಜತೆಗೆ, ಸಂಚಾರ ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಬಳಸಬಹುದಾದ ಬಹಳಷ್ಟು ಮಾನವಶಕ್ತಿಯನ್ನು ಉಳಿಸುತ್ತದೆ.
ಸಂಚಾರ ನಿರ್ವಹಣೆಯಷ್ಟೇ ಅಲ್ಲ, ಅಪರಾಧ ಪ್ರಕರಣಗಳ ಆರೋಪಿಗಳ ಗುರುತು ಪತ್ತೆ ಹಚ್ಚಲು ಇದು ನೆರವು ಆಗುತ್ತಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಬಳಕೆ ಮಾಡಿದ ವಾಹನಗಳ ಸಂಖ್ಯೆ, ಅವರು ಧರಿಸಿದ ಬಟ್ಟೆ, ಅವರ ಬಳಿ ಇರುವ ವಸ್ತುಗಳ ಸೇರಿದಂತೆ ಇನ್ನಿತರ ಮಾಹಿತಿಯನ್ನೂ ಸೆರೆಹಿಡಿಯುತ್ತದೆ. ಇದನ್ನು ಸಮಗ್ರವಾಗಿ ಪರಿಶೀಲನೆ ಮಾಡಿದಾಗ ಸುಳಿವುಗಳು ದೊರೆಯುತ್ತವೆ. ಪ್ರಕರಣ ಭೇದಿಸಲು ಸುಲಭವಾಗುತ್ತದೆ ಎಂದು ಪೊಲೀಸರೊಬ್ಬರು ತಿಳಿಸಿದರು.