ವರ್ಷ ಕಳೆದರೂ ಪೂರ್ಣವಾಗಿಲ್ಲ ರಸ್ತೆ

web 2
Published on

ಕಳಸ: ಆರು ಕಿ.ಮೀ. ರಸ್ತೆ ಕಾಮಗಾರಿಗೆ 6.73 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಗುತ್ತಿಗೆದಾರ ಕಳೆದೊಂದು ವರ್ಷದಲ್ಲಿ ಕೇವಲ ಮೂರು ಕಿ.ಮೀ. ರಸ್ತೆ ಡಾಂಬರೀಕರಣ ನಡೆಸಿ ಉಳಿದ ರಸ್ತೆಗೆ ಜಲ್ಲಿ ಹಾಕಿ ಕೈಬಿಟ್ಟಿದ್ದಾರೆ.

ವರ್ಷ ಕಳೆದರೂ ಜಲ್ಲಿ ಹಾಕಿದ ರಸ್ತೆಯನ್ನು ಡಾಂಬರೀಕರಣ ಮಾಡಿಲ್ಲ. ಇದರಿಂದ ಗ್ರಾಮದ ಜನ, ವಾಹನ ಸವಾರರು ಧೂಳು ಸೇವಿಸಿ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಹೊರನಾಡು ಅನ್ನಪೂರ್ಣೆಶ್ವರಿ ದೇವಾಲಯದಿಂದ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊರನಾಡು ಸಮೀಪದ ಬಲಿಗೆ ಗ್ರಾಮದವರೆಗೆ ಆರು ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ರಾಜ್ಯ ಸರ್ಕಾರ ಕಳೆದ ವರ್ಷ ಅನುದಾನ ಮಂಜೂರು ಮಾಡಿದೆ. ಗುತ್ತಿಗೆದಾರ 2019ರ ಮಾರ್ಚ್​ನಲ್ಲಿ ಕಾಮಗಾರಿ ಆರಂಭಿಸಿದ್ದರು. 2020ರ ಮಾರ್ಚ್​ಗೆ ಅನುದಾನ ಬಿಡುಗಡೆಯಾಗಿ ಮತ್ತು ಕಾಮಗಾರಿ ಆರಂಭಿಸಿ ಒಂದು ವರ್ಷವಾಗಿದೆ. ಆದರೆ ಗುತ್ತಿಗೆದಾರ ಕೇವಲ ಮೂರು ಕಿ.ಮೀ. ರಸ್ತೆಗೆ ಡಾಂಬರೀಕರಣ ಮಾಡಿದ್ದಾರೆ. ಇದು ಕೂಡ ಕಳಪೆಯಾಗಿದ್ದು, ಡಾಂಬರ್ ಕಿತ್ತು ಬರುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.

ಈ ರಸ್ತೆಯಲ್ಲಿ ಕಡಿದಾದ ತಿರುವುಗಳಿವೆ. ಪ್ರತಿದಿನ ಯಾತ್ರಾರ್ಥಿಗಳು ಇದೇ ರಸ್ತೆಯಲ್ಲಿ ಹೊರನಾಡಿನಿಂದ ಶೃಂಗೇರಿಗೆ ಸಂಚರಿಸುತ್ತಾರೆ. ಜಲ್ಲಿ ಹಾಕಿ ಡಾಂಬರೀಕರಣ ನಡೆಸದಿರುವುದರಿಂದ ವಾಹನ ಸವಾರರು, ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆ ಸಮಸ್ಯೆ ಬಗ್ಗೆ ಶಾಸಕರು, ಇಂಜಿನಿಯರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗುತ್ತಿಗೆದಾರ ದೂರವಾಣಿ ಕರೆಗೂ ಸಿಗುತ್ತಿಲ್ಲ.

ಹೊರನಾಡು, ಕಳಸ, ಶೃಂಗೇರಿ ಪಟ್ಟಣಗಳ ಸಂಪರ್ಕಕ್ಕೆ ಏಳೆಂಟು ಕುಗ್ರಾಮಗಳ ಜನ ಇದೇ ಮಾರ್ಗವನ್ನು ಅವಲಂಬಿಸಿವೆ. ರಸ್ತೆ ನಿರ್ವಣಕ್ಕೆ ಮುಂದಾದ ಗುತ್ತಿಗೆದಾರ ಅರ್ಧ ಕೆಲಸ ಮಾತ್ರ ಮಾಡಿದ್ದಾರೆ.

ಒಂದು ವರ್ಷದಿಂದ ಜಲ್ಲಿ ಕಲ್ಲು ರಸ್ತೆಯ ಮೇಲೆ ಸರ್ಕಸ್ ಮಾಡುತ್ತ ವಾಹನ ಓಡಿಸಿರುವ ಜನ ಹೈರಾಣಾಗಿದ್ದಾರೆ. ಗುತ್ತಿಗೆದಾರ ರಸ್ತೆಗೆ ಜಲ್ಲಿ ಹಾಕಿ 15 ದಿನ ಬಿಟ್ಟು ಬರ್ತೀನಿ ಎಂದು ಹೋದವರು ಈವರೆಗೂ ಬಂದಿಲ್ಲ ಎಂದು ಗ್ರಾಮಸ್ಥರು ದೂರಿದರು.

ರಸ್ತೆಗೆ ಜಲ್ಲಿ ಹಾಕಿ ಹಾಗೇ ಬಿಟ್ಟಿದ್ದರಿಂದ ರಸ್ತೆ ಸರಿಯಿಲ್ಲ ಎಂಬ ಕಾರಣಕ್ಕೆ ಬಸ್ ಸಂಚಾರ ನಿಲ್ಲಿಸಲಾಗಿದೆ. ಗ್ರಾಮಸ್ಥರು, ವಿದ್ಯಾರ್ಥಿಗಳು ಆಟೊದಲ್ಲಿ ಓಡಾಡುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಜಲ್ಲಿ ರಸ್ತೆಯಲ್ಲಿ ನಿಯಂತ್ರಣ ಸಾಧಿಸಲಾಗದೆ ಎದ್ದುಬಿದ್ದು ಹೋಗುವಂತಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಈಗ ರಜೆ ಸಿಕ್ಕಿದೆ. ಆದರೆ ಕೆಲ ದಿನಗಳ ಹಿಂದೆ ಪಾಲಕರೇ ತಮ್ಮ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಬಿಡುವಂತಹ ಪರಿಸ್ಥಿತಿ ಎದುರಾಗಿತ್ತು. ಸ್ಥಳೀಯ ಶಾಸಕರು, ಅಧಿಕಾರಿಗಳು ತಕ್ಷಣ ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ಗುಣಮಟ್ಟದ ರಸ್ತೆ ಕಾಮಗಾರಿ ನಡೆಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕಿದೆ.

ಈ ರಸ್ತೆ ಕಾಮಗಾರಿ ವಿಳಂಬದ ಬಗ್ಗೆ ಜನ ಸಂಪರ್ಕ ಸಭೆಯಲ್ಲಿ ಧ್ವನಿ ಎತ್ತಿದ್ದೆ. ರಸ್ತೆ ಆಸುಪಾಸು ಕೆಲ ತೊಂದರೆಗಳಿದ್ದವು. ಅದನ್ನು ನಿವಾರಿಸಿದ್ದೇವೆ. ಕೂಡಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಆಗ ಪಿಡಬ್ಲ್ಯುಡಿ ಇಂಜಿನಿಯರ್​ಗಳು ಹೇಳಿದರು. ಇದಾಗಿ ಒಂದು ತಿಂಗಳು ಕಳೆದರೂ ಕಾಮಗಾರಿ ಆರಂಭಗೊಂಡಿಲ್ಲ. ಕೂಡಲೇ ಇಲ್ಲಿ ಕಾಮಗಾರಿ ಪ್ರಾರಂಭಿಸಬೇಕು ಎನ್ನುತ್ತಾರೆ ಬಲಿಗೆ ಗ್ರಾಮಸ್ಥ ಸವಿಂಜಯ.

ಹೊರನಾಡು-ಬಲಿಗೆ ರಸ್ತೆ ಕಾಮಗಾರಿ ಬಗ್ಗೆ ನಮಗೆ ಅರಿವಿದೆ. ಗುತ್ತಿಗೆದಾರರ ಕೆಲವೊಂದು ಸಮಸ್ಯೆ ಹಾಗೂ ರಸ್ತೆಯ ಕೆಲವು ಕಡೆ ಸ್ವಲ್ಪ ತಕರಾರು ಸಮಸ್ಯೆ ಇರುವುದರಿಂದ ವಿಳಂಬವಾಗಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಂಡು ಆದಷ್ಟು ಬೇಗ ಮುಗಿಸಲಾಗುತ್ತದೆ ಎಂದು ಹೇಳುತ್ತಾರೆ ಪಿಡಬ್ಲ್ಯುಡಿ ಇಂಜಿನಿಯರ್ ಮಂಜುನಾಥ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net