

ಸಿಂದಗಿ: ಚುನಾವಣಾ ಪೂರ್ವದಲ್ಲಿ ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷ ಕೊಟ್ಟ ಐದು ಗ್ಯಾರಂಟಿಗಳು ಐದು ವರ್ಷದವರೆಗೂ ಚಾಲ್ತಿಯಲ್ಲಿರುತ್ತವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಬುಧವಾರ ಪಟ್ಟಣದ ಅನುಗ್ರಹ ಕಲ್ಯಾಣಮಂಟಪದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಯೋಜನೆ ಮತ್ತು ಪುರಸಭೆ ಕಾರ್ಯಾಲಯಗಳ ಆಶ್ರಯದಲ್ಲಿ ಸಾಂಕೇತಿಕವಾಗಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಗ್ಯಾರಂಟಿ ಕಾರ್ಯಕ್ರಮಗಳನ್ನು ಈಗಾಗಲೇ ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಸರ್ಕಾರದ ಐದನೇ ಗ್ಯಾರಂಟಿ ಯುವ ನಿಧಿಯೂ ಮುಂದಿನ ಎರಡು ತಿಂಗಳಲ್ಲಿ ಜಾರಿಗೆ ಬರಲಿದೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಕಾರ್ಯಕ್ರಮವು 4 ಲಕ್ಷ 82ಸಾವಿರ ಗ್ರಾಹಕರ ಕುಟುಂಬಗಳಲ್ಲಿ ಬೆಳಗುತ್ತಿದೆ. 46ಸಾವಿರ ಬಿಪಿಎಲ್ ಫಲಾನುಭವಿಗಳಿದ್ದು, ಅವರಲ್ಲಿ 38ಸಾವಿರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಹೆಸರು ನೋಂದಾಯಿಸಿದ್ದು, ಅವರಿಗೆಲ್ಲರಿಗೂ ಯೋಜನೆಯ ಕೊಡುಗೆಯಾಗಿ 2ಸಾವಿರ ರೂ. ನಗದು ಖಾತೆಗಳಿಗೆ ನೇರವಾಗಿ ಜಮಾವಣೆಗೊಳ್ಳುವುದು ಎಂದರು.
ನಂತರ ನಡೆದ ಮಹಿಳೆಯರ ಸಂವಾದದಲ್ಲಿ ಕೆಲವು ಮಹಿಳೆಯರು, ಡಿವೋರ್ಸ್ ಪಡೆದ ಮಹಿಳೆಯೊಬ್ಬಳಿಗೆ ಎರಡು ಮಕ್ಕಳು ಹಾಗೂ ಕುಟುಂಬವಿದೆ. ಅವರಿಗೆ ರೇಷನ್ ಕಾರ್ಡ್ ಇಲ್ಲ. ಅವರಿಗೆ ಗೃಹಲಕ್ಷ್ಮಿ ಯೋಜನೆ ಒದಗಿಸಲು ಸಾಧ್ಯವೇ ? ಎಂದರೆ, ಇನ್ನೊಬ್ಬ ಮಹಿಳೆ ಕುಟುಂಬದಲ್ಲಿ ಯಜಮಾನಿ ಬದುಕಿಲ್ಲ. ಇರುವ ಗಂಡ ಮತ್ತು ಮಕ್ಕಳಿಗೆ ಈ ಯೋಜನೆ ಸಿಗುವುದೇ ಎಂದು ಅಧಿಕಾರಿ ಹಾಗೂ ಶಾಸಕರನ್ನು ಪ್ರಶ್ನಿಸಿದರು.
ಇದಕ್ಕೆ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಹಾಗೂ ಸಿಡಿಪಿಒ ಬಸವರಾಜ ಜಿಗಳೂರ ಉತ್ತರಿಸಿ, ತೆರಿಗೆ ಪಾವತಿದಾರರಿಗೆ, ಈ ಯೋಜನೆಯ ಲಾಭ ಸಿಗದು. ಯಜಮಾನಿ ಇಲ್ಲದ ಕುಟುಂಬದವರಿಗೆ ಇತರ ಯೋಜನೆಗಳ ಲಾಭವನ್ನು ಒದಗಿಸಲಾಗುವುದಾಗಿ ಭರವಸೆ ನೀಡಿದರು.
ಪುರಸಭೆ ಸದಸ್ಯರಾದ, ಹಾಸಿಂಪೀರ ಆಳಂದ, ಸಂದೀಪ ಚೌರ, ಬಸವರಾಜ ಯರನಾಳ, ಗೊಲ್ಲಾಳ ಬಂಕಲಗಿ, ಬಸವರಾಜ ಕಾಂಬಳೆ, ಮುಖಂಡರಾದ ಮಲ್ಲಣ್ಣ ಸಾಲಿ, ಮುಸ್ತಾಕ್ ಮುಲ್ಲಾ, ಸುರೇಶ ಪೂಜಾರಿ, ಬಾಬು ಕಮತಗಿ, ಹಣಮಂತ ಸುಣಗಾರ, ಬಾದಷಾಸಾಬ ತಾಂಬೋಳಿ ಮತ್ತಿತರರಿದ್ದರು.