

ಮಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸವಿದ್ದ ಶ್ರೀಲಂಕಾದ 38 ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಇದಕ್ಕೂ ಮುನ್ನ ಶುಕ್ರವಾರ ರಾತ್ರಿ ಡಿವೈಎಸ್ಪಿ, ಇನ್‌ಸ್ಪೆಕ್ಟರ್ ಸಹಿತ 9 ಮಂದಿ ತಮಿಳುನಾಡು ಪೊಲೀಸರು ಮಂಗಳೂರಿಗೆ ಆಗಮಿಸಿ ಅವರನ್ನು ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ವಿದೇಶಾಂಗ ಸಚಿವಾಲಯಕ್ಕೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಉದ್ಯೋಗ ಅರಸಿಕೊಂಡು ಕೆನಡಾಕ್ಕೆ ತೆರಳಬೇಕಿದ್ದವರು ಭಾರತಕ್ಕೆ ನುಸುಳಿ ಬಂದಿದ್ದರು. ತಮಿಳುನಾಡಿನಲ್ಲಿ ವಾಸವಿದ್ದ ಅವರು ಅಲ್ಲಿ ಚುನಾವಣೆ ಸಂದರ್ಭ ತಪಾಸಣೆ ಬಿಗುಗೊಂಡಾಗ ಸಿಕ್ಕಿ ಬೀಳುವ ಭಯದಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಬಂದು ಲಾಡ್ಜ್, ಮನೆಗಳಲ್ಲಿ ವಾಸವಿದ್ದರು.
ತಮಿಳುನಾಡಿನ ಮದುರೈನಲ್ಲಿ 23 ಶ್ರೀಲಂಕಾ ಪ್ರಜೆಗಳು ಪತ್ತೆಯಾಗಿದ್ದು, ಅವರನ್ನು ವಿಚಾರಣೆಗೊಳಪಡಿಸಿದಾಗ ಜತೆಗಾರರು ಮಂಗಳೂರಿನಲ್ಲಿರುವ ಮಾಹಿತಿ ಲಭಿಸಿತ್ತು. ತಕ್ಷಣ ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇಲ್ಲಿನ ಸಿಸಿಬಿ ಪೊಲೀಸರು 18 ಗಂಟೆ ಕಾರ್ಯಾಚರಣೆ ನಡೆಸಿ ನಗರದ ಎರಡು ಲಾಡ್ಜ್ ಹಾಗೂ ಮನೆಗಳಿಂದ 38 ಮಂದಿಯನ್ನು ವಶಕ್ಕೆ ಪಡೆದಿದ್ದರು.
ತಮಿಳುನಾಡು ಪೊಲೀಸರು ನಗರದಲ್ಲಿ ಪತ್ತೆಯಾಗಿರುವ 38 ಮಂದಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಹೆಚ್ಚಿನ ತನಿಖೆ ಅಗತ್ಯವಿದ್ದರೆ ಕೋರ್ಟ್‌ಗೆ ಹಾಜರುಪಡಿಸಿ ಬಳಿಕ ತಮಿಳುನಾಡು ಪೊಲೀಸರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ವಿಚಾರಣೆ ಬಳಿಕ ಬಿಡುಗಡೆ: ಶ್ರೀಲಂಕಾ ಪ್ರಜೆಗಳಿಗೆ ಆಶ್ರಯ ನೀಡಿದ ಲಾಡ್ಜ್, ಮನೆಗಳ 6 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿ ಬಳಿಕ ಬಿಟ್ಟಿದ್ದಾರೆ. ಮುಂದೆ ಅನಿವಾರ್ಯವಾದರೆ ಮತ್ತೆ ವಿಚಾರಣೆಗೆ ಕರೆಯಲಾಗುವುದು.
ಮನೆ, ಜಾಗ ಮಾರಿ ಬರ್ತಾರೆ!
ಶ್ರೀಲಂಕಾ ಪ್ರಜೆಗಳು ಭಾರತಕ್ಕೆ ನುಸುಳಿ ಬರುವುದು ಹೊಸದೇನಲ್ಲ. ಹೆಚ್ಚಾಗಿ ಕೇರಳ, ತಮಿಳುನಾಡಿಗೆ ಬರುತ್ತಾರೆ. ತಮಿಳು ಮಾತನಾಡುವುದರಿಂದ ಮೀನುಗಾರರ ಸೋಗಿನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಇದೇ ರೀತಿ ಬಂದವರು ತಾವಾಗಿಯೇ ಬೋಟ್ ಮೂಲಕ ಆಸ್ಟ್ರೇಲಿಯಾ, ಕೆನಡಾಕ್ಕೆ ತೆರಳುತ್ತಾರೆ. ಇದಕ್ಕಾಗಿ ಕೆಲವು ಏಜೆನ್ಸಿಗಳು ಕೆಲಸ ಮಾಡುತ್ತಿವೆ. ಎಲ್ಲ ಕಡೆ ಅವರ ಲಿಂಕ್ ಇದ್ದು, ಈ ಮೂಲಕ ಕಾರ್ಯಾಚರಣೆ ನಡೆಸುತ್ತಾರೆ. ಶ್ರೀಲಂಕಾದಿಂದ ಮನೆ, ಕುಟುಂಬ ಎಲ್ಲವನ್ನೂ ಬಿಟ್ಟು ಬರುತ್ತಾರೆ. ತಮ್ಮ ಹೆಸರಿನಲ್ಲಿ ಜಾಗ ಇದ್ದರೆ ಅದನ್ನೂ ಮಾರಿರುತ್ತಾರೆ. ಕೆಲವು ಏಜೆನ್ಸಿಗಳು ಕೆನಡಾ, ಆಸ್ಟ್ರೇಲಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಅವರಿಂದ ಹಣ ಪಡೆದು ವಂಚಿಸುವುದೂ ಇದೆ ಎಂದು ತಮಿಳುನಾಡಿನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೀನುಗಾರಿಕೆ ಕೆಲಸಕ್ಕೆಂದು ನಂಬಿದ್ದರು
ತಮಿಳುನಾಡಿನ ವ್ಯಕ್ತಿಯೋರ್ವ ಈ ಹಿಂದೆಯೂ ಮೀನುಗಾರರನ್ನು ಲಾಡ್ಜ್‌ಗೆ ಕರೆತರುತ್ತಿದ್ದ. ಅವರು ಸ್ವಲ್ಪ ಸಮಯ ಲಾಡ್ಜ್‌ನಲ್ಲಿದ್ದು ಮಂಗಳೂರಿನಲ್ಲಿ ಮೀನುಗಾರಿಕೆ ಆರಂಭವಾದಾಗ ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಅದೇ ರೀತಿ ಈ ಬಾರಿಯೂ ಕರೆತಂದಿರಬಹುದು ಎಂದು ಲಾಡ್ಜ್‌ನವರು ಅಂದಾಜಿಸಿದ್ದರು. ಈ ರೀತಿ ಶ್ರೀಲಂಕಾ ಪ್ರಜೆಗಳನ್ನು ತಂದ ವ್ಯಕ್ತಿ ಆತನ ಬಳಿಯಲ್ಲಿದ್ದ ದಾಖಲೆಗಳನ್ನು ಲಾಡ್ಜ್‌ನವರಿಗೆ ನೀಡಿದ್ದ. ‘ಇವರು ಸಂಬಂಧಿಕರು. ಮೀನುಗಾರಿಕೆ ಕೆಲಸಕ್ಕೆ ಬಂದಿದ್ದಾರೆ’ ಎಂದು ಹೇಳಿದ್ದ. ಇದೀಗ ಪತ್ತೆಯಾಗಿರುವ ಶ್ರೀಲಂಕಾ ಪ್ರಜೆಗಳ ಪೈಕಿ ಇಬ್ಬರು ಮಂಗಳೂರಿನ ಬೋಟ್‌ನಲ್ಲಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದು, ಅವರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿಂದ ಕೆನಡಾಕ್ಕೆ: ಮಂಗಳೂರಿನಿಂದಲೇ ಕೆನಡಾಕ್ಕೆ ಬೋಟ್‌ನಲ್ಲೇ ಅಕ್ರಮವಾಗಿ ತೆರಳುವ ಯೋಜನೆ ಹಾಕಿಕೊಳ್ಳಲಾಗಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಯೋಜನೆ ಮುಂದಕ್ಕೆ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.