38 ಹಸು, ಎಮ್ಮೆಗಳ ರಕ್ಷಣೆ

FotoJet (2)
Published on

 ಗೋವುಗಳ ಅಕ್ರಮ ಸಾಗಾಟ ತಡೆದ ಬಜರಂಗದಳ ಕಾರ್ಯಕರ್ತರು | ಗೋಶಾಲೆಗೆ ರವಾನೆ

ಶಿಡ್ಲಘಟ್ಟ : ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ತಡೆದ ಬಜರಂಗ ದಳದ ಕಾರ್ಯಕರ್ತರು ಹಸು ಮತ್ತು ಎಮ್ಮೆಗಳನ್ನು ರಕ್ಷಿಸಿದ್ದಾರೆ. ತಾಲೂಕಿನ ಸಾದಲಿ ಹೋಬಳಿಯ ಸೊಣಗಾನಹಳ್ಳಿ ಬಳಿ ಬಜರಂಗದಳ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಗುರುವಾರ ವಾಹನಗಳನ್ನು ತಡೆದು ವಾಹನದಲ್ಲಿದ್ದ ಹಸು ಮತ್ತು ಎಮ್ಮೆಗಳನ್ನು ಗುಡಿಬಂಡೆ ತಾಲೂಕಿನ ನಡುವನಹಳ್ಳಿ ಸಮೀಪದ ನಮ್ಮನಾಡು ಗೋಶಾಲೆಯ ಸುಪರ್ದಿಗೆ ಪೊಲೀಸ್ ಸಮ್ಮುಖದಲ್ಲಿ ನೀಡಿದರು.

ಬಜರಂಗ ದಳದ ಜಿಲ್ಲಾ ಸಂಚಾಲಕ ಗರುಡಾಚಾರ್ಲಹಳ್ಳಿ ಅಮರೇಶ್ ಮಾತನಾಡಿ, ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದರೂ ಸಂಬಂಧಪಟ್ಟವರು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.

ಚೆಕ್‌ಪೋಸ್ಟ್ ಆರಂಭಿಸಿ

ಏ.10ನೇ ತಾರೀಖಿನಂದು ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 19 ಗೋವುಗಳನ್ನು ರಕ್ಷಣೆ ಮಾಡಿದ್ದೆವು. ಇದೀಗ 38 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಕೂಡಲೇ ಆಂಧ್ರಪ್ರದೇಶದ ಕಡೆಯಿಂದ ಬರುವ ಮಾರ್ಗಗಳಲ್ಲಿ ಚೆಕ್‌ಪೋಸ್ಟ್ ಗಳನ್ನು ತೆರೆಯುವಂತೆ ಗರುಡಾಚಾರ್ಲಹಳ್ಳಿ ಅಮರೇಶ್ ಆಗ್ರಹಿಸಿದರು.

ಹೋರಾಟದ ಎಚ್ಚರಿಕೆ

ಗೋಮಾಂಸ ನಿಷೇಧವಿದ್ದರೂ ರಾಜಾರೋಷವಾಗಿ ಗೋಹತ್ಯೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಗೋ ಹಂತಕರಿಗೆ ಕಾನೂನಿನಂತೆ ಕಠಿಣ ಶಿಕ್ಷೆ ಕೊಟ್ಟರೆ ಮಾತ್ರ ಗೋಹತ್ಯೆ ನಿಲ್ಲುತ್ತದೆ. ಕೂಡಲೇ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಜರುಗಿಸಬೇಕು. ಇದು ಹೀಗೇ ಮುಂದುವರಿದರೆ ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಶ್ವ ಹಿಂದು ಪರಿಷತ್ತು ತಾಲೂಕು ಉಪಾಧ್ಯಕ್ಷ ಲಕ್ಷ್ಮೀಸಾಗರ ಸಂತೋಷ್, ಬಜರಂಗದಳ ಸಂಯೋಜಕ ಗಗನ್, ಸಹ ಸಂಯೋಜಕ ರಾಹುಲ್, ಮಿಟ್ಟೇಮರಿ ಬಿಜೆಪಿ ಸತೀಶ್, ಬಾಗೇಪಲ್ಲಿ ನಗರ ಸಂಯೋಜಕ ಕಲ್ಯಾಣ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net