

ಮೈಸೂರು: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಭಾರಿ ಮಳೆ ಸುರಿದಿದ್ದು, ಜಿಲ್ಲೆಯಾದ್ಯಂತ 38 ಮಿ.ಮೀ. ಮಳೆಯಾಗಿರುವುದು ದಾಖಲಾಗಿದೆ.
ಮಳೆಯಿಂದ ನಗರದ ಬಹುತೇಕ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ನದಿಗಳ ರೂಪದಲ್ಲಿ ಗೋಚರಿಸುತ್ತಿತ್ತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸಂಚಾರ ಸಮಸ್ಯೆ ಎದುರಾಯಿತು. ಗ್ರಾಮಾಂತರ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಕೆಲವೆಡೆ ಸಾಕಷ್ಟು ಆಸ್ತಿಪಾಸ್ತಿಗೆ ನಷ್ಟ ಉಂಟಾಗಿದೆ.
ಮಳೆಯ ಆರ್ಭಟ ಇನ್ನೂ ಎರಡು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದ ಹೃದಯ ಭಾಗದಲ್ಲಿ ನೂರು ಎಕರೆಗೂ ಹೆಚ್ಚು ವಿಶಾಲ ಪ್ರದಶದಲ್ಲಿ ಹರಡಿಕೊಂಡಿರುವ ನಗರದ ಕುಕ್ಕರಹಳ್ಳಿಕೆರೆ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹೊರ ಹೋಗದ ಪರಿಣಾಮ ಕೆರೆಯ ಏರಿ ಶಿಥಿಲಾವಸ್ಥೆಗೆ ತಲುಪುವ ಅಪಾಯದಲ್ಲಿದೆ.