ಆರು ತಿಂಗಳಲ್ಲಿ 38 ಡೆಂಗೆ ಪ್ರಕರಣ ಪತ್ತೆ

DENGHE
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ಜಿಲ್ಲೆಯಲ್ಲಿ ಡೆಂಗೆ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, 2023ರ ಜನವರಿಯಿಂದ ಜೂನ್‌ವರೆಗೆ 38 ಪ್ರಕರಣಗಳು ಪತ್ತೆಯಾಗಿವೆ. ತಿಳಿ ನೀರಿನಲ್ಲಿ ಉತ್ಪತ್ತಿಯಾಗುವ ಈಡೀಸ್ ಈಜಿಪ್ಟ್ ಎಂಬ ಸೊಳ್ಳೆಯೇ ಡೆಂಗೆ ಹರಡಲು ಪ್ರಮುಖ ಕಾರಣವಾಗಿದ್ದು, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ಗರ್ಭಿಣಿಯರು, ವೃದ್ಧರು ಎಚ್ಚರಿಕೆ ವಹಿಸುವ ಅಗತ್ಯವಿದೆ.

ರಾಣೆಬೆನ್ನೂರ ತಾಲೂಕಿನಲ್ಲಿ 11 ಪ್ರಕರಣಗಳು ಪತ್ತೆಯಾಗಿದ್ದು, ಹಾನಗಲ್ಲ ತಾಲೂಕಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ. ಹಾವೇರಿ ತಾಲೂಕಲ್ಲಿ 8, ಬ್ಯಾಡಗಿ 7, ಹಿರೇಕೆರೂರ 5, ಶಿಗ್ಗಾಂವಿ 4, ರಟ್ಟಿಹಳ್ಳಿ 2, ಸವಣೂರ ತಾಲೂಕಲ್ಲಿ 1 ಪ್ರಕರಣ ಕಂಡುಬಂದಿದೆ.
ಮಲೇರಿಯಾ, ಡೆಂಗೆ, ಚಿಕೂನ್ ಗುನ್ಯಾ, ಫೈಲೇರಿಯಾ (ಆನೆಕಾಲು ರೋಗ), ಮಿದುಳು ಜ್ವರ (ಜೆಇ) ಪ್ರಕರಣಗಳು ಈ ವರ್ಷ ಇಳಿಮುಖವಾಗಿದೆ. ಚಿಕೂನ್ ಗುನ್ಯಾ 2019ರಲ್ಲಿ 207, 2020ರಲ್ಲಿ 14, 2021ರಲ್ಲಿ 62, 2022ರಲ್ಲಿ 44 ಹಾಗೂ 2023ರ ಜನವರಿಯಿಂದ ಜುಲೈ 23ರವೆಗೆ 20 ಕೇಸ್ ವರದಿಯಾಗಿವೆ. ಮಲೇರಿಯಾ 2019ರಲ್ಲಿ 12, 2022ರಲ್ಲಿ 3, 2023ರಲ್ಲಿ ಈವರೆಗೆ 1 ಪ್ರಕರಣ ಮಾತ್ರ ವರದಿಯಾಗಿದೆ. ಈ ವರ್ಷ ಮಿದುಳು ಜ್ವರ ಪತ್ತೆಯಾಗಿಲ್ಲ.

ಸೊಳ್ಳೆಯಿಂದ ಉಂಟಾಗುವ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಹಾಗಾಗಿ, ಸೊಳ್ಳೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಆರೋಗ್ಯ ಸಿಬ್ಬಂದಿ ಗ್ರಾಮ, ನಗರಗಳಲ್ಲಿ ಮನೆ ಮನೆಗೆ ತೆರಳಿ ಲಾರ್ವಾ ಸರ್ವೇ, ಒಳಾಂಗಣ ಹಾಗೂ ಹೊರಾಂಗಣದಲ್ಲಿ ನೀರು ತುಂಬಿಟ್ಟಿರುವ ಸ್ಥಳಗಳನ್ನು ಗುರುತಿಸಲಿದ್ದಾರೆ. ಲಾರ್ವಾ ಉತ್ಪತ್ತಿ ಸ್ಥಳಗಳನ್ನು ಗುರುತಿಸಿ ನಾಶಪಡಿಸುವುದು, ಕುಡಿಯುವ ನೀರು ಬಿಟ್ಟು ಉಳಿದ ನೀರಿಗೆ ‘ತ್ಯಾನಿಪೋಸ್’ ರಾಸಾಯನಿಕ ಹಾಕಿ ಸೊಳ್ಳೆ ಮರಿ ನಾಶ ಪಡಿಸಲಾಗುತ್ತಿದೆ.

ವಾರಕ್ಕೊಮ್ಮೆ ಶುಷ್ಕ ದಿನ ಎಂದು ಆಚರಿಸಬೇಕು. ನೀರು ಸಂಗ್ರಹಿಸಿಡುವ ಎಲ್ಲ ಪಾತ್ರೆಗಳನ್ನು ತೊಳೆದು ಒಣಗಿಸಿ ನಂತರ ಬಳಸಿಕೊಳ್ಳಬೇಕು ಎನ್ನುತ್ತಾರೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸರಿತಾ.

ಈ ವರ್ಷ ಇಳಿಮುಖ

ಕಳೆದ ಮೂರ್ನಾಲ್ಕು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಡೆಂೆ ಆರ್ಭಟ ಕಡಿಮೆಯಾಗಿದೆ. 2019ರಲ್ಲಿ 413, 2020ರಲ್ಲಿ 63 2021ರಲ್ಲಿ 237, 2022ರಲ್ಲಿ 132 ಡೆಂೆ ಪ್ರಕರಣಗಳು ದಾಖಲಾಗಿದ್ದವು. 2023ರ ಜನವರಿಯಿಂದ ಜುಲೈವರೆಗೆ 38 ಡೆಂೆ ಪ್ರಕರಣ ಪತ್ತೆಯಾಗವೆ. ಕಳೆದ ವರ್ಷ ಈ ಅವಧಿಯಲ್ಲಿ 68 ಪ್ರಕರಣಗಳು ದಾಖಲಾಗಿದ್ದವು.

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಡೆಂಗೆ, ಮಲೇರಿಯಾ, ಚಿಕೂನ್ ಗುನ್ಯಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೂ ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಡೆಂಗೆ ಪರೀಕ್ಷೆ ಮಾಡುವ ಕಿಟ್‌ಗಳು ಹಾಗೂ ಔಷಧ ಲಭ್ಯವಿದೆ.> ಡಾ.ಸರಿತಾ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net