37ಕ್ಕೆ ಏರಿದ ಗಂಟಲ ದ್ರವ ಸಂಗ್ರಹ ಕೇಂದ್ರ

carona logo
Published on

ಹುಬ್ಬಳ್ಳಿ: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಗಂಟಲ ದ್ರವ ಸಂಗ್ರಹ ಕೇಂದ್ರಗಳ (ಸ್ವಾ್ಯಬ್ ಕಲೆಕ್ಟಿಂಗ್ ಸೆಂಟರ್) ಸಂಖ್ಯೆಯನ್ನು ಹೆಚ್ಚಿಸಿದೆ.

ಈ ಮೊದಲು ಜಿಲ್ಲೆಯಾದ್ಯಂತ 18 ಗಂಟಲ ದ್ರವ ಸಂಗ್ರಹ ಕೇಂದ್ರಗಳಿದ್ದವು. ಇದೀಗ ಮತ್ತೆ 19 ಕೇಂದ್ರಗಳನ್ನು ಜಿಲ್ಲೆಯ ವಿವಿಧೆಡೆಗೆ ಮಂಜೂರು ಮಾಡಲಾಗಿದ್ದು, ಒಟ್ಟು ಕೇಂದ್ರಗಳ ಸಂಖ್ಯೆ 37ಕ್ಕೆ ಏರಿದೆ.

ನೂತನವಾಗಿ ಹುಬ್ಬಳ್ಳಿಯ ಎನ್​ಎಂಆರ್ ಕ್ಯೂರ್ ಸೆಂಟರ್, ಎನ್​ಎಂಆರ್ ಡೈಗ್ನೋಸ್ಟಿಕ್ಸ್ ಪ್ರೖೆ.ಲಿ.; ಅಳಗವಾಡಿ, ಅಮ್ಮಿನಬಾವಿ, ಅಣ್ಣಿಗೇರಿ, ಬ್ಯಾಹಟ್ಟಿ, ಹುಲಕೊಪ್ಪ, ಗುಡಗೇರಿ, ಹೆಬ್ಬಳ್ಳಿ, ಮಿಶ್ರಿಕೋಟಿ, ಮೊರಬ, ಮುಕ್ಕಲ, ನೂಲ್ವಿ, ಸಂಶಿ, ಶೆಲವಡಿ, ಶಿರಗುಪ್ಪಿ, ಉಪ್ಪಿನ ಬೆಟಗೇರಿ, ಯಲಿವಾಳ ಹಾಗೂ ಯರಗುಪ್ಪಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಗಂಟಲ ದ್ರವ ಸಂಗ್ರಹ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ.

ಶೀಘ್ರ ಈ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಹೆಚ್ಚುವರಿ ಕೇಂದ್ರಗಳಿಂದಾಗಿ ಗ್ರಾಮೀಣ ಪ್ರದೇಶದ ಕರೊನಾ ಶಂಕಿತರು ಗಂಟಲ ದ್ರವ ನೀಡುವುದಕ್ಕಾಗಿ ನಗರಗಳಿಗೆ ಬರುವುದು ತಪ್ಪಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆ ಸ್ಟಾಫ್ ನರ್ಸ್​ಗೂ ಕರೊನಾ

ಧಾರವಾಡ: ಕರೊನಾ ಸೇನಾನಿಯಾಗಿ ಮುಂಚೂಣಿಯಲ್ಲಿರುವ ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸ್ ಒಬ್ಬರಿಗೆ ಸೋಂಕು ತಗುಲಿದೆ.

ಇಲ್ಲಿನ ಮೆಹಬೂಬನಗರದ ನಿವಾಸಿ 53 ವರ್ಷದ ಸ್ಟಾಫ್ ನರ್ಸ್ ಸೋಂಕಿತರಾಗಿರುವುದು ಭಾನುವಾರ ಸಂಜೆ ಪತ್ತೆಯಾಗಿದೆ. ಅವರಿಗೆ ಧಾರವಾಡ ಮಿಚಿಗನ್ ಕಾಂಪೌಂಡ್​ನ ಲೋಬೋ ಅವೆಂಜಾ ಅಪಾರ್ಟ್​ವೆುಂಟ್ ನಿವಾಸಿಯ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್​ನಲ್ಲಿ ತಿಳಿಸಿದೆ. ನರ್ಸ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ವಿಮಾನ ನಿಲ್ದಾಣ ಸಿಬ್ಬಂದಿಗೂ...

ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ 33 ವರ್ಷದ ಪುರುಷನಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ನಿಲ್ದಾಣದ ಇತರ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ. ವಿಮಾನ ನಿಲ್ದಾಣದ ಕೈಗಾರಿಕಾ ಭದ್ರತಾ ಪಡೆಯ 50ಕ್ಕೂ ಹೆಚ್ಚು ಸಿಬ್ಬಂದಿಗೆ ಕರೊನಾ ತಪಾಸಣೆ ಮಾಡಲಾಗಿತ್ತು. ಓರ್ವ ಕಾನ್ಸ್​ಟೇಬಲ್​ಗೆ ಪಾಸಿಟಿವ್ ಬಂದಿದ್ದು, ಉಳಿದವರ ವರದಿ ನೆಗೆಟಿವ್ ಬಂದಿದೆ. ಸೋಂಕಿತನನ್ನು ಕಿಮ್ಸ್​ಗೆ ದಾಖಲಿಸಲಾಗಿದೆ. ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಕೆಲ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಯಿಂದ ಮತ್ತೋರ್ವ ಕಾನ್ಸ್​ಟೇಬಲ್​ಗೆ ಸೋಂಕು

ಹುಬ್ಬಳ್ಳಿ: ಹಾರ್ಡ್​ವೇರ್ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಪನಗರ ಪೊಲೀಸ್ ಠಾಣೆಯ ಮತ್ತೋರ್ವ ಕಾನ್ಸ್​ಟೇಬಲ್​ಗೆ ಸೋಮವಾರ ಕರೊನಾ ಸೋಂಕು ದೃಢಪಟ್ಟಿದೆ.

ಜೂ. 28ರಂದು ಕಳ್ಳನನ್ನು ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತಪಾಸಣೆ ನಡೆಸಿದಾಗ ಆತನಿಗೆ ಸೋಂಕು ದೃಢಪಟ್ಟಿತ್ತು. ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಎಸಿಪಿ, ಇನ್ಸ್​ಪೆಕ್ಟರ್ ಸೇರಿ 24 ಸಿಬ್ಬಂದಿಯ ಗಂಟಲ ದ್ರವ ತಪಾಸಣೆಗೆ ಕಳುಹಿಸಿ ಅವರನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಈಗಾಗಲೇ ಓರ್ವ ನೌಕರನಲ್ಲಿ ಸೋಂಕು ಪತ್ತೆಯಾಗಿತ್ತು. ಸೋಮವಾರ ಮತ್ತೋರ್ವನಿಗೆ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಪೊಲೀಸರಲ್ಲಿ ಆತಂಕ ಹೆಚ್ಚಾಗಿದೆ.

ಈಗಾಗಲೇ ಉಪನಗರ ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದ್ದು, ಮತ್ತೋರ್ವ ಸಿಬ್ಬಂದಿಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್​ಡೌನ್ ಮುಂದುವರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಆರೋಪಿಗೆ ಜಾಮೀನು: ಕಳ್ಳತನ ಆರೋಪಿಗೆ 1ನೇ ಜೆಎಂಎಫ್​ಸಿ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ. ಹಾಗಾಗಿ, ಆರೋಪಿಗೆ ಹಾಕಿರುವ ಕಾವಲನ್ನು ವಾಪಸ್ ಪಡೆಯಲಾಗಿದೆ ಎಂದು ಇನ್ಸ್​ಪೆಕ್ಟರ್ ಎಸ್.ಕೆ. ಹೊಳೆಯಣ್ಣವರ ತಿಳಿಸಿದ್ದಾರೆ.

ರೈಲ್ವೆ ಸಿಬ್ಬಂದಿಯಿಂದ ಮಾಸ್ಕ್, ಸ್ಯಾನಿಟೈಸರ್ ಉತ್ಪಾದನೆ

ಬೆಂಗಳೂರು: ರೈಲು ಸಿಬ್ಬಂದಿ ಹಾಗೂ ಸಾರ್ವಜನಿಕರ ಬಳಕೆಗಾಗಿ ನೈಋತ್ಯ ರೈಲ್ವೆ ಸಿಬ್ಬಂದಿ 74 ಸಾವಿರಕ್ಕೂ ಅಧಿಕ ಮಾಸ್ಕ್ ಹಾಗೂ ಸುಮಾರು 10 ಸಾವಿರ ಲೀ. ಸ್ಯಾನಿಟೈಸರ್ ಉತ್ಪಾದಿಸಿ ವಿತರಿಸಲಾಗಿದೆ. ದೇಶದಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ನೈಋತ್ಯ ರೈಲ್ವೆ ವ್ಯಾಪ್ತಿಯ ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗ ವ್ಯಾಪ್ತಿಯ ಸಿಬ್ಬಂದಿಗಳು ಮಾಸ್ಕ್ ಮತ್ತು ಸ್ಯಾನಿಟೈಜರ್ ಉತ್ಪಾದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹುಬ್ಬಳ್ಳಿ ಕಾರ್ಯಾಗಾರದಲ್ಲಿ 20,035 ಮಾಸ್ಕ್, 2,960 ಲೀ. ಸ್ಯಾನಿಟೈಸರ್ ಉತ್ಪಾದಿಸಲಾಗಿದೆ. ಹುಬ್ಬಳ್ಳಿ ವಿಭಾಗದಲ್ಲಿ 13,437 ಮಾಸ್ಕ್, 3,990 ಸ್ಯಾನಿಟೈಸರ್, ಬೆಂಗಳೂರು ವಿಭಾಗದಲ್ಲಿ 28,916 ಮಾಸ್ಕ್, 1,870 ಲೀ. ಸ್ಯಾನಿಟೈಸರ್, ಮೈಸೂರು ಕಾರ್ಯಾಗಾರದಲ್ಲಿ 7,730ಮಾಸ್ಕ್, 1,085 ಲೀ. ಸ್ಯಾನಿಟೈಸರ್ ಹಾಗೂ ಮೈಸೂರು ವಿಭಾಗದಲ್ಲಿ 4,800 ಮಾಸ್ಕ್ ಮತ್ತು 32 ಲೀ. ಸ್ಯಾನಿಟೈಸರ್ ಉತ್ಪಾದಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net