೩೭ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ

udoth ganapa
Published on

ಮಡಿಕೇರಿ: ಉಡೋತ್ ಮೊಟ್ಟೆ ಶ್ರೀ ಆದಿಶಕ್ತಿ ವಿನಾಯಕ ಸೇವಾ ಸಮಿತಿ ಮತ್ತು ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ೩೭ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವವನ್ನು ಇತ್ತೀಚೆಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಅರ್ಚಕರಾದ ಜಗದೀಶ್ ಅವರ ನೇತೃತ್ವದಲ್ಲಿ ಗೌರಿ ಗಣೇಶನ ಪ್ರತಿಷ್ಠಾಪನೆ ನೆರವೇರಿತು. ಬಳಿಕ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿತು. ಇದೇ ಸಂದರ್ಭ ಗ್ರಾಮದ ಮಕ್ಕಳ ಸಾಂಪ್ರದಾಯಿಕ ಕುಣಿತ, ಭಜನೆ ಗಮನ ಸೆಳೆಯಿತು. ಮಧ್ಯಾಹ್ನ ಮಹಾಪೂಜೆಯನ್ನು ನೆರವೇರಿಸಿ ಉಪಸ್ಥಿತ ಎಲ್ಲರಿಗೂ ಅನ್ನ ಸಂತರ್ಪಣೆಯನ್ನು ಮಾಡಲಾಯಿತು.

ಸಾಮಾಜಿಕ ಕಾರ್ಯಕರ್ತರಾದ ಚಿ.ನಾ.ಸೋಮೇಶ್ ಅವರು ಧಾರ್ಮಿಕ ಉಪನ್ಯಾಸ ನೀಡಿ, ದೇವಸ್ಥಾನ, ಮಠ-ಮಂದಿರಗಳು ಹಿಂದೂ ಸಮಾಜದ ಶ್ರದ್ಧಾ ಕೇಂದ್ರಗಳಾಗಿದೆ. ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸುವಲ್ಲಿ ಧಾರ್ಮಿಕ ಆಚರಣೆಗಳು ಮಹತ್ವದ ಸ್ಥಾನವನ್ನು ಪಡೆದಿದೆ. ಇಂದು ನಮ್ಮ ಶ್ರದ್ಧಾ ಕೇಂದ್ರಗಳ ವಿರುದ್ಧ ಅಪನಂಬಿಕೆಗಳನ್ನು ಹೆಚ್ಚಿಸುವಂತಹ ಷಡ್ಯಂತ್ರಗಳು ಎಲ್ಲೆಡೆ ನಡೆಯುತ್ತಿದೆ. ಇದರ ಬಗ್ಗೆ ಹಿಂದೂ ಸಮಾಜ ಜಾತಿ ಭಾಷೆ ಎಲ್ಲೆಯನ್ನು ಮೀರಿ ಒಂದಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಒಂದು ತಾಯಿಯ ಮಕ್ಕಳು ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ತಾಯಿ ಭಾರತೀಯ ಸೇವೆ ಮಾಡುವಂತಾಗಬೇಕು. ಎಲ್ಲೆಡೆ ಸಾಮರಸ್ಯದ ಬೆಳಕು ಪಸರಿಸುವಂತಾಗಬೇಕು ಎಂದು ಹೇಳಿದರು.

ಸಂಜೆ ನಾಲ್ಕು ಗಂಟೆ ಬಳಿಕ ಮೆರವಣಿಗೆಯ ಮೂಲಕ ಗೌರಿ ಗಣೇಶನ ಮೂರ್ತಿಯನ್ನು ಅಪ್ಪಂಗಳ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಈ ಸಂದರ್ಭ ದಾರಿಯುದ್ಧಕ್ಕೂ ಭೂಮಿಕ ನೇತೃತ್ವದಲ್ಲಿ ೨೫ಕ್ಕೂ ಅಧಿಕ ಮಕ್ಕಳಿಂದ ಸಾಂಪ್ರದಾಯಿಕ ಕುಣಿತ ಭಜನೆಯನ್ನು ಮಾಡಲಾಯಿತು. ಅಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭ ಸಮಿತಿಯ ಪ್ರಮುಖರಾದ ಚಂದ್ರ ಉಡೋತ್, ಬಿ.ಹೆಚ್.ರಘು, ಬಿ.ಈ.ನವೀನ್, ಬಿ.ಎನ್.ದಿವಾಕರ(ಶಭರಿ), ಪಿ.ಕೆ.ದಿನೇಶ್, ಬಿ.ಎಸ್.ಕಿಶು, ಬಿ.ಎ.ಮಂಜುನಾಥ್, ಎಲ್ಯಾಣ ಪೂಜಾರಿ, ಸುಂದರ, ಅಣ್ಣಪ್ಪ, ಕೃಷ್ಣ, ಕಿರಣ್, ಬಿ.ಕೆ.ರಾಜು, ಜಯರಾಮ್ ಅಚಾರ್ಯ ಹಾಗೂ ಇನ್ನಿತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net