ನಾಗಮಂಗಲ ತಾಲೂಕಿನಲ್ಲಿ 3771 ಬಿಪಿಎಲ್ ಕಾರ್ಡ್ ರದ್ದು

IMG_0109
Published on

ನಾಗಮಂಗಲ: ತಾಲೂಕಿನಲ್ಲಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದ 3771 ಕಾರ್ಡ್‌ಗಳನ್ನು ಅನರ್ಹಗೊಳಿಸಿದ್ದು, 1061 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಾಯಿಸಲಾಗಿದೆ ಎಂದು ಆಹಾರ ನಿರೀಕ್ಷಕ ಅನಿಲ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆ ಮಾಹಿತಿ ನೀಡಿ ಮಾತನಾಡಿದರು.

ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಿ ನೌಕರರು, ಇಂಜಿನಿಯರ್‌ಗಳು, ವೈದ್ಯರು, ಆದಾಯ ತೆರಿಗೆ ಪಾವತಿದಾರರು ಸೇರಿದಂತೆ ಮತ್ತಿತರು ಹೊಂದಿದ್ದ ಬಿಪಿಎಲ್ ಕಾರ್ಡ್‌ಗಳನ್ನು ಅನರ್ಹಗೊಳಿಸಲಾಗಿದೆ. ಕೆಲವರಿಗೆ ನೋಟಿಸ್ ನೀಡಲಾಗಿದೆ. ಸರ್ಕಾರಕ್ಕೆ ಪಾವತಿಸಬೇಕಾದ ದಂಡವನ್ನು ಪಾವತಿಸಲು ಇರುವಂತಹ ಕ್ರಮಗಳನ್ನು ಅನುಸರಿಸಿ ಅಂಥವರಿಂದ ನಿಯಮಾನುಸಾರ ದಂಡ ಪಾವತಿಸಲಾಗುವುದು ಎಂದು ತಿಳಿಸಿದರು.

ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ಸಭೆ: ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ಸಭೆ ನಡೆಸುವ ಮೂಲಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶೇ.100 ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ. ಆದ್ದರಿಂದ ಹೋಬಳಿ ಮಟ್ಟದಲ್ಲಿ ಸಭೆ ನಡೆಸಲು ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲು ಪತ್ರ ವ್ಯವಹಾರ ನಡೆಸಿ ಎಂದು ತಾಲೂಕು ಮಟ್ಟದ ಗ್ಯಾರಂಟಿ ಸಮಿತಿ ಸದಸ್ಯ ದಿನೇಶ್ ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆಯಾಗಿ ವರ್ಷ ಕಳೆದರೂ ತಾಲೂಕು ಮಟ್ಟದ ಸಮಿತಿ ಸದಸ್ಯರು ಯಾರೆಂಬುದು ಇದುವರೆಗೂ ಫಲಾನುಭವಿಗಳಿಗೆ ಮಾಹಿತಿ ಇಲ್ಲವಾಗಿದೆ. ಇನ್ನು ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ದೂರುಗಳಿದ್ದರೆ ಯಾರಿಗೆ, ಎಲ್ಲಿ ,ದೂರು ನೀಡಬೇಕು ಎಂದು ಫಲಾನುಭವಿಗಳಿಗೆ ಗೊತ್ತಿಲ್ಲವಾಗಿದೆ. ಆದ್ದರಿಂದ ಹೋಬಳಿ ಮಟ್ಟದಲ್ಲಿ ಅಥವಾ ಸಾಧ್ಯವಾದರೆ ಗ್ರಾಮ ಪಂಚಾಯಿತಿವಾರು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸುವ ಮೂಲಕ ಯೋಜನೆಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕಿದೆ ಎಂದು ತಿಳಿಸಿದರು.

ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಮಸ್ಯೆ ಆಲಿಸುವ ಜತೆಗೆ ಸಮಸ್ಯೆಗಳಿದ್ದರೆ ಸ್ಥಳದಲ್ಲಿಯೇ ಪರಿಹರಿಸುವ ಕೆಲಸ ಮಾಡಬೇಕು. ಗ್ಯಾರಂಟಿ ಸಮಿತಿ ಇದೆ ಎಂಬುದೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಆದ್ದರಿಂದ ಈ ರೀತಿ ಪ್ರತಿ ತಿಂಗಳು ಹೋಬಳಿವಾರು ಸಭೆ ನಡೆಸಲು ತಾ.ಪಂ.ಇಒ ಆದೇಶ ಹೊರಡಿಸಲಿ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಮೂಡ್ಲಿಗೌಡ ಅವರನ್ನು ಸಭೆಯಲ್ಲಿ ಒತ್ತಾಯಿಸಿದರು.

ಬಸ್ ಪಾಸ್‌ಗೆ ಮನವಿ: ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯರು ತಮಗೂ ಉಚಿತ ಬಸ್ ಪಾಸ್ ನೀಡುವಂತೆ ಹಾಗೂ ಈ ವಿಚಾರವನ್ನು ಸಭೆಯಲ್ಲಿ ನಿರ್ಣಯಿಸಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಗ್ಯಾರಂಟಿ ಸಮಿತಿಗೆ ಹಾಗೂ ಸರ್ಕಾರಕ್ಕೆ ಕಳುಹಿಸುವಂತೆ ಸಭೆಯಲ್ಲಿ ನಿರ್ಣಯಿಸಿದರು. ಉಚಿತ ಬಸ್ ಪಾಸ್ ನೀಡುವುದರಿಂದ ಬಸ್‌ನಲ್ಲಿ ಸಂಚರಿಸಿ ಶಕ್ತಿ ಯೋಜನೆಯ ಬಗ್ಗೆ ಸಾಧಕ-ಬಾಧಕಗಳನ್ನು ಅರಿಯಬಹುದಾಗಿದೆ ಎಂದು ಉಚಿತ ಬಸ್ ಪಾಸ್ ಬೇಡಿಕೆಯನ್ನು ಸಮರ್ಥಿಸಿಕೊಂಡರು.

ಆಹಾರ ಇಲಾಖೆ, ಸೆಸ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಂದ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ ನಡೆಸಿದರು. ತಾ.ಪಂ.ಇಒ ಸತೀಶ್, ಗ್ಯಾರಂಟಿ ಸಮಿತಿ ಸದಸ್ಯರಾದ ರವಿಕಾಂತ್, ವಿನಯ್, ನೀಲಾಮೂರ್ತಿ, ಗೀತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net