ಐಐಐಟಿ-ಬಿಯ 372 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

iiitb convocation
Published on

ಬೆಂಗಳೂರು: ಇಂಟರ್‌ನ್ಯಾಷನಲ್ ಇನ್‌ಸ್ಟ್ಟಿಟ್ಯೂಟ್ ಆಫ್​ ಇನ್ಫಾರ್ಮೇಷನ್ ಟೆಕ್ನಾಲಜಿ ಬೆಂಗಳೂರು (ಐಐಐಟಿ-ಬಿ) ಕ್ಯಾಂಪಸ್‌ನಲ್ಲಿ ಮಂಗಳವಾರ ನಡೆದ 25ನೇ ಘಟಿಕೋತ್ಸವದಲ್ಲಿ 372 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಐಐಐಟಿ-ಬಿ ನಿರ್ದೇಶಕ ಪ್ರೊ. ದೇಬಬ್ರತ ದಾಸ್ ಮಾತನಾಡಿ, ಜಾಗತಿಕ ಹ್ಯಾಕಥಾನ್‌ಗಳು ಮತ್ತು ನಾವೀನ್ಯತೆ ಸವಾಲುಗಳಲ್ಲಿ ಗಮನಾರ್ಹ ಸಾಧನೆಗಳು, ಪ್ರತಿಷ್ಠಿತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಕಟವಾದ ಉನ್ನತ ಸಂಶೋಧನೆ ಮತ್ತು ಹೆಚ್ಚು ಸ್ಪರ್ಧಾತ್ಮಕ ವಿದ್ಯಾರ್ಥಿವೇತನ ಮತ್ತು ಅನುದಾನ ಸ್ವೀಕರಿಸಿರುವುದು ವಿದ್ಯಾರ್ಥಿಗಳ ಶ್ರಮಕ್ಕೆ ಸಿಕ್ಕ ಮನ್ನಣೆಯಾಗಿದೆ. ಹಲವಾರು ವಿದ್ಯಾರ್ಥಿಗಳು ಪೇಟೆಂಟ್‌ಗಳನ್ನು ಪಡೆದುಕೊಂಡಿದ್ದು, ಇದು ನೈಜ-ಪ್ರಪಂಚದ ನಾವೀನ್ಯತೆಯೆಡೆಗಿನ ಅವರ ಕೆಲಸಕ್ಕೆ ಸಾಕ್ಷಿಯಾಗಿದೆ ಎಂದರು.

ಆನಂದ ಪ್ರಕಾಶ್‌ಗೆ ವರ್ಷದ ಉದ್ಯಮಿ ಪದಕ:

ಚಿನ್ನದ ಪದಕಗಳನ್ನು ವಾಲಿಪಿ ರೆಡ್ಡಿ ಪ್ರಣತಿ (ಎಂ.ಟೆಕ್), ಮೊಂಜಾಯ್ ನಾರಾಯಣ ಚೌಧರಿ (ಐಎಂಟೆಕ್) ಮತ್ತು ಸೂಕ್ತಿ ಭಟ್ ಕಾವ್ (ಎಂಎಸ್ಸಿ ಡಿಜಿಟಲ್ ಸೊಸೈಟಿ) ಅವರಿಗೆ ಪ್ರದಾನ ಮಾಡಲಾಯಿತು. ದಿವಂಗತ ಎನ್. ರಾಮರಾವ್ ವರ್ಷದ ಉದ್ಯಮಿ ಪದಕವನ್ನು ಆನಂದ ಪ್ರಕಾಶ್ ವರ್ಮಾ ಮುಡಿಗೇರಿಸಿಕೊಂಡರು.

ಸಮಾರಂಭದಲ್ಲಿ ಐಐಎಸ್ಸಿ ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್, ಮೈಕ್ರೋಸ್‌ಟಾ ರಿಸರ್ಚ್ ಇಂಡಿಯಾದ ಎಂಡಿ ಡಾ. ವೆಂಕಟ್ ಪದ್ಮನಾಭನ್, ಐಐಐಟಿ-ಬೆಂಗಳೂರು ಆಡಳಿತ ಮಂಡಳಿಯ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಹಾಜರಿದ್ದರು.

ನಾರಾಯಣ ಚೌಧರಿಗೆ 1.45 ಕೋಟಿ ರೂ. ಪ್ಯಾಕೇಜ್:

ಈ ವರ್ಷ ಐಎಂಟೆಕ್ ವಿದ್ಯಾರ್ಥಿಯೊಬ್ಬರು 1.45 ಕೋಟಿ ರೂ. ದಾಖಲೆಯ ಪ್ಯಾಕೇಜ್ ಪಡೆದಿದ್ದಾರೆ, ಇದು ಐಐಐಟಿ-ಬಿ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ. 14ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾರ್ಷಿಕ 60 ಲಕ್ಷ ರೂ. ಗಿಂತ ಹೆಚ್ಚಿನ ವೇತನ ಪ್ಯಾಕೇಜ್ ಪಡೆದಿದ್ದಾರೆ, 67 ವಿದ್ಯಾರ್ಥಿಗಳು 40 ಲಕ್ಷ ರೂ. ಮತ್ತು 180ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾರ್ಷಿಕ 20 ಲಕ್ಷ ರೂ. ಗಿಂತ ಹೆಚ್ಚಿನ ಪ್ಯಾಕೇಜ್ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net