

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಸಮರ್ಪಕ ಅನುಷ್ಠಾನದಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಿ ಜು.22ರಂದು ಪ್ರತಿಭಟನಾ ರ್ಯಾಲಿ ನಡೆಸಲು ಕಕ ಹೋರಾಟ ಸಮಿತಿ ಯುವ ಘಟಕ ನಿರ್ಧರಿಸಿತು.
ಹೋರಾಟ ರೂಪಿಸುವ ಸಂಬಂಧ ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಹೋರಾಟಗಾರರು ತೀರ್ಮಾನ ಕೈಗೊಂಡರು.
ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಸಂಘಟನೆಗಳನ್ನು ಒಳಗೊಳ್ಳಬೇಕು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು. ಪ್ರತಿ ಹಂತದಲ್ಲಿ ಅನ್ಯಾಯ ಆಗುತ್ತಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ಅವರು ಸದನದಲ್ಲಿ ಮಾತನಾಡುವಂತೆ ಒತ್ತಾಯಿಸಬೇಕು. ಜು.22ರಂದು ಕೊಪ್ಪಳನಗರದ ತಾಲೂಕು ಕ್ರೀಡಾಂಗಣದಿಂದ ಅಶೋಕ ವೃತ್ತ, ಬಸವೇಶ್ವರ ವೃತ್ತವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಬೇಕು. ಬಳಿಕ ಜಿಲ್ಲಾಡಳಿತ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ನಂತರ ಮುಂದಿನ ಹೋರಾಟ ರೂಪಿಸಲು ಒಗ್ಗಟ್ಟಿನ ನಿರ್ಧಾರ ಕೈಗೊಳ್ಳಲ್ಲಾಯಿತು.
ಹಿರಿಯ ವಕೀಲ ರಾಘವೇಂದ್ರ ಪಾನಘಂಟಿ ಮಾತನಾಡಿ, ನಮಗೆ ಮೀಸಲಾತಿ ಸಿಕ್ಕು 10 ವರ್ಷವಾದರೂ 371(ಜೆ) ಕಾಯ್ದೆಯ ಉದ್ದೇಶ ಸಮರ್ಪಕವಾಗಿ ಈಡೇರಿಲ್ಲ. ಶಿಕ್ಷಣ, ಉದ್ಯೋಗ, ಮೀಸಲಾತಿಗೆ ಸಂಬಂಧಿಸಿದಂತೆ ಸಮರ್ಪಕ ಅನುಷ್ಠಾನ ಆಗಬೇಕು. ಈ ನಿಟ್ಟಿನಲ್ಲಿ ಹೋರಾಟ ಅನಿವಾರ್ಯ. ಯಾವುದೇ ಸರ್ಕಾರವಿದ್ದರೂ ಕೆ.ಕೆ.ಆರ್.ಡಿ.ಬಿಗೆ ಅನುದಾನ ನೀಡುತ್ತಿದ್ದಾರೆ. ಅಭಿವೃದ್ಧಿ, ಉದ್ಯೋಗ, ಶಿಕ್ಷಣ, ಮೀಸಲಾತಿ ನಿರೀಕ್ಷಿತ ಪ್ರಮಾಣದ ಈಡೇರಿಲ್ಲ. ಶೇ.100ರಷ್ಟು ಅನುದಾನ ಬಳಸಿಲ್ಲ. ಅಲ್ಲದೇ ಜನಪ್ರತಿನಿಧಿಗಳು ತಮಗೆ ಅನುಕೂಲ ಇರುವಲ್ಲಿ ಅನುದಾನ ಬಳಸುತ್ತಿಲ್ಲ. ಸಂವಿಧಾನ ಕೊಟ್ಟಿರುವ ಹಕ್ಕು. ಸರ್ಕಾರ ಕೊಟ್ಟಿರುವುದಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಹೋರಾಟ ಮಾಡೋಣ ಎಂದರು.
ಜೆಡಿಎಸ್ ಮುಖಂಡ ವೀರೇಶ ಮಹಾಂತಯ್ಯನಮಠ ಮಾತನಾಡಿ, ಪಾಲಕರು ಮತ್ತು ವಿದ್ಯಾರ್ಥಿಗಳು ಕೈಜೋಡಿಸಬೇಕು. ಜನಪ್ರತಿನಿಧಿಗಳು ಅನುದಾನ ಪಡೆಯುತ್ತಾರೆ. 371(ಜೆ) ಪ್ರಮಾಣ ಪತ್ರ ಪಡೆಯಲು ಪರದಾಡುತ್ತಿದ್ದೇವೆ. ಹಾಗಾಗಿ ಸಮರ್ಪಕ ಅನುಷ್ಠಾನಕ್ಕೆ ಹೋರಾಟ ಅನಿವಾರ್ಯವಾಗಿದೆ ಎಂದರು.
ಹಿರಿಯ ವಕೀಲರಾದ ಆಸೀಫ್ ಅಲಿ, ಪೀರಾ ಹುಸೇನ್ ಹೊಸಳ್ಳಿ, ವಿ.ಎಂ.ಭೂಸನೂರಮಠ, ಎ.ವಿ.ಕಣವಿ, ಪತ್ರಕರ್ತರಾದ ಶರಣಪ್ಪ ಬಾಚಲಾಪುರ, ಸೋಮರಡ್ಡಿ ಅಳವಂಡಿ, ಪ್ರಮುಖರಾದ ಪ್ರಲ್ಹಾದ ಅಗಳಿ, ಜಗದೀಶಗೌಡ, ನಿರ್ಮಲಾ ಬಳ್ಳೊಳ್ಳಿ ಮಾತನಾಡಿದರು.
ಹೋರಾಟ ಸಮಿತಿ ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರು, ರಮೇಶ ತುಪ್ಪದ, ಗಿರೀಶ ಪಾನಘಂಟಿ, ಕೃಷ್ಣ ಕಬ್ಬೇರ್, ಎಂ.ಬಿ.ಪಾಟೀಲ್, ಶರಣಪ್ಪ ಜಡಿ ಸೇರಿ ವಿವಿಧ ಸಂಘಟನೆ ಪ್ರಮುಖರು ಇದ್ದರು.