

ಆಳಂದ: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ಮಾಜಿ ಮುಖ್ಯಮಂತ್ರಿ ದಿ.ಎನ್.ಧರ್ಮಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷರಾದ ರಾಜ್ಯಸಭಾ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಶ್ರಮ ಸಾಕಷ್ಟಿದೆ. ಇವರ ಅವಿರತ ಪ್ರಯತ್ನದಿಂದಲೇ 371(ಜೆ) ವಿಶೇಷ ಸ್ಥಾನಮಾನ ದೊರೆತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಬಣ್ಣಿಸಿದರು.
ಮಿನಿ ವಿಧಾನಸೌಧ ಮುಂಭಾಗದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 4 ಎಕರೆ ಪ್ರದೇಶದಲ್ಲಿ 8 ಕೋಟಿ ರೂ. ವೆಚ್ಚದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮತ್ತು 3 ಎಕರೆಯಲ್ಲಿ 6.26 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದ ಅವರು, ಈ ಭಾಗದ ಬಡವರಿಗೆ ಉನ್ನತ ಶಿಕ್ಷಣ ದೊರಕಿಸಲು 371(ಜೆ) ವರದಾನವಾಗಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆಳಂದಗೆ ತಾಂತ್ರಿಕ ಕಾಲೇಜು ಮಂಜೂರಾಗಿತ್ತು. ಆದರೆ ನಂತರ ಸರ್ಕಾರ ಬದಲಾಗಿ ನಿವೇಶನ ಸಿಗದಿದ್ದರಿಂದ ಕೆಲಸ ಆರಂಭಗೊAಡಿರಲಿಲ್ಲ. ಇದೀಗ ಮತ್ತೆ ಬಿ.ಆರ್. ಪಾಟೀಲ್ ಶಾಸಕರಾಗಿದ್ದರಿಂದ ಜಮೀನು ಸಮಸ್ಯೆ ಬಗೆಹರಿಸಿದ್ದರಿಂದ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಪ್ರಥಮ ದರ್ಜೆ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದರಿಂದ ಈ ಭಾಗದ ದಲಿತ, ಕೂಲಿ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ನಮ್ಮ ರಾಜ್ಯದಲ್ಲಿ ಮಾನವ ಸಂಪನ್ಮೂಲ ದೊಡ್ಡ ಶಕ್ತಿಯಾಗಿದೆ. ಇತ್ತೀಚೆಗೆ ಹೂಡಿಕೆ, ಕೈಗಾರಿಕೆ ಸ್ಥಾಪನೆ ನಿಟ್ಟಿನಲ್ಲಿ ಅಮೆರಿಕ ಪ್ರವಾಸ ಕೈಗೊಂಡಾಗ ರಾಜ್ಯದ ಯುವ ಜನರ ಕಲಿಯುವ ಆಸಕ್ತಿ, ಕೌಶಲ, ಜ್ಞಾನದ ಬಗ್ಗೆ ಅಲ್ಲಿನ ಉದ್ಯಮಿಗಳು ಮೆಚ್ಚುಗೆ ವ್ಯಕ್ತಪಡಿಸಿ ಹೂಡಿಕೆಗೆ ಉತ್ಸುಕರಾಗಿದ್ದಾರೆ. ಸಶಕ್ತ ರಾಷ್ಟç ನಿರ್ಮಾಣ ಆಗಬೇಕಾದರೆ ಯುವಶಕ್ತಿಯನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಕೌಶಲಯುಕ್ತ ಉನ್ನತ, ತಾಂತ್ರಿಕ ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ತಿಳಿಸಿದರು.
ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ತಾಲೂಕಿನಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ವಿಚಾರ. ಹಿಂದೆ ಡಿಪ್ಲೊಮಾ, ಡಿಗ್ರಿ ಕಾಲೇಜುಗಳಿರಲಿಲ್ಲ. ನನ್ನ ಅವಧಿಯಲ್ಲೇ ಮಾದನಹಿಪ್ಪರಗಾ ಹಾಗೂ ಆಳಂದಗೆ ತಲಾ ಒಂದು ಡಿಗ್ರಿ, ಐಟಿಐ ಕಾಲೇಜು ಮಂಜೂರು ಮಾಡಿಸಿz್ದೆÃನೆ. ಗುಲ್ಬರ್ಗ ವಿವಿ ಪಿಜಿ ಸೆಂಟರ್ ಆರಂಭಿಸಿರುವೆ. ಎರಡು ಕಾಲೇಜುಗಳ ಕಟ್ಟಡ ನಿರ್ಮಾಣ 18 ತಿಂಗಳಲ್ಲಿ ಪೂರ್ಣಗೊಳಿಸಬೇಕು. ಸಚಿವರಾದ ಡಾ.ಸುಧಾಕರ, ಪ್ರಿಯಾಂಕ್ ಅವರಿಂದಲೇ ಲೋಕಾರ್ಪಣೆ ಮಾಡುವಂಗಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಕೆ.ಎಂ. ಸುರೇಶಕುಮಾರ, ಜಿಪಂ ಸಿಇಒ ಭನ್ವರ್‌ಸಿಂಗ್ ಮೀನಾ, ಸಹಾಯಕ ಆಯುಕ್ತೆ ಮಮತಾಕುಮಾರಿ, ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ತಾಪಂ ಇಒ ಮಾನಪ್ಪ ಕಟ್ಟಿಮನಿ, ಡಿವೈಎಸ್‌ಪಿ ಗೋಪಿ ಆರ್., ಜಿಜಿಎಂ ರೈಟ್ಸ್ ಲಿಮಿಟೆಡ್ ಸಂಸ್ಥೆಯ ಎಂ.ರಣಧೀರ ರೆಡ್ಡಿ ಇತರರಿದ್ದರು.
ಆಳಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರವಿಚಂದ್ರ ಕಂಟೆಕರ್ ಪ್ರಾಸ್ತಾವಿಕ ಮಾತನಾಡಿದರು. ಆಳಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿಶೇಷಾಧಿಕಾರಿ ಸಂಜೀವಕುಮಾರ ಧನ್ನಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ರಮೇಶ ಮಾಳಗಿ ವಂದಿಸಿದರು.