371 ಜೆ ಹೋರಾಟಕ್ಕೆ ಪೊಲೀಸ್ ನೋಟಿಸ್

1607Klb08
Published on

ಕಲಬುರಗಿ: ಸಂವಿಧಾನದ ೩೭೧ ಜೆ ವಿಧಿ ಪರಿಣಾಮಕಾರಿ ಅನುಷ್ಠನ, ಪ್ರತ್ಯೇಕ ಸಚಿವಾಲಯ, ಏಮ್ಸ್ ಸ್ಥಾಪನೆ, ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಗರದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯವರಿಗೆ ಪೊಲೀಸರು ನೋಟೀಸ್ ನೀಡಿ, ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
ನಗರದ ಸಾರ್ವಜನಿಕ ಉದ್ಯಾನದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆ ವೇಳೆ ಆಗಮಿಸಿದ ಪೊಲೀಸರು ನೋಟೀಸ್ ನೀಡಿ, ಮುಚ್ಚಳಿಕೆ ಬರೆಸಿಕೊಂಡಿದ್ದಕ್ಕೆ ಹೋರಾಟಗಾರರು ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಕಳ್ಳತನ, ಹಲ್ಲೆ, ಸರಗಳ್ಳತನ ಸೇರಿ ಹಲವು ಅಪರಾಧಗಳು ಆಗುತ್ತಿವೆ. ಅದನ್ನು ತಡೆಯುವುದು ಬಿಟ್ಟು, ರಚನಾತ್ಮಕವಾಗಿ ಶಾಂತಿಯುತ ಹೋರಾಟ ಮಾಡುತ್ತಿರುವವರ ರುಬಾಬ್ ತೋರಿಸುವ ಪ್ರಯತ್ನ ಮಾಡಿದ್ದಾರೆ. ಇದು ನೋವು ತರಿಸಿದೆ ಎಂದರು.
ಪ್ರತ್ಯೇಕ ಟ್ರಿಬ್ಯೂನಲ್ ಸ್ಥಾಪಿಸಬೇಕು, ೩೭೧ ಜೆಯವರಿಗೆ ನೇಮಕದಲ್ಲಿ ವಯೋಮಿತಿ, ಕೃಪಾಂಕ ನೀಡಬೇಕು, ಕಕ ಭಾಗದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು, ಕಕ ಅಭಿವೃದ್ಧಿ ಐದು ವರ್ಷದ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಬೇಕು, ಗ್ರಾಪಂಗೆ ಒಂದು ಘಟಕ ಮಾಡಿ, ವರದಿ ರಚಿಸಬೇಕು, ಕಲ್ಯಾಣ ಪಥ ಯೋಜನೆ ಅಡಿ ಹೆದ್ದಾರಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ, ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.
ವಿಶ್ರಾಂತ ಕುಲಪತಿ ಪ್ರೊ.ಪ್ರತಾಪಸಿಂಗ್ ತಿವಾರಿ, ಪ್ರೊ.ಆರ್.ಕೆ. ಹುಡಗಿ, ಮಾತನಾಡಿ, ಹೋರಾಟ ಸರ್ಕಾರದ ವಿರುದ್ಧವಲ್ಲ. ನಮ್ಮ ಹಕ್ಕಿನ ನ್ಯಾಯಯುತ ಬೇಡಿಕೆಗಳಿಗಾಗಿ ಇದೆ. ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು. ಹೋರಾಟ ಸಮಿತಿ ಅಧ್ಯಕ್ಷ ಲಕ್ಷö್ಮಣ ದಸ್ತಿ ಮಾತನಾಡಿದರು. ಪ್ರೊ.ಬಸವರಾಜ ಕುಮನೂರ, ಡಾ.ಗುರುಬಸಪ್ಪ, ಪ್ರೊ.ಶಂಕ್ರೆಪ್ಪ ಹತ್ತಿ, ಡಾ.ಮಾಜಿದ್‌ದಾಗಿ, ಲಿಂಗರಾಜ ಸಿರಗಾಪುರ, ಶಿವಲಿಂಗಪ್ಪ ಬಂಡಕ, ರೌಫ್ ಖಾದರಿ, ರಾಜೆ ಶಿವಶರಣ, ಸಾಲೋಮನ ದಿವಾಕರ, ಬಸವರಾಜ ಗುಲಶೆಟ್ಟಿ, ಮನೀಷ ಜಾಜು, ಸಾಬಿರ್ ಅಲಿ, ಬಾಬುರಾವ ಗಂವಾರ, ಬಸವರಾಜ ಕಲ್ಯಾಣಿ, ಬಾಬುರಾವ ಮದನಕರ, ಸೈಯದ್ ಅಥರ್ ಅಲಿ, ಶರಣಬಸಪ್ಪ ಕುರಿಕೋಟಾ, ಕಲ್ಯಾಣರಾವ ಪಾಟೀಲ್, ಕೈಲಾಸನಾಥ ದೀಕ್ಷಿತ್, ಅಬ್ದುಲ್ ರಹೀಂ, ರಾಜು ಜೈನ, ಮುತ್ತಣ್ಣ ನಡಗೇರಿ, ಅಮಿತ, ಪರಮೇಶ್ವರ ಇತರರಿದ್ದರು.

  • ದಕ್ಷಿಣ ಕರ್ನಾಟಕ ಪೊಲೀಸ್ ಇದ್ದಂಗಿದೆ
    ೪೦ ವರ್ಷದಲ್ಲೇ ಹೀಗೆ ನೋಟೀಸ್ ನೋಡಿಲ್ಲ
    ೩೭೧ ಜೆ, ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಮೌನ ಪ್ರತಿಭಟನೆಗೆ ಕರೆ ನೀಡಿದ್ದು, ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುವಾಗ ಮೌಖಿಕವಾಗಿ ಮಾಹಿತಿ ನೀಡಿದ್ದರೂ, ಪೊಲೀಸರು ನೋಟಿಸ್ ನೀಡಿದ್ದು, ೪೦ ವರ್ಷದ ಹೋರಾಟದ ಜೀವನದಲ್ಲಿಯೇ ನೋಡಿಲ್ಲ ಎಂದು ಸಮಿತಿ ಅಧ್ಯಕ್ಷ ಲಕ್ಷö್ಮಣ ದಸ್ತಿ ಆರೋಪಿಸಿದರು. ಪೊಲೀಸ್ ಇಲಾಖೆ ಸೇರಿ ಎಲ್ಲ ಇಲಾಖೆಗಳಲ್ಲಿನ ನೌಕರರ ಹಿತಕ್ಕಾಗಿ ೩೭೧ ಜೆ ಹೋರಾಟವಿದೆ. ಅದರ ಅರಿವು ಇಲ್ಲದ, ದಕ್ಷಿಣ ಕರ್ನಾಟಕದ ಪೊಲೀಸ್ ಈ ನೋಟಿಸ್ ಕೊಟ್ಟಿರಬಹುದು. ಬಂದ್, ರಸ್ತಾ ರೋಖೋ, ರಸ್ತೆ ತಡೆ, ಮಾನವ ಸರಪಳಿ ಮುತ್ತಿಗೆ ಕರೆ ನೀಡಿದ್ದಾಗ ನೋಟೀಸ್ ನೀಡುವುದು ಪದ್ಧತಿ ಇದೆ. ಆದರೆ ಜನರೇ ಓಡಾಡದ ಸ್ಥಳದಲ್ಲಿ ಪ್ರತಿಭಟನೆಗೆ ನೋಟಿಸ್ ನೀಡಿ ಪೊಲೀಸರು ರುಬಾಬ್ ತೋರಿಸಿದ್ದಾರೆ. ಇತ್ತೀಚೆಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಎರಡು ಗಂಟೆ ಸಂಚಾರ ಬಂದ್ ಮಾಡಿ, ಹೋರಾಟ ಮಾಡಲಾಗಿತ್ತು. ಆಗ ನೋಟೀಸ್ ನೀಡಿಲ್ಲ. ರಚನಾತ್ಮಕ ಹೋರಾಟಕ್ಕೆ ಧಕ್ಕೆ ತರುವುದು ಸಹಿಸುವುದಿಲ್ಲ ಎಂದು ಕಿಡಿ ಕಾರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net