371 (ಜೆ) ಸಮರ್ಪಕ ಜಾರಿಯಾಗಲಿ - ಎಸ್‌ಎಫ್‌ಐ ಕಾರ್ಯದರ್ಶಿ ಗುರುರಾಜರಾವ್ ದೇಸಾಯಿ ಒತ್ತಾಯ

10020 SFI 21st Students Conferance
Published on

ರಾಯಚೂರು: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜಾರಿಗೆ ತರಲಾದ 371 (ಜೆ) ಕಲಂ ಸಮರ್ಪಕ ಜಾರಿಯಲ್ಲಿ ವಿಫಲವಾಗಿರುವುದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣವಾಗಿದೆ ಎಂದು ಎಸ್‌ಎಫ್‌ಐ ಕಾರ್ಯದರ್ಶಿ ಗುರುರಾಜರಾವ್ ದೇಸಾಯಿ ಅಭಿಪ್ರಾಯಪಟ್ಟರು.

ಸ್ಥಳೀಯ ಜೆಸಿ ಭವನದಲ್ಲಿ ರಾಯಚೂರು ವಿವಿ ಬಲವರ್ಧನೆಗಾಗಿ 371 (ಜೆ) ಕಲಂ ಸಮರ್ಪಕ ಜಾರಿ ಹಾಗೂ ಜಿಲ್ಲೆಯ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಒತ್ತಾಯಿಸಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ 21ನೇ ವಿದ್ಯಾರ್ಥಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸಂಘಟನಾತ್ಮಕ ಹೋರಾಟಕ್ಕೆ ಮುಂದಾಗಬೇಕು. ಶ್ರಮವಹಿಸಿ ಓದುವ ವಿದ್ಯಾರ್ಥಿಗಳಿಗೆ ತಕ್ಕ ಹುದ್ದೆಗಳು ಸಿಗುತ್ತಿಲ್ಲ. ಶೈಕ್ಷಣಿಕ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುತ್ತಿಲ್ಲ, ಇರುವ ಅನುದಾನ ಕಡಿತಗೊಳಿಸುತ್ತಿರುವ ಶೈಕ್ಷಣಿಕ ಕ್ಷೇತ್ರಕ್ಕೆ ಮಾರಕವಾಗಿದೆ ಎಂದರು.

ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ ಮಾತನಾಡಿ, 371 (ಜೆ) ಸಮರ್ಪಕ ಜಾರಿಯಾಗದ ಕಾರಣ ಈ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ರಾಯಚೂರು ವಿವಿ ಬಲವರ್ಧನೆ ವಿಷಯದಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷೃ ಎದ್ದು ಕಾಣುತ್ತಿದೆ ಎಂದರು. ಸಂಘಟನೆ ಜಿಲ್ಲಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net