

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ ಮಡಿಕೇರಿ ನಗರದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಈಗಾಗಲೇ ದಾಖಲೆಯ ೩೭೦ ತಂಡಗಳು ನೋಂದಣಿ ಮಾಡಿಕೊಂಡಿವೆ ಎಂದು ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ತಿಳಿಸಿದರು.
ಕಳೆದ ಬಾರಿಯ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ ೩೬೦ ತಂಡಗಳು ಪಾಲ್ಗೊಂಡಿದ್ದವು. ಈ ಬಾರಿಯ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ೧೦ ತಂಡಗಳು ಹೆಚ್ಚುವರಿಯಾಗಿದ್ದು, ೩೭೦ ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ನೋಂದಣಿಯ ಕೊನೆಯ ದಿನಾಂಕ ಮಾ.೧೮ ಆಗಿದ್ದು, ಮತ್ತಷ್ಟು ತಂಡಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂದ್ಯಾವಳಿಯು ಮಾ.೨೮ ರಿಂದ ಏ.೨೭ರವರೆಗೆ ಮೂರು ಮೈದಾನದಲ್ಲಿ ನಡೆಯಲಿದೆ. ಮಾ.೨೮ರಂದು ಉದ್ಘಾಟನೆಯ ಪ್ರದರ್ಶನ ಪಂದ್ಯವಾಗಿ ಕೊಡವ ಹಾಕಿ ಅಕಾಡೆಮಿ ಇಲೆವೆನ್ ಹಾಗೂ ಇತ್ತೀಚೆಗೆ ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದ ಕರ್ನಾಟಕ ಇಲೆವೆನ್ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಕಳೆದ ಹಾಕಿ ಉತ್ಸವದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದ ಕುಂಡ್ಯೋಳಂಡ ಒಕ್ಕದವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಮಾತನಾಡಿ, ಕೊಡವ ಹಾಕಿ ಅಕಾಡೆಮಿ ವತಿಯಿಂದ ಮಾ.೧೯ ಮತ್ತು ೨೦ ರಂದು ವಿರಾಜಪೇಟೆಯ ಕಾವೇರಿ ಕಾಲೇಜ್‌ನಲ್ಲಿ ಹಾಕಿ ತೀರ್ಪುಗಾರರ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಆಸಕ್ತ ಯುವ ಸಮೂಹ ಇದರಲ್ಲಿ ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಮಿನಿ ಒಲಂಪಿಕ್ಸ್ ಮಾದರಿಯಲ್ಲಿ ಈ ಬಾರಿಯ ಮುದ್ದಂಡ ಕಪ್ ಹಾಕಿ ಉತ್ಸವ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ರಾಜ್ಯಸಭಾ ಸದಸ್ಯ ಅಜೆಯ್ ಮಾಕನ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ಮುದ್ದಂಡ ಹಾಕಿ ಹಬ್ಬದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಮಾತನಾಡಿ, ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್‌ನ ಎರಡು ಮೈದಾನ ಹಾಗೂ ಪೊಲೀಸ್ ಕವಾಯತು ಮೈದಾನದಲ್ಲಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಗ್ಯಾಲರಿ ನಿರ್ಮಾಣದ ಕಾರ್ಯ ಆರಂಭಗೊಂಡಿದೆ. ಹಾಕಿ ಉತ್ಸವದ ಬೆಳ್ಳಿಹಬ್ಬದ ಸಂಭ್ರಮದ ಹಿನ್ನೆಲೆ ಹಾಕಿ ಪಂದ್ಯಾವಳಿಯೊಂದಿಗೆ ವಿಭಿನ್ನ ಕಾರ್ಯಕ್ರಮಗಳು ಕೂಡ ನಡೆಯಲಿದೆ ಎಂದರು.
ಮುದ್ದಂಡ ಒಕ್ಕದ ಕಾರ್ಯದರ್ಶಿ ಮುದ್ದಂಡ ರಾಯ್ ತಮ್ಮಯ್ಯ ಮಾತನಾಡಿ, ಏ.೨೦ ರಂದು ಮೈದಾನ ಎರಡರಲ್ಲಿ ಶೂಟಿಂಗ್ ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಲಿದೆ. ೫೦ ಮೀಟರ್ ನಿಗಧಿತ ಗುರಿಯ .೨ ಶೂಟಿಂಗ್ ಸ್ಪರ್ಧೆ, ೩೦ ಮೀಟರ್ ಅಂತರದ ೧೨ ಬೋರ್ ಬಂದೂಕಿನಿಂದ ಗುರಿ ಹಿಡಿಯುವ ಹಾಗೂ ೧೫ ಮೀಟರ್ ದೂರದ ಮೊಟ್ಟೆಗೆ ಗುಂಡಿಕ್ಕುವ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಕೂಡ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುದ್ದಂಡ ಒಕ್ಕದ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ಉಪಸ್ಥಿತರಿದ್ದರು.
ಕ್ರೀಡಾಜ್ಯೋತಿಯ ವಿಶೇಷ
ಈ ಬಾರಿ ವಿಶೇಷವಾಗಿ ಇದುವರೆಗೆ ಹಾಕಿ ಉತ್ಸವ ಆಯೋಜಿಸಿದ್ದ ಎಲ್ಲಾ ಕುಟುಂಬಗಳ ಐನ್‌ಮನೆಗಳಿಗೆ ಮ್ಯಾರಥಾನ್ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುವುದು. ಮಾ.೨೫ರಂದು ಬೆಳಗ್ಗೆ ೮ ಗಂಟೆಗೆ ಕೊಡವ ಹಾಕಿ ಉತ್ಸವದ ಜನಕರಾದ ಕರಡ ಗ್ರಾಮದ ಪಾಂಡಂಡ ಕುಟುಂಬದ ಐನ್’ಮನೆಯಲ್ಲಿ ಆರಂಭಗೊಳ್ಳಲಿರುವ ಮುದ್ದಂಡ ಹಾಕಿ ಉತ್ಸವದ ಕ್ರೀಡಾಜ್ಯೋತಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಲಿದ್ದಾರೆ. ನಂತರ ಪೊನ್ನಂಪೇಟೆಯ ೮ ಐನ್ ಮನೆಗಳನ್ನು ಕ್ರಮಿಸಿ, ಮಾ.೨೬ ರಿಂದ ೨೮ ರವರೆಗೆ ವಿವಿಧ ಐನ್ ಮನೆಗಳಿಗೆ ಕ್ರೀಡಾಜ್ಯೋತಿ ಸಾಗಲಿದೆ. ಮಾ.೨೮ರಂದು ಬೆಳಿಗ್ಗೆ ೯ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಮುಖ್ಯ ರಸ್ತೆಯ ಮೂಲಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನಕ್ಕೆ ಬೃಹತ್ ಮೆರವಣಿಗೆಯ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುವುದು. ನಾಲ್ಕು ದಿನವೂ ಪ್ರಮುಖ ಮ್ಯಾರಥಾನ್ ಓಟಗಾರರು ಕ್ರೀಡಾಜ್ಯೋತಿಯೊಂದಿಗೆ ಓಡಲಿದ್ದಾರೆ ಎಂದು ರಶಿನ್ ಸುಬ್ಬಯ್ಯ ಮಾಹಿತಿ ನೀಡಿದರು.
ಮಹಿಳಾ ಹಾಕಿ ಸಂಭ್ರಮ
ಬೆಳ್ಳಿಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮುದ್ದಂಡ ಹಾಕಿ ಉತ್ಸವದಲ್ಲಿ ಮಹಿಳಾ ತಂಡಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈಗಾಗಲೇ ೩೦ ತಂಡಗಳು ನೋಂದಾಯಿಸಿಕೊಂಡಿದ್ದು, ನೋಂದಣಿಯ ಕೊನೆಯ ದಿನಾಂಕ ಏ.೧೦ ಆಗಿರುವುದರಿಂದ ಮತ್ತಷ್ಟು ತಂಡಗಳು ಸೇರ್ಪಡೆಗೊಳ್ಳಲಿವೆ. ಮೂರನೇ ಮೈದಾನದಲ್ಲಿ ಮಹಿಳಾ ಹಾಕಿ ಪಂದ್ಯಾವಳಿ ನಡೆಯಲಿದೆ. ಸೆಮಿಫೈನಲ್ ಸಂದರ್ಭ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಲಾಲ್ ರಿಮ್ ಸಿಯಾಮಿ ಅವರು ಆಗಮಿಸಿದ ಹಾಕಿ ಕ್ರೀಡೆಯ ಕುರಿತು ಮಾಹಿತಿ ನೀಡಲಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹಾಗೂ ಒಲಂಪಿಯನ್ ಮನ್ ಪ್ರೀತ್ ಸಿಂಗ್ ಕೂಡ ಪಂದ್ಯಾವಳಿಯ ಸಂದರ್ಭ ಪಾಲ್ಗೊಳ್ಳಲಿದ್ದಾರೆ ಎಂದು ರಶಿನ್ ಸುಬ್ಬಯ್ಯ ತಿಳಿಸಿದರು.
ವಿವಿಧ ಕಾರ್ಯಕ್ರಮ ಆಯೋಜನೆ
ವಿಶೇಷವಾಗಿ ರಸಪ್ರಶ್ನೆ ಸ್ಪರ್ಧೆ ಮತ್ತು ತಂದ್-ಬೆಂದ್(ವಧು ವರರ ಅನ್ವೇಷಣೆ) ಕಾರ್ಯಕ್ರಮವನ್ನು ಪಂದ್ಯಾವಳಿ ನಡೆಯುವ ಮೈದಾನದ ಆವರಣದಲ್ಲಿ ಆಯೋಜಿಸಲಾಗುತ್ತಿದೆ. ಏ.೨೬ರಂದು ಸೈಕ್ಲೋಥಾನ್ ನಗರದಲ್ಲಿ ನಡೆಯಲಿದೆ. ಪ್ರೀ ಕ್ವಾರ್ಟರ್ ನಡೆಯುವ ದಿನದಿಂದ ಅಂತಿಮ ಪಂದ್ಯಾವಳಿ ದಿದವರೆಗೂ ಡಿಜೆ ಕಾರ್ಯಕ್ರಮ ಮನರಂಜಿಸಲಿದೆ. ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಮುಕ್ತ ಮಜಾ ರನ್ ನಡೆಯಲಿದೆ. ಅಂತಿಮ ದಿನದ ಸಮಾರಂಭದ ಸಂದರ್ಭ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನವಿರುತ್ತದೆ. ಸುಮಾರು ೨ ಸಾವಿರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ವಂದನಾ ಟ್ರಸ್ಟ್ ಸಂಸ್ಥೆ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯಗಳ ನಿರ್ವಹಣೆಯನ್ನು ಮಾಡಲಿದೆ ರಶಿನ್ ಸುಬ್ಬಯ್ಯ ಎಂದರು.