37 ಸೋಂಕಿತೆಯರಿಗೆ ಸುರಕ್ಷಿತ ಹೆರಿಗೆ ; 2 ತಿಂಗಳಲ್ಲಿ 66 ಗರ್ಭಿಣಿ, 21 ಬಾಣಂತಿಯರಿಗೆ ಕರೊನಾ

TMK_Hosptl 2
Published on

| ಜಗನ್ನಾಥ್ ಕಾಳೇನಹಳ್ಳಿ ತುಮಕೂರು

ಕಳೆದ ಎರಡು ತಿಂಗಳಲ್ಲಿ ಕರೊನಾ ಸೋಂಕಿತ 37 ಗರ್ಭಿಣಿಯರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸುವಲ್ಲಿ ಜಿಲ್ಲಾ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ತಾಯಿ-ಮಗು ಸುರಕ್ಷತೆಗೆ ಒತ್ತು ಕೊಡುವ ಜತೆಗೆ ಸೋಂಕು ಹರಡದಂತೆ ಕ್ರಮವಹಿಸಿರುವುದು ವಿಶೇಷವೆನಿಸಿದೆ.

ಕರೊನಾ ಎರಡನೇ ಅಲೆ ಜಿಲ್ಲೆಯೆಲ್ಲೆಡೆ ವ್ಯಾಪಿಸಿದ್ದು, 2 ತಿಂಗಳಲ್ಲಿ ಬರೋಬ್ಬರಿ 61881 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ 66 ಗರ್ಭಿಣಿಯರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಹಾಗೆಯೇ 21 ಬಾಣಂತಿಯರಿಗೂ ಕರೊನಾ ತಗುಲಿದೆ. ಈ ಪೈಕಿ ಜಿಲ್ಲಾ ಆಸ್ಪತ್ರೆಯಲ್ಲಿ 37 ಗರ್ಭಿಣಿಯರ ಹೆರಿಗೆಯನ್ನು ಸುರಕ್ಷಿತ ಕ್ರಮವಹಿಸಿ ವೈದ್ಯಕೀಯ ಸಿಬ್ಬಂದಿ ಮಾಡಿದ್ದಾರೆ. ಇದರಲ್ಲಿ ಅರ್ಧದಷ್ಟು ಸೀಜೆರಿಯನ್ ಕೂಡ ಇವೆ.

141 ಗರ್ಭಿಣಿಯರಿಗೆ ಸೋಂಕು: ಮೊದಲ ಹಾಗೂ 2ನೇ ಅಲೆಯಲ್ಲಿ ಒಟ್ಟು 141 ಗರ್ಭಿಣಿಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದಲ್ಲದೆ 46 ಬಾಣಂತಿಯರು ಕರೊನಾಕ್ಕೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ದೇಶದಲ್ಲಿ ಕರೊನಾ ಕಂಡುಬಂದ ಬಳಿಕ ಯಾವುದೇ ಹೆರಿಗೆಗೂ ಮುನ್ನಾ ಗರ್ಭಿಣಿಯರನ್ನು ಕಡ್ಡಾಯವಾಗಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲಾಗುತ್ತದೆ. ಆದರೆ, ಕೆಲವೊಮ್ಮೆ ಪ್ರಸವ ವೇದನೆ ಬಂದ ಬಳಿಕ ಆಸ್ಪತ್ರೆಗಳಿಗೆ ಗರ್ಭಿಣಿಯರು ಬಂದಿದ್ದು, ಕೋವಿಡ್ ಪರೀಕ್ಷೆ ವರದಿಗಾಗಿ ಕಾಯದೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 2 ತಿಂಗಳಲ್ಲಿ 37 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ. ಬಹುತೇಕ ಜಿಲ್ಲಾ ಆಸ್ಪತ್ರೆಯಲ್ಲೇ ಈ ಹೆರಿಗೆಗಳನ್ನು ಸ್ತ್ರೀ ಮತ್ತು ಪ್ರಸೂತಿ ತಜ್ಞ ವೈದ್ಯರ ನೇತೃತ್ವದ ತಂಡ ನೆರವೇರಿಸಿದೆ.

ಪ್ರತ್ಯೇಕ ವಾರ್ಡ್ :ಸೋಂಕಿತ ಗರ್ಭಿಣಿಯರ ಮೇಲೆ ಹೆಚ್ಚಿನ ನಿಗಾವಹಿಸಲು ಜಿಲ್ಲಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ಗಳಲ್ಲಿ ಆರೈಕೆ ಮಾಡಲಾಗುವುದು. ಬಾಣಂತಿಯರಿಗೂ ಆರೈಕ ಕೇಂದ್ರ ಇರಲಿದ್ದು ಮಗುವಿಗೆ ಹಾಲುಣಿಸಲು, ಸೋಂಕು ಹರಡದಂತೆ ಕ್ರಮವಹಿಸಲು ತಾಯಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಜತೆಗೆ ತಮ್ಮ ಜೀವ ಪಣವಿಟ್ಟು ಸೇವೆ ಸಲ್ಲಿಸುವ ವೈದ್ಯಕೀಯ ಸಿಬ್ಬಂದಿ ಸಹ ಎಲ್ಲ ಸುರಕ್ಷತಾ ಕ್ರಮವಹಿಸಲಿದ್ದಾರೆ ಎನ್ನುತ್ತಾರೆ ಆರ್​ಸಿಎಚ್ ಅಧಿಕಾರಿ ಡಾ.ಕೇಶವರಾಜ್.

ತಿಂಗಳಿಗೆ 3 ಸಾವಿರ ಹೆರಿಗೆ ! : ಜಿಲ್ಲೆಯಲ್ಲಿ ಪ್ರತೀ ತಿಂಗಳು 2700-3000 ಹೆರಿಗಗಳಾಗಲಿವೆ. ವರ್ಷಕ್ಕೆ 37 ರಿಂದ 40 ಸಾವಿರ ಹೆರಿಗೆಗಳಾಗುತ್ತವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಹೆರಿಗೆ ಆಗಲಿದ್ದು ಕರೊನಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಗರ್ಭಿಣಿಯರನ್ನು ಕರೊನಾ ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯ. ಜತೆಗೆ ಪ್ರಸವ ವೇದನೆ ಬಂದ ಸಂದರ್ಭದಲ್ಲಿ ಆಸ್ಪತ್ರೆಗೆ ಬರುವ ಗರ್ಭಿಣಿಯರಿಗೆ ಕೋವಿಡ್ ವರದಿ ಬರುವ ಮುನ್ನವೇ ಸೂಕ್ತ ಸುರಕ್ಷತಾ ಕ್ರಮವಹಿಸಿ ವೈದ್ಯಕೀಯ ಸಿಬ್ಬಂದಿ ಹೆರಿಗೆಗಳನ್ನು ಯಶಸ್ವಿಯಾಗಿ ಮಾಡಿಸುತ್ತಿದ್ದಾರೆ. ಕರೊನಾ ಸೋಂಕು ತಗುಲಿರುವ ಗರ್ಭಿಣಿಯರ ಸುಸೂತ್ರ ಹೆರಿಗೆ ದೊಡ್ಡ ಸವಾಲು. ಅದನ್ನು ನಮ್ಮ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ಹೆರಿಗೆ ಬಳಿಕ ತಾಯಿ-ಮಗು ಆರೋಗ್ಯಕ್ಕೆ ಹೆಚ್ಚಿನ ನಿಗಾ ವಹಿಸಲಾಗುವುದು. ನವಜಾತ ಶಿಶುಗಳಲ್ಲಿ ರೋಗನಿರೋಧಕ ಶಕ್ತಿ ತಾಯಿಯಿಂದ ಬಂದಿರುವುದರಿಂದ ಅವರಿಗೆ ಸೋಂಕು ತಗುಲುವ ಪ್ರಮಾಣ ತೀರಾ ಬೆರಳೆಣಿಕೆಯಷ್ಟು. ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್​ಗಳಲ್ಲಿ ತಾಯಿ-ಮಗು ಆರೈಕೆ ಮಾಡಲಾಗುವುದು. ಡಾ.ಕೇಶವರಾಜ್ ಆರ್​ಸಿಎಚ್ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net