೩೬೧ ರೈತರು ಬಡ್ಡಿ ಮನ್ನಾಗೆ ಅರ್ಹ

361 farmers are eligible for interest waiver
Published on

ಸುನಿಲ್ ಪೊನ್ನೇಟಿ ಮಡಿಕೇರಿ:

ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆ ಆಗಿ ಬರಗಾಲದ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಇರುವ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಹಕಾರಿ ಸಂಘ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದೆ. ೨೦೨೩ರ ಡಿಸೆಂಬರ್ ಅಂತ್ಯಕ್ಕೆ ಸುಸ್ತಿಯಾಗಿರುವ ಸಾಲ ಪಡೆದಿರುವ ರೈತರು ಈ ಯೋಜನೆಗೆ ಅರ್ಹರಾಗಿದ್ದು, ಈ ತಿಂಗಳ ೨೯ರ ಒಳಗೆ ಕಂತುಗಳ ಅಸಲನ್ನು ಪೂರ್ಣವಾಗಿ ಪಾವತಿಸಿದರೆ ಬಡ್ಡಿ ಮನ್ನಾದ ಅನುಕೂಲ ಪಡೆದುಕೊಳ್ಳಬಹುದಾಗಿದೆ. ಕೊಡಗಿನಲ್ಲಿ ಒಟ್ಟು ೩೬೧ ರೈತರು ಈ ಯೋಜನೆಗೆ ಅರ್ಹರಾಗಿದ್ದಾರೆ.

ಅತ್ಯಧಿಕ ಮಳೆಯಾಗುವ ಕೊಡಗು ಸೇರಿದಂತೆ ರಾಜ್ಯದಲ್ಲಿ ಈ ಬಾರಿ ವಾಡಿಕೆಯ ಮಳೆ ಆಗಿಲ್ಲ. ಜಿಲ್ಲೆಯಲ್ಲಿ ೨೦೨೩ ಜನವರಿಯಿಂದ ಡಿಸೆಂಬರ್ ತನಕ ವಾಡಿಕೆಯಂತೆ ೨೭೨೭.೬ ಮಿಮೀ ಮಳೆ ಆಗಬೇಕಿತ್ತು. ಆದರೆ ೧೬೮೯.೯ ಮಿಮೀ ಮಾತ್ರ ಮಳೆ ಬಂದಿದೆ. ಇದರಿಂದಾಗಿ ಶೇ. ೩೮ರಷ್ಟು ಪ್ರಮಾಣದಲ್ಲಿ ಮಳೆ ಕಡಿಮೆ ಸುರಿದಿದೆ. ಸಾಮಾನ್ಯವಾಗಿ ಜೂನ್‌ನಲ್ಲಿ ವಾಡಿಕೆಯ ೫೩೪ ಮಿಮೀ ಮಳೆ ಆಗಬೇಕಿದ್ದಲ್ಲಿ ಕೇವಲ ೧೦೫ ಮಿಮೀ ಮಳೆ ಬಂದಿದ್ದು. ಶೇ. ೮೦.೩ರಷ್ಟು ಹಿನ್ನಡೆ ಆಗಿತ್ತು. ಜುಲೈನಲ್ಲಿ ೮೫೯.೫ ಮಿಮೀ ವಾಡಿಕೆಯ ಮಳೆಯಾಗಬೇಕಿದ್ದಲ್ಲಿ ೮೨೧.೧೦ ಮಿಮೀ ಮಳೆ ಬಂದಿದ್ದು, ಶೇ. ೫.೭ರಷ್ಟು ಕಡಿಮೆ ಮಳೆ ಸುರಿದಿದೆ. ಅತಿ ಹೆಚ್ಚು ಮಳೆಗೆ ಸಾಕ್ಷಿ ಆಗುವ ಆಗಸ್ಟ್‌ನಲ್ಲಿ ವಾಡಿಕೆಯ ೫೭೨.೨ ಮಿಮೀ ಮಳೆ ಆಗಬೇಕಿದ್ದಲ್ಲಿ ೯೮.೧ ಮಿಮೀ ಮಾತ್ರ ಮಳೆ ಬಂದಿದ್ದು, ಶೇ ೮೨.೯ರಷ್ಟು ಮಳೆಯ ಪ್ರಮಾಣ ಕಡಿಮೆ ಆಗಿದೆ. ನವೆಂಬರ್‌ನಲ್ಲಿ ಮಾತ್ರ ವಾಡಿಕೆಯ ೭೩.೬ ಮಿಮೀ ಮಳೆ ಸುರಿಯಬೇಕಿದ್ದಲ್ಲಿ ೮೪.೧ ಮಿಮೀ ಮಳೆಯಾಗುವ ಮೂಲಕ ಶೇ.೧೪.೩ರಷ್ಟು ಹೆಚ್ಚು ಮಳೆ ಬಂದ್ದಿದ್ದರೂ ಇದರಿಂದ ಕೃಷಿಕರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು.

ಮಳೆಯ ಪ್ರಮಾಣ ನಿರೀಕ್ಷೆಯಂತೆ ಇರದ ಕಾರಣದಿಂದ ರೈತರು ತೀವ್ರ ಹಿನ್ನಡೆ ಅನುಭವಿಸುವಂತಾಯಿತು. ಇದರಿಂದಾಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮೇಲೆಯೂ ಪರಿಣಾಮ ಬೀರಿತು. ಮಡಿಕೇರಿ ತಾಲೂಕಿನಲ್ಲಿ ೬ ಸಾವಿರ ಹೆಕ್ಟೇರ್‌ನಲ್ಲಿ ಭತ್ತದ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿತ್ತಾದರೂ ಕೇವಲ ೩,೦೫೦ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡುವಂತಾಯಿತು. ಸೋಮವಾರಪೇಟೆ ತಾಲೂಕಿನಲ್ಲಿ ೯೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಗುರಿ ಹೊಂದಲಾಗಿತ್ತು. ೭೧೯೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿತ್ತು. ಈ ಭಾಗದಲ್ಲಿ ಮುಸುಕಿನ ಜೋಳ ವ್ಯಾಪಕವಾಗಿ ಬೆಳೆಯಲಾಗುತ್ತಿದ್ದು, ೩,೫೦೦ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಬೇಕಿದ್ದಲ್ಲಿ ೨,೯೩೬ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ೭೦ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಬೇಕಿದ್ದಲ್ಲಿ ಶೂನ್ಯ ಸಾಧನೆ ಆಗಿದೆ. ವಿರಾಜಪೇಟೆ ತಾಲೂಕಿನಲ್ಲಿ ೧೩,೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಬೇಕಿದ್ದಲ್ಲಿ ೮,೯೦೭ ಹೆಕ್ಟೇರ್‌ನಲ್ಲಿ ಮಾತ್ರ ಸಾಧನೆ ಮಾಡಲಾಗಿದೆ.
ಕೊಡಗಿನಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ, ಜೋಳ, ರಾಗಿ ಸೇರಿದಂತೆ ಒಟ್ಟಾರೆ ೩೨,೫೭೦ ಹೆಕ್ಟೇರ್ ಪ್ರದೇಶದಲ್ಲಿ ಕೃಷಿಯ ಗುರಿ ಹೊಂದಲಾಗಿತ್ತಾದರೂ ೨೨,೦೮೮ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿದೆ. ಈ ಮೂಲಕ ಮಳೆಯ ಕೊರತೆ ಮಧ್ಯೆಯೂ ಕೊಡಗಿನಲ್ಲಿ ಒಟ್ಟಾರೆ ೬೭.೮೨ರಷ್ಟು ಪ್ರದೇಶದಲ್ಲಿ ಬೆಳೆ ಬೆಳೆದಿದ್ದರೂ ಬರಗಾಲದಂತಹ ವಾತಾವರಣ ನಿರ್ಮಾಣ ಆದ ಕಾರಣದಿಂದ ಒಟ್ಟು ೯,೭೯೧.೧ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ. ಮಡಿಕೇರಿ ತಾಲೂಕಿನಲ್ಲಿ ೧,೯೭೨ ಹೆಕ್ಟೇರ್, ವಿರಾಜಪೇಟೆ ತಾಲೂಕಿನಲ್ಲಿ ೬೫೦ ಹೆಕ್ಟೇರ್, ಕುಶಾಲನಗರ ತಾಲೂಕಿನಲ್ಲಿ ೧೨ ಹೆಕ್ಟೇರ್, ಸೋಮವಾರಪೇಟೆ ತಾಲೂಕಿನಲ್ಲಿ ೧೧೬೧.೪೮ ಹೆಕ್ಟೇರ್ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ೩೮೨೫.೧ ಪ್ರದೇಶದಲ್ಲಿ ಭತ್ತ ಬೆಳೆ ಹಾನಿಯಾಗಿದ್ದು, ಕುಶಾಲನಗರ ತಾಲೂಕಿನಲ್ಲಿ ೧,೭೦೦ ಹೆಕ್ಟೇರ್ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ೪೭೦.೩೫ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳದ ಫಸಲು ನಷ್ಟವಾಗಿದೆ.
ರೈತರು ಮಳೆಯನ್ನೇ ನಂಬಿ ಸಾಲ ಮಾಡಿ ಕೃಷಿ ಚಟುವಟಿಕೆಗೆ ಇಳಿದಿರುತ್ತಾರೆ. ಆದರೆ ಮಳೆ ಕೊರತೆಯಾದರೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ಸ್ಥಿತಿ ಎದುರಿಸುತ್ತಾರೆ. ಈ ವರ್ಷ ರಾಜ್ಯಾದ್ಯಂತ ಇಂಥದ್ದೇ ಸ್ಥಿತಿ ನಿರ್ಮಾಣ ಆಗಿದ್ದು, ಸಾಲ ಮನ್ನಾ ಮಾಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರ ಮಾಡಿರುವ ಬೆಳೆ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಘೋಷಣೆ ಮಾಡಿದ್ದರು. ’ಕೃಷಿ ಸಾಲವನ್ನು ಪಡೆದವರಲ್ಲಿ ಯಾರೆಲ್ಲಾ ಅಸಲು ಮರುಪಾವತಿ ಮಾಡುತ್ತಾರೋ ಅವರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಾಗುತ್ತದೆ. ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರಲಿಲ್ಲ. ಆದರೂ ಮಾಡುತ್ತೇವೆ. ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುತ್ತೇವೆ,’ ಎಂದು ಸಿದ್ದರಾಮಯ್ಯ ಹೇಳಿದ್ದರು.
ಈ ಬೆನ್ನಲ್ಲೇ ಸರ್ಕಾರ ಜ.೨೦ರಂದು ಆದೇಶ ಹೊರಡಿಸಿದ್ದು, ’ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ಪಡೆದು ೨೦೨೩ರ ಡಿ.೩೧ಕ್ಕೆ ಸುಸ್ತಿಯಾಗಿರುವ ರೈತರು ಕಂತುಗಳ ಅಸಲನ್ನು ಫೆ.೨೯ ರೊಳಗೆ ಸಂಬಂಧಪಟ್ಟ ಪತ್ತಿನ ಸಹಕಾರ ಸಂಘ ಅಥವಾ ಬ್ಯಾಂಕುಗಳಿಗೆ ಪೂರ್ತಿಯಾಗಿ ಮರು ಪಾವತಿಸಿದಲ್ಲಿ ಮರುಪಾವತಿ ದಿನಾಂಕದವರೆಗೆ ಬಾಕಿ ಇರುವ ಬಡ್ಡಿ ಮನ್ನಾ ಮಾಡಲು ಮತ್ತು ಈ ರೀತಿ ಮನ್ನಾ ಮಾಡಿದ ಮೊಬಲಗನ್ನು ಸಹಕಾರ ಸಂಘಗಳಿಗೆ ಭರ್ತಿ ಮಾಡಬೇಕು,’ ಎಂದು ಆದೇಶ ಮಾಡಲಾಗಿದೆ.

ರಾಜ್ಯದಲ್ಲಿ ಒಟ್ಟಿ ೫೬,೮೭೯ ರೈತರಿಗೆ ಈ ಯೋಜನೆಯ ಲಾಭ ಸಿಗಲಿದೆ. ಕೊಡಗಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಪಡೆದು ೨೦೨೩ರ ಡಿ. ೩೧ಕ್ಕೆ ನಿಗದಿತ ಅವಧಿಯ ಕಂತುಗಳನ್ನು ಪಾವತಿಸದೇ ಸುಸ್ತಿದಾರರಾಗಿರುವ ೮೯ ರೈತರಿದ್ದು, ೩.೯೨ ಕೋಟಿ ರೂ. ಸುಸ್ತಿಯಾದ ಕಂತಿನ ಮೊತ್ತ ಹೊಂದಿದ್ದಾರೆ. ಇದನ್ನು ಫೆ.೨೯ ರೊಳಗೆ ಪಾವತಿ ಮಾಡಿದಲ್ಲಿ ೮೯.೮೩ ಲಕ್ಷ ರೂ.ಗಳ ಬಡ್ಡಿ ಮನ್ನಾ ಅನುಕೂಲ ಪಡೆದುಕೊಳ್ಳುತ್ತಾರೆ. ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಲ್ಲಿ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ಪಡೆದು ೨೦೨೩ರ ಡಿ.೩೧ಕ್ಕೆ ಸುಸ್ತಿಯಾಗಿರುವ ೨೭೨ ರೈತರು ಇದ್ದು, ಇವರು ೨.೩೩ ಕೊಟಿ ರೂ. ಸುಸ್ತಿಯಾದ ಕಂತಿನ ಮೊತ್ತ ಹೊಂದಿದ್ದಾರೆ. ಸರ್ಕಾರ ನಿಗದಿ ಮಾಡಿರುವ ಫೆ. ೨೯ರ ಗಡುವಿನ ಒಳಗೆ ರೈತರು ಈ ಮೊತ್ತ ಪಾವತಿಸಿದರೆ ೨.೬೭ ಕೊಟಿ ರೂ. ಬಡ್ಡಿ ಮನ್ನಾ ಸೌಲಭ್ಯದ ಲಾಭ ಪಡೆದುಕೊಳ್ಳುತ್ತಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಹಾಗೂ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಪಡೆದು ೨೦೨೩ರ ಡಿ. ೩೧ಕ್ಕೆ ಸುಸ್ತಿಯಾಗಿರುವ ರೈತರು ಕಂತುಗಳ ಅಸಲನ್ನು ದಿನಾಂಕ ಫೆ.೨೯ರ ಒಳಗೆ ಸಂಬಂಧಪಟ್ಟ ಪತ್ತಿನ ಸಹಕಾರ ಸಂಘ ಅಥವಾ ಬ್ಯಾಂಕುಗಳಿಗೆ ಪೂರ್ತಿಯಾಗಿ ಮರು ಪಾವತಿಸಿದಲ್ಲಿ ಮರುಪಾವತಿ ದಿನಾಂಕದವರೆಗೆ ಬಾಕಿ ಇರುವ ಬಡ್ಡಿ ಮನ್ನಾ ಮಾಡಲಾಗುತ್ತದೆ
ಕೆ.ಎನ್. ರಾಜಣ್ಣ, ಸಹಕಾರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net