

ಔರಾದ್: ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಶುಕ್ರವಾರ ಹೈದರಾಬಾದ್ ಮೂಲದ ರಾಣಿ ಇಂಡಸ್ಟ್ರೀಜ್ ಕಂಪನಿ ಏರ್ಪಡಿಸಿದ ಕ್ಯಾಂಪಸ್ ಸಂದರ್ಶನದಲ್ಲಿ 36 ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಸಂದರ್ಶನಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಐಟಿಐ ತರಬೇತಿದಾರರು ಆಗಮಿಸಿದ್ದರು. ಮೌಖಿಕ, ಲಿಖಿತ ಪರೀಕ್ಷೆ ನಡೆಸಿ ಅಂತಿಮವಾಗಿ 36 ತರಬೇತಿದಾರರನ್ನು ಆಯ್ಕೆ ಮಾಡಲಾಯಿತು. ಎಲ್ಲ ಅಭ್ಯರ್ಥಿಗಳಿಗೆ ಉದ್ಯೋಗ ದೃಢೀಕರಣ ಪತ್ರ ನೀಡಿ ಡಿ.15ರೊಳಗಾಗಿ ಕೆಲಸಕ್ಕೆ ಹಾಜರಾಗಲು ಸೂಚಿಸಲಾಯಿತು.
ಉದ್ಘಾಟಿಸಿದ ತಾಪಂ ಉಪಾಧ್ಯಕ್ಷ ನೆಹರು ಪಾಟೀಲ್ ಮಾತನಾಡಿ, ನಮ್ಮಲ್ಲಿ ಪ್ರತಿಭೆಗಳ ಕೊರತೆ ಇಲ್ಲ. ಆದರೆ ಅವಕಾಶ ಸಿಗುತ್ತಿಲ್ಲ. ಇದೇ ಮೊದಲ ಬಾರಿಗೆ ಕಾಲೇಜಿನಲ್ಲಿ ಸಂದರ್ಶನ ಆಯೋಜಿಸಿ ಹಲವು ಅಭ್ಯರ್ಥಿಗಳಿಗೆ ಉದ್ಯೋಗ ಕೊಡಿಸಿರುವುದು ಶ್ಲಾಘನೀಯ ಎಂದರು.
ಸರ್ಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ಶಿವಕುಮಾರ ಘಾಟೆ ಮಾತನಾಡಿ, ಕಾಲೇಜಿನ ಪ್ರಾಚಾರ್ಯ ಶಿವಶಂಕರ ಟೋಕರೆ ಅವರ ಕಾಳಜಿಯಿಂದ ಸಂದರ್ಶನ ನಡೆದಿದೆ. ಆಯ್ಕೆಯಾದ ಅಭ್ಯರ್ಥಿಗಳು ವೃತ್ತಿ ಗೌರವ ಕಾಪಾಡಿಕೊಂಡು ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ಹಾರೈಸಿದರು.
ಕಂಪನಿ ಹಿರಿಯ ವ್ಯವಸ್ಥಾಪಕ ಕಿಶೋರ ಮಾತನಾಡಿದರು. ಪ್ರಾಚಾರ್ಯ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಾಂತ ಹುಲಸೂರೆ, ರಾಜಕುಮಾರ ಮಳಿಗೆ, ದಯಾನಂದ ಬಂಬಳಗೆ, ಸತೀಶ ಗಂದಿಗುಡಿ ಇತರರಿದ್ದರು.