

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯಲ್ಲಿ ಒಂದೇ ಒಂದು ರೂಪಾಯಿ ಕೂಡ ಕಾಂಗ್ರೆಸ್ ಸರ್ಕಾರದ ಕೊಡುಗೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದರು.
ಬಿಜೆಪಿ ಸರ್ಕಾರದಲ್ಲಿ ನೀಡಿದ್ದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದುಕೊಳ್ಳುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಬಿಡುಗಡೆಯಾದ 36 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರಕ್ಕೆ ವಾಪಾಸ್ ಪಡೆದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಚಂದ್ರಗುತ್ತಿಗೆ 1 ಕೋಟಿ ರೂ. ನೀಡಿದ್ದರು. 2023ರಲ್ಲಿ ಗೆದ್ದು ಬಂದ ಕಾಂಗ್ರೆಸ್ ಅದನ್ನು ವಾಪಸ್ ಮಾಡಲು ಸೂಚಿಸಿದೆ. ಕದಂಬರ ಜಾಗ ಅಭಿವೃದ್ಧಿ, ಶಕ್ತಿ ಮಾತಾಂಗದೇವಿಯ ದೇವಸ್ಥಾನ, ಸಕ್ರೆಬೈಲ್‌ನ ಅಭಿವೃದ್ಧಿಗೆ ಬಿಡುಗಡೆ ಆಗಿದ್ದ 17 ಕೋಟಿ ರೂ. ಹಿಂಪಡೆದುಕೊಂಡಿದೆ. ಇದು ಸಚಿವರಿಗೆ ಗೊತ್ತಿಲ್ಲವಾ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಬಿಡುಗಡೆಯಾದ 150 ಕೋಟಿ ರೂ. ಹಣ ಸಣ್ಣ ನೀರಾವರಿ ಅಭಿವೃದ್ಧಿಗೆ ಬಿಡುಗಡೆಯಾಗಿದ್ದನ್ನೂ ಕಾಂಗ್ರೆಸ್ ತಡೆಹಿಡಿದಿದೆ. ಶಿವಮೊಗ್ಗದ ಫ್ರೀಡಂಪಾರ್ಕ್ ನಿರ್ಮಿಸಿರುವ ಬಗ್ಗೆ ಕೆಲವರು ಉಸ್ತುವಾರಿ ಸಚಿವರಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದಾರೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಮುಖಂಡರಾದ ಎಸ್.ದತ್ತಾತ್ರಿ, ಧರ್ಮಪ್ರಸಾದ್, ಕೆ.ವಿ.ಅಣ್ಣಪ್ಪ, ಕಾರ್ಮಿಕ ಮುಖಂಡ ಬಾಲಕೃಷ್ಣ ಇದ್ದರು.