

ಮಡಿಕೇರಿ: ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಸುಮಾರು ೩೫೯ ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದ್ದು, ಸರ್ಕಾರದ ವಿವಿಧ ಉದ್ದೇಶಗಳಿಗೆ, ಮಾಜಿ ಸೈನಿಕರಿಗೆ ಹಾಗೂ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಂಬಂಧ ಸೋಮವಾರ ಆಯೋಜಿಸಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ರಚಿಸಲಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಪಳನಿ ಪ್ರಕಾಶ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕು ಎಂದು ಜಿಲ್ಲಾಧಿಕಾರಿರವರಲ್ಲಿ ಮನವಿ ಮಾಡಿದರು.
ಪ್ರತಿಕ್ರಿಯಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಸರ್ಕಾರಿ ಕಚೇರಿಗಳು, ವಸತಿ ಶಾಲೆಗಳು, ಅಂಗನವಾಡಿ, ಸಮುದಾಯ ಭವನ, ಮಾಜಿ ಸೈನಿಕರು, ಹಾಗೆಯೇ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲೆಯ ವಿವಿಧ ಕಡೆಗಳಲ್ಲಿ ಸರ್ಕಾರಿ ಭೂಮಿ ಗುರುತಿಸಲಾಗಿದೆ. ನಿವೇಶನ ರಹಿತ ಸಂಬಂಧ ೧೩೦೦ ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಶೇ.೧೦ ರಿಂದ ೨೦ ರಷ್ಟು ಭೂಮಿಯನ್ನು ಮಾಜಿ ಸೈನಿಕರಿಗೆ ಕಾಯ್ದಿರಿಸಲು ಉದ್ದೇಶಿಸಲಾಗಿದೆ ಎಂದರು.
ನಿವೇಶನ ರಹಿತ ಸಂಬಂಧ ಆಯಾಯ ಗ್ರಾಮ ಸಭೆಯಲ್ಲಿ ನಿವೇಶನ ರಹಿತರನ್ನು ಆಯ್ಕೆ ಮಾಡಿದರೆ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬಹುದು. ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕೂಡಲೇ ಜಾಗ ಒದಗಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ೪ ಕೋಟಿ ರೂ. ಅನುದಾನವಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಮಾಹಿತಿ ನೀಡಿದರು.
ಮಡಿಕೇರಿ ನಗರದಲ್ಲಿ ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸುವ ಕಾರ್ಯ ಇನ್ನೂ ಆರಂಭವಾಗಿಲ್ಲ. ಆ ನಿಟ್ಟಿನಲ್ಲಿ ಕೂಡಲೇ ಮನೆ ನಿರ್ಮಾಣಕ್ಕೆ ಮುಂದಾಗುವಂತೆ ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮಾಹಿತಿ ನೀಡಿದ ನಗರಸಭೆ ಎಂಜಿನಿಯರ್ ಸೌಮ್ಯ, ಜಿ+೧ ಮಾದರಿಯಲ್ಲಿ ಮನೆ ನಿರ್ಮಿಸಬೇಕಿದ್ದು, ಒಂದು ಮನೆಗೆ ೭ ಲಕ್ಷ ರೂ. ನಿಗಧಿಯಾಗಿದ್ದು, ಟೆಂಡರ್ ಆಹ್ವಾನಿಸಿದರೂ ಸಹ ಯಾರೂ ಮುಂದೆ ಬರುತ್ತಿಲ್ಲ ಎಂದು ಜಿಲ್ಲಾಧಿಕಾರಿರವರ ಗಮನಕ್ಕೆ ತಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೀಡಲಾಗುವ ಸಾಲ ಸೌಲಭ್ಯ ಸಂಬಂಧ ಬ್ಯಾಂಕ್‌ಗಳಲ್ಲಿ ಸುಲಲಿತವಾಗಿ ಸಾಲ ದೊರೆಯುವಂತಾಗಬೇಕು. ಪೌರ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳು ತಲುಪಬೇಕು. ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲೂ ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪ್ರವೇಶಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಪಳನಿ ಪ್ರಕಾಶ್ ಕೋರಿದರು.
ಅರುವತ್ತೋಕ್ಲು ಗ್ರಾ.ಪಂ.ವ್ಯಾಪ್ತಿಯ ಕಾರೆಕಾಡು ಗಿರಿಜನ ಕಾಲನಿಯಲ್ಲಿ ಒಂದು ತಿಂಗಳ ಒಳಗೆ ಶೌಚಾಲಯ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿರವರು ತಾಕೀತು ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಮಾತನಾಡಿ, ಸೋಮವಾರಪೇಟೆ ತಾಲೂಕಿನ ಊರುಡುವೆ ಜಮೀನುಗಳಲ್ಲಿ ವಾಸವಾಗಿದ್ದ, ೯೪ ಸಿ’ರಡಿ ಅರ್ಜಿ ಸಲ್ಲಿಸಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಗ್ರಾಮ ಅರಣ್ಯ ಹಕ್ಕು ಸಮಿತಿ ರಚನೆಯಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಪ್ರತಿಕ್ರಿಯಿಸಿ, ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ಆಯ್ಕೆಯಾದ ಅರ್ಜಿಗಳನ್ನು ೧೫ ದಿನದೊಳಗೆ ಉಪ ವಿಭಾಗ ಮಟ್ಟಕ್ಕೆ ಕಳುಹಿಸಿಕೊಡಬೇಕು. ನಂತರ ೧೫ ದಿನದೊಳಗೆ ಜಿಲ್ಲಾ ಮಟ್ಟಕ್ಕೆ ಸಲ್ಲಿಸಿದ್ದಲ್ಲಿ, ಅರಣ್ಯ ಹಕ್ಕು ಕಾಯ್ದೆಯಡಿ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಸಮಿತಿ ಸದಸ್ಯರಾದ ಸುಕುಮಾರ್, ಜಾಯ್ಸ ಮೆನೇಜಸ್, ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ಜಿ.ಪಂ.ಯೋಜನಾ ನಿರ್ದೇಶಕ ಜಗದೀಶ್, ತಹಶೀಲ್ದಾರ್ ಮಹೇಶ್, ತಾ.ಪಂ.ಇಒಗಳಾದ ಅಪ್ಪಣ್ಣ, ಜಯಣ್ಣ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.