

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಕ್ರಮ ಸ್ಪಿರಿಟ್ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 350 ಲೀ. ಸ್ಪಿರಿಟ್ ವಶ ಪಡಿಸಿಕೊಂಡ ಟನೆ ನಗರದ ಕೆಲಗೇರಿ ಬ್ರಿಜ್ ಬಳಿ ಬುಧವಾರ ನಡೆದಿದೆ.
ಕಾರಿನಲ್ಲಿ ಸ್ಪಿರಿಟ್ ಸಾಗಿಸುತ್ತಿರುವ ವಿಷಯ ತಿಳಿದ ಕಾರ್ಯಾಚರಣೆಗೆ ಇಳಿದ ಪೊಲೀಸರು, ಕೆಲಗೇರಿ ಬ್ರಿಜ್ ಬಳಿ ಕಾರು ಪರಿಶೀಲಿಸಿದಾಗ ಸ್ಪಿರಿಟ್ ಪತ್ತೆಯಾಗಿದೆ. ಕಾರಿನಲ್ಲಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಕಾರು, ಕಾರಿನಲ್ಲಿದ್ದ 2,50,000 ರೂ. ಮೌಲ್ಯದ 350 ಲೀಟರ್ ಸ್ಪಿರಿಟ್ ಸೇರಿ ಒಟ್ಟು 6,60,000 ರೂ. ಮೌಲ್ಯದ ವಸ್ತಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋಧಕ್ಕೆ ಬಲೆ ಬೀಸಿದ್ದಾರೆ. ಸಿಸಿಬಿ ವಿಭಾಗದ ಎಸಿಪಿ ಎಸ್.ಟಿ.ಒಡೆಯರ ನೇತೃತ್ವದಲ್ಲಿ ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ಸಿದ್ದಪ್ಪ ಸಿಮಾನಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.