ಅಂತರ ಜಿಲ್ಲಾ ಕಳ್ಳನ ಸೆರೆ

29HSN3 (2)
Published on


ವಿಜಯವಾಣಿ ಸುದ್ದಿಜಾಲ ಹಾಸನ
ಮನೆಗಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಅಂತರ ಜಿಲ್ಲಾ ಕಳ್ಳನನ್ನು ಗೊರೂರು ಠಾಣೆ ಪೊಲೀಸರು ಬಂಧಿಸಿದ್ದು 35 ಲಕ್ಷ ರೂ. ಬೆಲೆ ಬಾಳುವ 675 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಇನ್ನೊಬ್ಬ ಆರೋಪಿ ನಾಪತ್ತೆಯಾಗಿದ್ದಾನೆ.
ಬಂಧಿತನಿಗೆ ಕೋವಿಡ್-19 ದೃಢಪಟ್ಟಿದೆ. ಈತನಿಗಾಗಿ ಒಂದು ವರ್ಷದಿಂದ ಹುಡುಕಾಟ ನಡೆದಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹೆಡತಲೆ ಗ್ರಾಮದ ಗಿರೀಶ್‌ಕುಮಾರ್ (29)ಬಂಧಿತ. ಬೆಳಗಾವಿ ಮೂಲದ ರಾಜೇಶ್ (30) ನಾಪತ್ತೆಯಾಗಿದ್ದಾನೆ.
ಶಾಂತಿಗ್ರಾಮದಲ್ಲಿ ಸಿಕ್ಕಿಬಿದ್ದ ಕಳ್ಳ: 2020ರ ಜನವರಿ 1 ರಂದು ದುದ್ದ ವ್ಯಾಪ್ತಿಯ ಅಟ್ಟಾವರ ಹೊಸಹಳ್ಳಿ ಕೊಪ್ಪಲು ಗ್ರಾಮದ ಮನೆಯೊಂದರಲ್ಲಿ 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದರು. ಆ.23 ರಂದು ಶಾಂತಿಗ್ರಾಮ ರಾಷ್ಟ್ರೀಯ ಹೆದ್ದಾರಿ ಟೋಲ್‌ನಲ್ಲಿ ಬೈಕ್‌ನಲ್ಲಿ ಹೊರಟಿದ್ದ ಗಿರೀಶ್‌ಕುಮಾರ್ ಮೇಲೆ ಸಂಶಯ ಬಂದು ವಿಚಾರಣೆಗೆ ಒಳಪಡಿಸಿದಾಗ ಸತ್ಯ ತಿಳಿದಿದೆ. ನಂತರ ಆತ ಅಂತರ ಜಿಲ್ಲಾ ಕಳ್ಳನೆಂಬುದು ಗೊತ್ತಾಗಿದೆ ಎಂದರು.
ತಂತ್ರಜ್ಞಾನದಲ್ಲಿ ನಿಪುಣ: ಕಳ್ಳತನವನ್ನೇ ಉಸಿರಾಗಿಸಿಕೊಂಡಿರುವ ಗಿರೀಶ್‌ಕುಮಾರ್ ಹಾಗೂ ರಾಜೇಶ್ ಹಲವು ಪ್ರಕರಣಗಳಿಂದ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಇಬ್ಬರೂ ಕಳ್ಳತನ ವೃತ್ತಿಯನ್ನೇ ಜೀವನಾಧಾರ ಮಾಡಿಕೊಂಡಿದ್ದರು. ಕಳ್ಳತನಕ್ಕೆ ಸಂಬಂಧಿಸಿದಂತೆ ಅರಸೀಕೆರೆ ಠಾಣೆಯಲ್ಲಿ 2, ಜಾವಗಲ್ 1, ನುಗ್ಗೇಹಳ್ಳಿ 1, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾವರಕೆರೆ 1, ಮೈಸೂರಿನ ವಿದ್ಯಾರಣ್ಯಪುರಂ, ಕೃಷ್ಣರಾಜ, ಅಶೋಕಪುರಂ ಠಾಣೆಯಲ್ಲಿ ಸೇರಿ 14 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಡಿಜಿಟಲ್ ಮಾಧ್ಯಮ ಬಳಕೆಯಲ್ಲಿ ನಿಪುಣನಾಗಿರುವ ಗಿರೀಶ್‌ಕುಮಾರ್ ಕಳ್ಳತನಕ್ಕಾಗಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾನೆ. ವಾಟ್ಸ್‌ಆ್ಯಪ್ ಈತನಿಗೆ ಸಾಕಷ್ಟು ನೆರವಾಗಿದೆ ಎಂದು ಹೇಳಿದರು.
ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಸಿಪಿಐ ವೈ.ಸತ್ಯನಾರಾಯಣ, ಗೊರೂರು ಠಾಣೆ ಎಸ್‌ಐ ಜಗದೀಶ್, ಸಿಬ್ಬಂದಿ ರವಿಕುಮಾರ್, ಬಿ.ಆರ್.ಮಂಜುನಾಥ್, ಸುಬ್ರಹ್ಮಣ್ಯ, ನಿಶಾಂತ್ ಅವರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ಸಿಪಿಐ ವೈ.ಸತ್ಯನಾರಾಯಣ ಇದ್ದರು.

ಕಾನೂನು ವೈಫಲ್ಯ ಅಲ್ಲ
ಚನ್ನರಾಯಪಟ್ಟಣದಲ್ಲಿ ನಡೆದಿರುವ ಕೊಲೆ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ನಾನು ಅಥವಾ ಎಎಸ್ಪಿ ಅಲ್ಲಿಗೆ ನಿತ್ಯ ಭೇಟಿ ನೀಡುತ್ತಿದ್ದೇವೆ. ಹತ್ಯೆ ಪ್ರಕರಣಗಳನ್ನು ಪೊಲೀಸ್ ವೈಫಲ್ಯ ಎಂದು ಕರೆಯುವುದು ಸರಿಯಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ಹೇಳಿದರು.
ಪಾರಿವಾಳ ವಿಚಾರ ಹಾಗೂ ಸ್ನೇಹಿತರ ನಡುವೆ ನಡೆದ ಗಲಾಟೆ ಹೊರತುಪಡಿಸಿದರೆ ಬೇರೆ ಯಾವುದೇ ಗಂಭೀರ ಪ್ರಕರಣ ನಡೆದಿಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು, ಮುಂಬೈನಲ್ಲಿದ್ದ ಯುವಕರು ವಾಪಸಾಗಿದ್ದಾರೆ. ರಾತ್ರಿ ಪಾರ್ಟಿಗಾಗಿ ಹೋದಾಗ ಸುಖಾಸುಮ್ಮನೆ ಜಗಳ ಮಾಡುತ್ತಿದ್ದಾರೆ ಎಂದರು.
ಚನ್ನರಾಯಪಟ್ಟಣದಲ್ಲಿ ರೌಡಿಸಂ ಹೆಚ್ಚಿದೆ ಎಂಬ ಆರೋಪ ಸತ್ಯಕ್ಕೆ ದೂರ. ಯಾರಿಗೆ ಯಾರ ಬೆಂಬಲವೂ ಇಲ್ಲ. ರಾಜಕಾರಣಿಗಳು ರೌಡಿಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆಂಬ ಕುರಿತು ನಮಗೆ ಯಾವ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರ ಪೈಕಿ ನಾಲ್ವರನ್ನು ಬಂಧಿಸಿದ್ದು ಮತ್ತೊಂದರಲ್ಲಿ ನಾಲ್ವರ ಪೈಕಿ ಮೂವರು ಸಿಕ್ಕಿಬಿದ್ದಿದ್ದಾರೆ. ನಾಪತ್ತೆಯಾಗಿರುವ ಇಬ್ಬರ ಪತ್ತೆಗೆ ಕ್ರಮ ವಹಿಸಲಾಗಿದೆ. ಚನ್ನರಾಯಪಟ್ಟಣದಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 35 ಜನರ ಬಂಧನವಾಗಿದೆ ಎಂದರು.
ಗಸ್ತು ಸಂಚಾರ ಇದೆ: ಹಾಸನದ ಎನ್‌ಆರ್ ವೃತ್ತದಲ್ಲಿ ಸೋಮವಾರ ರಾತ್ರಿ ನಡೆದ ಕೊಲೆ ಪ್ರಕರಣ ಖಂಡನೀಯ. ಕೃತ್ಯದ ಆರೋಪಿ ಯಾವ ಮನಸ್ಥಿತಿಯಲ್ಲಿದ್ದ ಎಂಬುದು ಆತ ಪತ್ತೆಯಾಗುವವರೆಗೆ ಗೊತ್ತಾಗುವುದಿಲ್ಲ ಎಂದರು.
ನಗರದ ಎಲ್ಲ ಠಾಣೆ ವ್ಯಾಪ್ತಿಯಲ್ಲಿ ಸಿಬ್ಬಂದಿ ನಾಲ್ಕು ಸುತ್ತು ಗಸ್ತು ತಿರುಗುತ್ತಾರೆ. ಘಟನೆ ನಡೆದ ಸ್ಥಳದಲ್ಲಿ ಸಿಬ್ಬಂದಿ ರಾತ್ರಿ 11 ಗಂಟೆಗೆ ತೆರಳಿದ್ದು 11.30ಕ್ಕೆ ಆತ ಅಲ್ಲಿಗೆ ಬಂದು ಕೃತ್ಯ ಎಸಗಿದ್ದಾನೆ. ಮಹಿಳೆ ಪಕ್ಕ ಇನ್ನೊಬ್ಬ ವ್ಯಕ್ತಿಯೂ ಇದ್ದ. ಆದರೆ ಆರೋಪಿಯ ಕುರಿತು ಇದುವರೆಗೆ ಯಾರೂ ಮಾಹಿತಿ ನೀಡಿಲ್ಲ. ಆತ ಎಷ್ಟು ದಿನದಿಂದ ಹಾಸನದಲ್ಲಿದ್ದ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ ಎಂದರು.

ಡ್ರಗ್ಸ್ ಮಾಫಿಯಾ ಕುರಿತು ಜಿಲ್ಲೆಯಲ್ಲೂ ತನಿಖೆ ನಡೆಯುತ್ತಿದೆ. ಆದರೆ ಇಲ್ಲಿವರೆಗೆ ಯಾರನ್ನೂ ಬಂಧಿಸಿಲ್ಲ. ಮಾದಕ ವಸ್ತು ನಿಗ್ರಹ ದಳ ಅಧಿಕಾರಿಯೊಂದಿಗೆ ಮಾತನಾಡಿದ್ದು ಜಿಲ್ಲೆಯ ಮೆಡಿಕಲ್ ಶಾಪ್‌ಗಳಲ್ಲಿ ತಪಾಸಣೆ ನಡೆಸುವಂತೆ ಸೂಚಿಸಿದ್ದೇನೆ. ಈ ಕುರಿತು ಸೋಮವಾರ ಹೆಚ್ಚಿನ ಮಾಹಿತಿ ನೀಡುತ್ತೇನೆ.
ಆರ್. ಶ್ರೀನಿವಾಸ್‌ಗೌಡ, ಎಸ್ಪಿ ಹಾಸನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net