ಮೈಸೂರು ಜಿಲ್ಲೆಯಲ್ಲಿ 35 ರೈತರು ಆತ್ಮಹತ್ಯೆ

mysore
Published on

ಮೈಸೂರು: ಬೆಳೆ ನಷ್ಟ ಸೇರಿದಂತೆ ವಿವಿಧ ಕಾರಣಕ್ಕೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 35 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ತಿಳಿಸಿದರು.


2023ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಇಷ್ಟು ಪ್ರಮಾಣದಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಪಿರಿಯಾಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ. ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿ ಶಿಫಾರಸಿನ ವರದಿಯಂತೆ 23 ರೈತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 3 ಪ್ರಕರಣಗಳಲ್ಲಿ ಸರಿಯಾದ ದಾಖಲೆಗಳಿಲ್ಲದ ಕಾರಣ ಮರು ಪರಿಶೀಲನೆ ನಡೆಸಲಾಗುತ್ತದೆ. ಉಳಿದ ಪ್ರಕರಣಗಳ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಾನುಸಾರ ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ತಂಬಾಕು ಬೆಳೆ ಬೆಳೆದರೂ ಪ್ರತಿಯೊಂದನ್ನೂ ಕೂಲಿ ಕಾರ್ಮಿಕರ ಮೂಲಕ ಕೆಲಸ ಮಾಡಿಸಿದರೆ ಆದಾಯ ಬರುವುದಿಲ್ಲ. ಇದಲ್ಲದೆ, ಕೃಷಿ ವ್ಯವಸಾಯಕ್ಕೆ ಅನುಸರಿಸಬೇಕಾದ ಕ್ರಮ ಪಾಲಿಸದೆ ನಷ್ಟ ಅನುಭವಿಸಿರುವುದು ಆತ್ಮಹತ್ಯೆಗೆ ಕಾರಣವಾಗಿದೆ ಎಂದರು.


ಶೇ.17 ಹಿಂಗಾರು ಮಳೆ ಕೊರತೆಯಾಗಿದೆ. ಆದರೆ, ಅಕ್ಟೋಬರ್‌ನಲ್ಲಿ ಬಿದ್ದ ಮಳೆಯಿಂದ ಶೇ.103 ಬಿತ್ತನೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಮೀರಿ 63,300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹುರುಳಿ, ಹಲಸಂದೆ, ಮುಸುಕಿನ ಜೋಳ ಬಿತ್ತನೆಯಾಗಿದೆ. ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ ಕೊರತೆ ಇಲ್ಲ ಎಂದರು.


ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಿಲ್ಲೆಗೆ 23.87 ಕೋಟಿ ರೂ. ನಿಗದಿಪಡಿಸಿದ್ದು, ಎಸ್‌ಸಿ, ಎಸ್ಟಿ ಹಾಗೂ ಸಾಮಾನ್ಯ ವರ್ಗದ ರೈತರಿಗೆ ಶೇ.90 ಸಹಾಯಧನವನ್ನು ಹನಿ ಮತ್ತು ತುಂತುರು ನೀರಾವರಿ ಘಟಕ ನಿರ್ಮಾಣಕ್ಕೆ ಒದಗಿಸಲು ಅವಕಾಶ ಇದೆ. 2023-24ನೇ ಸಾಲಿನ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ರೈತರಿಗೆ ಲಘು ಪೋಷಕಾಂಶಗಳು, ಪೀಡೆನಾಶಕಗಳು, ಜಿಪ್ಸಂ ಮಣ್ಣು ಸುಧಾರಕಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.


ಮಳೆಯಾಶ್ರಿತ ಕೃಷಿ ನೀತಿ ಅನ್ವಯ ಜಿಲ್ಲೆಯ ನಂಜನಗೂಡು, ತಿ.ನರಸೀಪುರ, ಕೆ.ಆರ್.ನಗರ ಮತ್ತು ಮೈಸೂರು ತಾಲೂಕುಗಳಲ್ಲಿ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ, ಬೆಳೆ ಉತ್ಪಾದಕತೆ ಮತ್ತು ರೈತರ ಜೀವನ ಮಟ್ಟವನ್ನು ಸುಧಾರಿಸುವ ಸಲುವಾಗಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.


ಸಮರ್ಪಕ ಮಳೆ ನೀರಿನ ಸಂಗ್ರಹಣೆ ಮತ್ತು ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮಪಡಿಸುವುದು, ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಆರಂಭವಾಗಿದೆ. ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ ಬೆಳೆಗಳ ಸಂದಿಗ್ಧ ಹಂತಗಳಲ್ಲಿ ನೀರಾವರಿ ಒದಗಿಸುವುದು ಮುಖ್ಯವಾಗಿದೆ ಎಂದರು.


ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ 10 ಲಕ್ಷ ರೈತರಲ್ಲಿ 7.20 ಲಕ್ಷ ರೈತರಿಗೆ ಸಹಾಯಧನ ಬಿಡುಗಡೆಯಾಗುತ್ತಿದ್ದು, ಈವರೆಗೆ 511 ಕೋಟಿ ರೂ. ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net