ದೇಶದಲ್ಲಿ ಮೂರೂವರೆ ಕೋಟಿ ಉದ್ಯೋಗ ಸೃಷ್ಟಿ

 ಶುಕ್ರವಾರ ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಯ (ಪಿಎಂ-ವಿಬಿಆರ್‌ವೈ) ಬಗ್ಗೆ ಜಾಗೃತಿ ಹಾಗೂ ವಿಶೇಷ ಕಾರ್ಯಕ್ರಮ ನಡೆಯಿತು. ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿದರು. ಶಾಸಕ ಡಿ. ವೇದವ್ಯಾಸ ಕಾಮತ್ ಇದ್ದರು.
ಶುಕ್ರವಾರ ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಯ (ಪಿಎಂ-ವಿಬಿಆರ್‌ವೈ) ಬಗ್ಗೆ ಜಾಗೃತಿ ಹಾಗೂ ವಿಶೇಷ ಕಾರ್ಯಕ್ರಮ ನಡೆಯಿತು. ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿದರು. ಶಾಸಕ ಡಿ. ವೇದವ್ಯಾಸ ಕಾಮತ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ಯಾ. ಬ್ರಿಜೇಶ್ ಚೌಟ ಬಣ್ಣನೆ
  • ಪಿಎಂ-ವಿಬಿಆರ್‌ವೈ ಬಗ್ಗೆ ದೇಶವ್ಯಾಪಿ ಜಾಗೃತಿ ಮೂಡಿಸುವ ಕಾರ್ಯಕ್ರಮ
  • ಆಯ್ದ ಫಲಾನುಭವಿಗಳಿಗೆ ನೇಮಕಾತಿ ಪತ್ರ ವಿತರಣೆ
ಮಂಗಳೂರು: ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆ (ಪಿಎಂ-ವಿಬಿಆರ್‌ವೈ) ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ದೇಶದಲ್ಲಿ ಮೂರೂವರೆ ಕೋಟಿ ಹೊಸ ಉದ್ಯೋಗ ಸೃಷ್ಟಿಗೆ ನಾಂದಿ ಹಾಡಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಹೇಳಿದರು.
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಮಂಗಳೂರು ವಲಯ ಕಚೇರಿ ವತಿಯಿಂದ ಮಂಗಳೂರಿನ ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಕೆಸಿಸಿಐ) ಕಟ್ಟಡದ ಸಭಾಂಗಣದಲ್ಲಿ ಶುಕ್ರವಾರ ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಯ (ಪಿಎಂ-ವಿಬಿಆರ್‌ವೈ) ಬಗ್ಗೆ ನಡೆದ ಜಾಗೃತಿ ಹಾಗೂ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೇರ ನಗದು ವರ್ಗಾವಣೆ

ಪಿಎಂ-ವಿಬಿಆರ್‌ವೈ ಉದ್ಯೋಗ ಮತ್ತು ಆರ್ಥಿಕ, ಸಾಮಾಜಿಕ ಭದ್ರತೆ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದು ಕಾರ್ಮಿಕರಿಗೆ ಮಾತ್ರವಲ್ಲ, ಉದ್ಯೋಗ ನೀಡುವವರಿಗೂ ಲಾಭ ನೀಡುತ್ತದೆ. ಈ ಯೋಜನೆಯ ಪ್ರೋತ್ಸಾಹಧನವು ಕಾರ್ಮಿಕರು ಹಾಗೂ ಉದ್ಯೋಗದಾತರ ಖಾತೆಗೆ ನೇರ ವರ್ಗಾವಣೆಯಾಗಲಿದೆ. ಯಾವ ಮಧ್ಯವರ್ತಿಗಳಿಗೂ ಇದರಲ್ಲಿ ಪಾಲಿಲ್ಲ.
ದ.ಕ. ಜಿಲ್ಲೆಯಲ್ಲಿ 1,255 ಮಂದಿ ಫಲಾನುಭವಿಗಳಾಗಿದ್ದಾರೆ. 3,053 ಸಂಸ್ಥೆಗಳು ನೋಂದಣಿಯಾಗಿವೆ. ಈಗಾಗಲೇ ಜಿಲ್ಲೆಯ 5.50 ಕೋಟಿ ರೂ. ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗಿದೆ. ಇದರಲ್ಲಿ 47 ಲಕ್ಷ ರೂ. ಕಾರ್ಮಿಕರ ಪಾಲಾಗಿದೆ. ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ, ಸಾಮಾಜಿಕ ಭದ್ರತೆ ಸಿಗಬೇಕೆನ್ನುವ ಮೋದಿ ಅವರ ದೂರದೃಷ್ಟಿಯ ಕಲ್ಪನೆಯಿಂದಾಗಿ ಈ ಕಾರ್ಯ ಸಾಕಾರಗೊಂಡಿದೆ ಎಂದರು.

2,400 ಕೋಟಿ ರೂ.ಗೂ ಅಧಿಕ ವೆಚ್ಚ

ಮಂಗಳೂರು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಾತನಾಡಿ, ಭಾರತದಲ್ಲಿ ಶೇ. 60-70ರಷ್ಟು ಯುವಸಮೂಹವಿದೆ. ಇವರೇ ದೇಶದ ಭವಿಷ್ಯದ ಶಕ್ತಿ. ಇವರಿಗೆ ಉದ್ಯೋಗ, ಆರ್ಥಿಕ ಭದ್ರತೆ ಸಿಗಬೇಕು. ಪಿಎಂ-ವಿಬಿಆರ್‌ವೈ ಯೋಜನೆ ಜಾರಿಗೆ ಕೇಂದ್ರ ಸರ್ಕಾರವು 2,400 ಕೋಟಿ ರೂ.ಗೂ ಅಧಿಕ ವ್ಯಯಿಸುತ್ತಿದೆ. 15 ಲಕ್ಷ ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಯುವಜನತೆಗೆ ಸಾಮಾಜಿಕ ಭದ್ರತೆ ನೀಡುವ ಮೋದಿ ಅವರ ಈ ಯೋಜನೆಯ ಫಲವನ್ನು ಹೆಚ್ಚಿನ ಜನರು ಪಡೆಯಬೇಕಾಗಿ ಎಂದ ಅವರು, ಇದಕ್ಕಾಗಿ ಇಪಿಎಫ್‌ಒ ಇಲಾಖೆ ಮಾತ್ರವಲ್ಲದೆ, ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.
ಇಪಿಎಫ್‌ಒ ವಲಯ ಸಮಿತಿ ಸದಸ್ಯ ವಿಶ್ವನಾಥ್ ಶೆಟ್ಟಿ, ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್, ಇಪಿಎಫ್‌ಒ ಮಂಗಳೂರು ವಲಯದ ಕಮಿಷನರ್ ಸಂದೀಪ್ ಬಿಸ್ವಾಸ್, ಸಹಾಯಕ ಕಮಿಷನರ್ ಅಂಕೀತ್ ಸಿಂಗ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಾದ ಪಾಂಡುರಂಗ ಶೆಣೈ, ವೇಣುಗೋಪಾಲ್, ಅನಿತಾ, ಗೋಕುಲದಾಸ್ ನಾಯಕ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಆಯ್ದ ಫಲಾನುಭವಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಅನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯೋಜನೆಯ ಬಗ್ಗೆ ಲೈವ್‌ನಲ್ಲಿ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net