

ಬನ್ನೂರು: ಪಟ್ಟಣ ಸಮೀಪದ ಹೆಗ್ಗೂರು ಗ್ರಾಮದಲ್ಲಿ ಬುಧವಾರ ಶಿವರಾತ್ರಿಯ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಮತ್ತಿತಾಳೇಶ್ವರ ಸ್ವಾಮಿಯ ರಥೋತ್ಸವ ಸಹಸ್ತ್ರಾರು ಸಮ್ಮುಖದಲ್ಲಿ ವೈಭವಯುತವಾಗಿ ಜರುಗಿತು.
ಮತ್ತಿತಾಳೇಶ್ವರ ಉತ್ಸವ ಮೂರ್ತಿಯನ್ನು ಹೂವಿನಿಂದ ಅಲಂಕರಿಸಿ ದೇವಾಲಯ ಪ್ರಕಾರದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ನಂತರ ವಿವಿಧ ಬಾವುಟ, ಪತಾಕೆ, ಹೂವಿನಿಂದ ಅಲಂಕರಿಸಿದ್ದ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ನಂತರ ಹರ್ಷೋದ್ಗಾರದೊಂದಿಗೆ ಭಕ್ತರು ರಥ ಎಳೆಯಲಾರಂಭಿಸಿದರು. ದೇವಾಲಯದ ಸುತ್ತ ಒಂದು ಸುತ್ತು ಹಾಕಿ ರಥವು ಸುರಕ್ಷಿತವಾಗಿ ಸ್ವಸ್ಥಾನಕ್ಕೆ ಮರಳಿತು. ಭಕ್ತರು ರಥಕ್ಕೆ ಹಣ್ಣು-ದವನ ಎಸೆದು ಪುನೀತರಾದರು. ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.