

ಮಂಡ್ಯ: ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಶಿಫಾರಸು ಮಾಡುತ್ತಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ರೈತರ ಹಿತ ಕಡೆಗಣಿಸಿ ನೀರು ಹರಿಸಿದ ರಾಜ್ಯಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಬುಧವಾರ 114 ಹಾಗೂ ಸರದಿ ಉಪವಾಸ ಸತ್ಯಾಗ್ರಹ 33ನೇ ದಿನ ಪೂರೈಸಿತು.
ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಉಪವಾಸದಲ್ಲಿ ಇಂಡುವಾಳು ಗ್ರಾಮದ ಎಸ್.ಕೃಷ್ಣ, ಬಿ.ಚನ್ನೇಗೌಡ, ರಾಮಕೃಷ್ಣ, ಜಯರಾಂ, ತಿಮ್ಮೇಗೌಡ, ಅಂಬರಹಳ್ಳಿ ಬಿ.ಚೌಡಯ್ಯ, ಬೇವಿನಹಳ್ಳಿ ಬಿ.ಸಿ.ನಾಗರಾಜಾಚಾರಿ, ಸಿದ್ದಯ್ಯನಕೊಪ್ಪಲು ತಮ್ಮೇಗೌಡ ಭಾಗಿಯಾದರು.
ರಾಜ್ಯಸರ್ಕಾರ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಆದೇಶಗಳನ್ನು ಪಾಲನೆ ಮಾಡದೆ ರೈತರ ಹಿತ ಕಾಪಾಡಲು ಮುಂದಾಗಬೇಕು. ಬೇಸಿಗೆಯಲ್ಲಿ ಜನ ಮತ್ತು ಜಾನುವಾರುಗಳಿಗಾಗಿ ಕುಡಿಯಲು ನೀರು ಸಂಗ್ರಹಿಸಿಕೊಳ್ಳಬೇಕು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತುರ್ತು ಕ್ರಮ ವಹಿಸಬೇಕು. ಕಾವೇರಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ರಾಷ್ಟ್ರೀಯ ಜಲನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಕನ್ನಡಸೇನೆ ಮಂಜುನಾಥ್, ಎಸ್.ನಾರಾಯಣ್, ಶಿವರತ್ನಮ್ಮ ಇತರರಿದ್ದರು.