

ಬೀದರ್: ಜೈ ಭಾರತ ಮಾತಾ ಸೇವಾ ಸಮಿತಿಯು ಭಾಲ್ಕಿ ತಾಲ್ಲೂಕಿನ ಖಾನಾಪುರದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಅಂಚೆ ಇಲಾಖೆಯ ರೂ. 399 ರ ಅಪಘಾತ ವಿಮೆ ನೋಂದಣಿ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಒಟ್ಟು 348 ಜನ ವಿಮೆ ನೋಂದಣಿ ಮಾಡಿಸಿಕೊಂಡರು.
ಖಾನಾಪುರ, ಮಳಚಾಪುರ, ಜ್ಯಾಂತಿ ಸೇರಿದಂತೆ ವಿವಿಧ ಗ್ರಾಮಗಳ ಜನ ಸ್ವಯಂ ಪ್ರೇರಣೆಯಿಂದ ಇಂಡಿಯಾ ಪೋಸ್ಟ್ ಪೇಮೆಂಟ್ ಖಾತೆ ತೆರೆದು, ಬಳಿಕ ರೂ. 399 ಪಾವತಿಸಿ ವಿಮೆ ಮಾಡಿಸಿದರು.
ಭಾರತೀಯ ಅಂಚೆ ಇಲಾಖೆಯ ಅತ್ಯಂತ ಕಡಿಮೆ ಕಂತಿನ ಅಪಘಾತ ವಿಮೆ ನೋಂದಣಿ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಮ ಮಾತ್ರವಲ್ಲದೆ, ಸುತ್ತಮುತ್ತಲಿನ ಗ್ರಾಮಗಳ ಜನ ಕೂಡ ವಿಮೆ ಮಾಡಿಸಿದ್ದಾರೆ ಎಂದು ಕಾರ್ಯಕ್ರಮದ ರೂವಾರಿ, ಜೈ ಭಾರತ ಮಾತಾ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ತಿಳಿಸಿದರು.
ಅಂಚೆ ಇಲಾಖೆಯು ಬಡವರ ಅನುಕೂಲಕ್ಕಾಗಿ ವಿಮೆ ಯೋಜನೆ ಜಾರಿಗೊಳಿಸಿದೆ. ಬಸ್, ಕಾರು ಅಪಘಾತ, ಹಾವು ಕಡಿತ, ವಿದ್ಯುತ್ ಅವಘಡ, ಮಹಡಿಯಿಂದ ಬಿದ್ದು ಆಕಸ್ಮಿಕ ಸಾವು ಸಂಭವಿಸಿದ ಸಂದರ್ಭದಲ್ಲಿ ವಾರಸುದಾರರಿಗೆ ರೂ. 10 ಲಕ್ಷ ಪರಿಹಾರ ಲಭಿಸಲಿದೆ. ಕಾರಣ, ಪ್ರತಿಯೊಬ್ಬರೂ ಈ ವಿಮೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇಂಡಿಯನ್ ಪೊಸ್ಟಲ್ ಪೇಮೆಂಟ್ ವ್ಯವಸ್ಥಾಪಕ ಬಾಲಾಜಿ, ಪ್ರತಿನಿಧಿ ವೆಂಕಟೇಶ, ತಂಡದ ನಾಯಕ ರಾಜೇಶ ಭಂಗೂರೆ, ಪೊಸ್ಟ್‍ಮೆನ್‍ಗಳಾದ ಸಂಗಮೇಶ, ಉತ್ತಮ ರಾಠೋಡ್, ರೌಫ್, ಗಜಾನಂದ, ಚನ್ನವೀರ, ರೋಹಿದಾಸ್, ಗ್ರಾಮದ ಪ್ರಮುಖರಾದ ನಾಗೇಶ ಪಾಟೀಲ, ಪ್ರಮೋದ್ ಮರೆ ಮೊದಲಾದವರು ಇದ್ದರು.