

- ರಾಜೇಶ್ ಶೆಟ್ಟಿ ದೋಟ ಮಂಗಳೂರು
ಕಳೆದ 120 ವರ್ಷಗಳಿಂದ ಕಂದಾಯ ಇಲಾಖೆಯ ದಾಖಲೆಯಲ್ಲಿದ್ದ 3,467 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಸುಪರ್ದಿಗೆ ಪಡೆದಿದೆ. ಏಕಕಾಲದಲ್ಲಿ ಇಷ್ಟೊಂದು ಭಾರಿ ವಿಸ್ತೀರ್ಣದ ಪ್ರದೇಶವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿರುವುದು ರಾಜ್ಯದಲ್ಲಿ ಇದೇ ಮೊದಲು.
ಉಪ್ಪಿನಂಗಡಿ ವಲಯ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನಲ್ಲಿ ಈ ಬೆಳವಣಿಗೆ ನಡೆದಿದ್ದು, ಹಸಿರು ಸಂರಕ್ಷಣೆ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಮಹತ್ತರ ಕಾರ್ಯ ಎಂದೇ ಪರಿಗಣಿಸಲಾಗಿದೆ. ಇದರೊಂದಿಗೆ ಕಂದಾಯ ಇಲಾಖೆ ಅಧೀನದಲ್ಲಿದ್ದ ಈ ಪ್ರದೇಶ ಅನ್ಯ ಉದ್ದೇಶಗಳಿಗೆ ಬಳಕೆಯಾಗುವುದು ತಪ್ಪಿದಂತಾಗಿದೆ.
ಶಿವಮೊಗ್ಗ ಕಾರ್ಯ ಯೋಜನೆ ವ್ಯಾಪ್ತಿಗೊಳಪಡುವ ಈ ಪ್ರದೇಶದ ಮ್ಯುಟೇಶನ್ ಕಾರ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮುತುವರ್ಜಿ ವಹಿಸಿದ್ದು, ಉಭಯ ಜಿಲ್ಲೆಗಳ ಅರಣ್ಯಾಧಿಕಾರಿಗಳು, ತಹಸೀಲ್ದಾರ್, ಭೂದಾಖಲೆ ಉಪ ನಿರ್ದೇಶಕರು ಮಹತ್ವದ ಶ್ರಮ ವಹಿಸಿದ್ದಾರೆ. ಪ್ರಸ್ತುತ ಬಹುತೇಕ ಪ್ರಕ್ರಿಯೆ ಮುಗಿದಿದ್ದು, ಪಹಣಿ ಸಿದ್ಧವಾದರೆ ಈ ಪ್ರದೇಶ ಅರಣ್ಯ ಇಲಾಖೆಗೆ ಹಸ್ತಾಂತರವಾಗಲಿದೆ.ಯಾವ ಪ್ರದೇಶ?: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿಯ ರೆಖ್ಯಾ ಗ್ರಾಮದ 2,975 ಎಕರೆ, ಶಿಬಾಜೆ ಗ್ರಾಮದ 460 ಎಕರೆ ಹಾಗೂ ಹತ್ಯಡ್ಕ ಗ್ರಾಮದಲ್ಲಿ 32 ಎಕರೆ ಪ್ರದೇಶವನ್ನು ಇಲಾಖೆಗೆ ಮ್ಯುಟೇಶನ್‌ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಅರಣ್ಯ ಭೂಮಿ ಮ್ಯುಟೇಶನ್ ಮಾಡಿ ಪಹಣಿ ಸಿದ್ಧಪಡಿಸುವ ಬಗ್ಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್ 2020ರ ಸೆ.18ರಂದು ಬೆಳ್ತಂಗಡಿ ತಹಸೀಲ್ದಾರ್‌ಗೆ ಪತ್ರ ಬರೆದಿದ್ದರು. ಅದರಂತೆ ತಹಸೀಲ್ದಾರ್ ಅದೇ ಸೆ.29ರಂದು ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಈ ಪ್ರದೇಶ 1900ರಲ್ಲಿ ಮದ್ರಾಸ್ ಪ್ರಾಂತ್ಯ ಆಡಳಿತದಲ್ಲಿ ಮದ್ರಾಸ್ ಫಾರೆಸ್ಟ್ ಆ್ಯಕ್ಟ್ 1882ರ ಅಡಿ ದಾಖಲಾಗಿದ್ದು, ಈ ಎಲ್ಲ ಅರಣ್ಯಗಳಿಗೆ ವಿಸ್ತೃತ ನೋಟಿಫಿಕೇಶನ್, ಸಿ ಸ್ಟೇಟ್‌ಮೆಂಟ್ ಇರಲಿಲ್ಲ. ಪ್ರಸ್ತುತ ಸ್ಥಿತಿಗತಿಗೆ ಅನುಗುಣವಾಗಿ ಹಿಂದಿನ ನೋಟಿಫಿಕೇಶನ್‌ನಂತೆ ಸರ್ವೇ ಸಂಖ್ಯೆ ನಿಗದಿಪಡಿಸಿ ಗಡಿ ಗುರುತಿಸುವುದು ಅನಿವಾರ್ಯವಾಗಿತ್ತು.
ರೆಖ್ಯಾ ಗ್ರಾಮದ ಸರ್ವೇ ನಂ.69ರಲ್ಲಿ ಬರುವ ಮೀಸಲು ಅರಣ್ಯಗಳ ಗಡಿಯನ್ನು ಪ್ರತ್ಯೇಕಿಸಿ ಈ ಗ್ರಾಮದ ಶಿಬಾಜೆ, ಕಡಂಬಿಲ ಹಾಗೂ ಪೋರ್ಕಳ ವಿಸ್ತೃತ ಅರಣ್ಯ ಬೀಟ್ 1 ಮತ್ತು 2ರ ಗಡಿ ಗುರುತುಗಳನ್ನು ದಾಖಲೆಗಳಂತೆ ಪರಿಶೀಲಿಸಿ, ಮೀಸಲು ಅರಣ್ಯ ಪ್ರದೇಶಗಳ ವಿಸ್ತೀರ್ಣವನ್ನು ಮ್ಯುಟೇಶನ್ ಮಾಡುವ ಬಗ್ಗೆ ಪ್ರಸ್ತಾವನೆಯನ್ನು ದ.ಕ. ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಯವರು ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದ್ದು, ಪಹಣಿ ಇಂಡೀಕರಣ ಪ್ರಕ್ರಿಯೆ ಬಾಕಿ ಇದೆ.
ಗಡಿಯುದ್ದಕ್ಕೂ ಬೇಲಿ ನಿರ್ಮಾಣ: ನಾಲ್ಕು ಮೀಸಲು ಅರಣ್ಯಗಳ ಹಾಗೂ ಅವುಗಳಿಗೆ ಸಂಬಂಧಿಸಿದ ಮುಚಿರಡ್ಕ, ಬಡಕ್ಕಿಲ, ಕಲ್ಲಡ್ಕ, ಮೇದಿನ, ಕಾಯರ್ತೋಡಿ ಆವರಣಗಳ ಗಡಿ ಸರ್ವೇ ಮಾಡಿ ಗಡಿಯುದ್ದಕ್ಕೂ ಆರ್‌ಸಿಸಿ ಕಂಬಗಳನ್ನು ಶಿವಮೊಗ್ಗ ಕಾರ್ಯಯೋಜನೆ ಘಟಕದ ವತಿಯಿಂದ ಅಳವಡಿಸಿ ಸಂರಕ್ಷಿಸಲಾಗಿದೆ.
ಅನ್ಯ ಉದ್ದೇಶಗಳಿಗೆ ಬಳಕೆ: ರಾಜ್ಯದಲ್ಲಿ ಸಮರ್ಪಕ ದಾಖಲೆಗಳಿಲ್ಲದ ಸುಮಾರು 60,725 ಎಕರೆ ಅರಣ್ಯ ಭೂಮಿಯನ್ನು ಕಾನೂನು ಬಾಹಿರವಾಗಿ ಅನ್ಯ ಉದ್ದೇಶಗಳಿಗೆ ಕಂದಾಯ ಇಲಾಖೆ ಮಂಜೂರು ಮಾಡಿದೆ. ಕೆಲವು ಮಂಜೂರಾತಿ ಪ್ರಕ್ರಿಯೆಗಳು 1950ಕ್ಕೂ ಹಿಂದೆಯೇ ನಡೆದಿವೆ. ಆದರೆ, ಬಹುತೇಕ ಅಕ್ರಮ ಮಂಜೂರಾತಿ ಪ್ರಕರಣಗಳು 25 ವರ್ಷಗಳಿಂದೀಚೆಗೆ ನಡೆದಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಅರಣ್ಯ ಪ್ರದೇಶ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದ್ದರೂ ತಹಸೀಲ್ದಾರ್‌ಗಳು ಅಗತ್ಯ ಬದಲಾವಣೆ ಮಾಡಿಲ್ಲ. ಇದರಿಂದ 11.01 ಲಕ್ಷ ಎಕರೆಯಷ್ಟು ಅರಣ್ಯ ಪ್ರದೇಶ ಅತಿಕ್ರಮಣಕ್ಕೆ ಮತ್ತು ಕಾನೂನುಬಾಹಿರವಾಗಿ ಮಂಜೂರಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಖಲೆಗಳ ಪರಿಶೀಲನೆ: ಅರಣ್ಯ ಇಲಾಖೆಯ 13 ವೃತ್ತಗಳಲ್ಲಿ ಅಕ್ರಮ ಮ್ಯುಟೇಶನ್‌ಗಳ ಪ್ರತಿಯೊಂದು ಪ್ರಕರಣಗಳಲ್ಲಿ ದೀರ್ಘಾವಧಿಯಿಂದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳಿಂದ ಎಚ್ಚೆತ್ತುಕೊಂಡ ಮುಖ್ಯ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅಕ್ರಮವಾಗಿ ಮಂಜೂರಾಗಿರುವ ಭೂಮಿಯ ದಾಖಲೆಗಳನ್ನು ಸಿದ್ಧಪಡಿಸಿ, ಅರಣ್ಯ ಭೂಮಿಯನ್ನು ಮರುವಶಪಡಿಸಿಕೊಳ್ಳಲು ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ.
ಒತ್ತುವರಿಯಾಗಿದ್ದರೆ ಸಮಸ್ಯೆ: ಅರಣ್ಯ ಇಲಾಖೆ ವಶಕ್ಕೆ ಪಡೆದ ಪ್ರದೇಶದಲ್ಲಿ ಯಾವುದೇ ಒತ್ತುವರಿ ಅಥವಾ ಕಂದಾಯ ಇಲಾಖೆಯಿಂದ ವಿವಿಧ ಯೋಜನೆಗಳಡಿ ಹಂಚಿಕೆ ನಡೆದಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಪ್ರದೇಶ ಪಶ್ಚಿಮಘಟ್ಟದ ಮಗ್ಗುಲಿನಲ್ಲಿದ್ದು, ಅರಣ್ಯದ ಅಂಚು ರಸ್ತೆಯುದ್ದಕ್ಕೂ ವಿಸ್ತರಿಸಿಕೊಂಡಿದೆ. ಅಲ್ಲದೆ ಜಾಗದ ಗಡಿಯ ಬಗ್ಗೆ ಯಾವುದೇ ನಿಖರತೆ ಉಭಯ ಇಲಾಖೆ ಅಧಿಕಾರಿಗಳಲ್ಲಿ ಇಲ್ಲದೆ ಇರುವುದರಿಂದ ಇಲ್ಲಿ ಒತ್ತುವರಿ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಹಾಗೊಂದು ವೇಳೆ ಒತ್ತುವರಿ ನಡೆದಿದ್ದೇ ಆದಲ್ಲಿ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿ ಮತ್ತೆ ಗೊಂದಲ ಸೃಷ್ಟಿಯಾಗುವ ಸಾಧ್ಯತೆಯಿದೆ.