34 ಸಾವಿರ ಮನೆಗಳು ಶೀಘ್ರ ಹಸ್ತಾಂತರ

New Abbayya New
Published on

ಹುಬ್ಬಳ್ಳಿ : ಅಕ್ಷರ, ಆರೋಗ್ಯ, ಆಶ್ರಯ ಹಾಗೂ ಉದ್ಯೋಗ ನೀಡುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಮೊದಲ ಆದ್ಯತೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಜಂಗ್ಲಿಪೇಟ ವೃತ್ತದಿಂದ ಮಾವನೂರು ಬ್ರಿಡ್ಜ್ ವರೆಗೆ 5ಕೋಟಿ ರೂ.ವೆಚ್ಚದಲ್ಲಿ ಮತ್ತು 6ಕೋಟಿ ರೂ. ಅನುದಾನದಲ್ಲಿ ಬಾಣತಿಕಟ್ಟಿ ಮುಖ್ಯರಸ್ತೆ ಸೇರಿ ಒಟ್ಟು 11ಕೋಟಿ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ, ಅವರು ಮಾತನಾಡಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷನಾಗಿ ನೇಮಕವಾದ ಕೂಡಲೇ ರಾಜ್ಯಾದ್ಯಂತ 36, 789 ಮನೆಗಳನ್ನು ಹಸ್ತಾಂತರಿಸುವ ಅವಕಾಶ ಲಭಿಸಿದೆ. ರಾಜ್ಯಾದ್ಯಂತ ಶೀಘ್ರ 34 ಸಾವಿರ ಮನೆಗಳನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಸ್ತಾಂತರಿಸಲಾಗುವುದು. ಇದು ಕಾಂಗ್ರೆಸ್ ಸರ್ಕಾರದ ಬದ್ಧತೆ ಎಂದರು.

ಹು-ಧಾ ಪೂರ್ವ ಕ್ಷೇತ್ರದಲ್ಲಿ ನಿರ್ವಣವಾಗುತ್ತಿರುವ ಮನೆಗಳನ್ನು ಕೂಡ ಶೀಘ್ರ ಹಸ್ತಾಂತರಿಸಲಾಗುವುದು. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗುತ್ತಿದ್ದು, ಜನರ ಸಮಸ್ಯೆಗಳಿಗೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ 11 ವರ್ಷದಿಂದ ಮಾಡಲಾಗುತ್ತಿದೆ ಎಂದರು.

ಅಧಿಕಾರಿಗಳಿಗೆ ಎಚ್ಚರಿಕೆ : ಇಲಾಖೆಗಳ ಸಮನ್ವಯ ಕೊರತೆಯಿಂದ ಕಾಮಗಾರಿಗಳು ಸಂಪೂರ್ಣ ಸಫಲತೆ ಕಾಣುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸ. ಕಳೆದ 11ವರ್ಷದಲ್ಲಿ ನೂರಾರು ಕೋಟಿ ರೂ.ಗಳ ಅನುದಾನದಲ್ಲಿ ಕ್ಷೇತ್ರ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಸುಗಮ ಸಂಚಾರಕ್ಕೆ ಉತ್ತಮ ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ ನೂರಾರು ಕೋಟಿ ರೂ.ಅನುದಾನ ತಂದು ಕಾಂಕ್ರೀಟ್, ಡಾಂಬರ್ ರಸ್ತೆಗಳು ಮತ್ತು ಬ್ರಿಡ್ಜ್​ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ನೀರು ಸರಬರಾಜು ಇಲಾಖೆ, ಹೆಸ್ಕಾಂ, ಲೋಕೋಪಯೋಗಿ ಹಾಗೂ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಆಂತರಿಕ ಸಮನ್ವಯ ಕೊರತೆಯಿಂದ ಅಭಿವೃದ್ಧಿ ಪಡಿಸಿದ ರಸ್ತೆಗಳನ್ನು ಪದೇಪದೆ ಅಗೆಯುವ ಮೂಲಕ ಹಾಳು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕು. ರಸ್ತೆ ಅಭಿವೃದ್ಧಿಗೂ ಮುನ್ನ ಉಳಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಅವಶ್ಯಕ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಅಭಿವೃದ್ಧಿ ಪಡಿಸಿದ ರಸ್ತೆಗಳನ್ನು ಮತ್ತೆ ಅಗಿಯುವ ಪರಿಸ್ಥಿತಿ ಎದುರಾದರೇ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಾಲಿಕೆ ಸದಸ್ಯರಾದ ಶಿವಗಂಗಾ ಮಾನಶೆಟ್ಟರ, ಮನ್ಸೂರಾ ಮುದಗಲ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಕ ಅಭಿಯಂತರ ವಿಜಯಕುಮಾರ, ವಾರ್ಡ್ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net