ನೋಂದಣಿ ಮಾಡಿಸಿಕೊಂಡಿದ್ದ 34 ಜನ ಚುನಾವಣೆಗೂ ಮೊದಲೇ ನಿಧನ, ಈಡೇರದ ಮತದಾನದ ಆಸೆ

17
Published on

ಮೈಸೂರು: ಮನೆಯಲ್ಲಿಯೇ ಮತದಾನ ಮಾಡುವುದಾಗಿ ನೋಂದಣಿ ಮಾಡಿಸಿಕೊಂಡಿದ್ದವರಲ್ಲಿ 34 ಜನ ಮೃತಪಟ್ಟಿದ್ದು, ಮತದಾನ ಮಾಡುವ ಅವರ ಆಸೆ ಈಡೇರದಂತಾಗಿದೆ.
85 ವರ್ಷ ಮೇಲ್ಪಟ್ಟ 1818 ಜನ ಮತದಾನ ಮಾಡಲು ನೋಂದಣಿ ಮಾಡಿಸಿಕೊಂಡಿದ್ದರು. ಆದರೆ ಇವರಲ್ಲಿ 34 ಜನರು ಮತದಾನಕ್ಕೆ ಮುನ್ನವೇ ಕಾಲವಾಗಿದ್ದಾರೆ. ನೋಂದಣಿ ಮಾಡಿಸಿಕೊಂಡಿದ್ದವರಲ್ಲಿ ತಿ.ನರಸೀಪುರದಲ್ಲಿ 7, ವರುಣ, ಕೃಷ್ಣರಾಜದಲ್ಲಿ ತಲಾ 6, ಹುಣಸೂರಿನಲ್ಲಿ 4, ನಂಜನಗೂಡು, ಕೃಷ್ಣರಾಜನಗರದಲ್ಲಿ ತಲಾ ಮೂವರು ಹಾಗೂ ಚಾಮರಾಜ ಕ್ಷೇತ್ರದಲ್ಲಿ ಇಬ್ಬರು, ಚಾಮುಂಡೇಶ್ವರಿ, ನರಸಿಂಹರಾಜ, ಪಿರಿಯಾಪಟ್ಟಣದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಮತದಾನದಿಂದ ಯಾರೂ ವಂಚಿತವಾಗಬಾರದು ಎನ್ನುವ ಕಾರಣದಿಂದ ಕೇಂದ್ರ ಚುನಾವಣಾ ಆಯೋಗ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ 80 ವರ್ಷ ಮೇಲ್ಪಟ್ಟವರು ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿತ್ತು.
ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟವರು ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದೆ. ನಡೆಯಲು ಅಸಕ್ತರಾದವರು, ಅನಾರೋಗ್ಯಪೀಡಿತರು, ವಿಕಲಚೇತರು ಸೇರಿದಂತೆ ಯಾರೂ ಮತದಾನದಿಂದ ವಂಚಿತವಾಗಬಾರದು ಎನ್ನುವ ಕಾರಣಕ್ಕೆ ಮನೆಯಲ್ಲಿಯೇ ಮತದಾನ ಮಾಡಬಹುದಾಗಿದೆ. ಇದಕ್ಕಾಗಿ ಮುಂಚಿತವಾಗಿ ನೋಂದಣಿ ಮಾಡಿಸಿಕೊಳ್ಳಬೇಕಾಗಿತ್ತು.
ಬಳಿಕ ಅಧಿಕಾರಿಗಳು ನೋಂದಣಿ ಮಾಡಿಸಿಕೊಂಡವರ ಮನೆಗೆ ತೆರಳಿ ಅವರು ಮನೆಯಲ್ಲಿಯೇ ಮತದಾನ ಮಾಡಲು ನಿಯಮಾವಳಿ ಪ್ರಕಾರ ಅರ್ಹರೆ ಎನ್ನುವುದನ್ನು ಗಮನಿಸಿ ಪಟ್ಟಿ ಸಿದ್ಧಪಡಿಸಿದ್ದಾರೆ. ಈ ಪಟ್ಟಿಯಂತೆ ವಿವಿಧ ದಿನಾಂಕಗಳಲ್ಲಿ ಮನೆಯಲ್ಲಿಯೇ ಮತದಾನ ಮಾಡಲಾಗುತ್ತಿದೆ. ಎರಡನೇ ಹಂತದ ಮತದಾನದಲ್ಲಿ ನೋಂದಣಿ ಮಾಡಿಸಿಕೊಂಡಿದ್ದ 1881 ಮತದಾರರಲ್ಲಿ 1819 ಜನರು ಮತದಾನ ಮಾಡುವ ಮೂಲಕ ಶೇ. 96.70ರಷ್ಟು ಮತದಾನ ಅಗಿದೆ.
ಎಚ್.ಡಿ.ಕೋಟೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದ 46 ಜನರು ಮತದಾನ ಮಾಡುವ ಮೂಲಕ ಶೇ.100ರಷ್ಟು ಮತದಾನವಾಗಿದೆ. ನಂಜನಗೂಡಿನಲ್ಲಿ 224 ಜನ ನೋಂದಣಿ ಮಾಡಿಸಿಕೊಂಡಿದ್ದು, ಅದರಲ್ಲಿ 220 ಜನರು ಮತದಾನ ಮಾಡಿದ್ದಾರೆ. ಇಲ್ಲಿ ಶೇ.98.21ರಷ್ಟು ಮತದಾನ ಅಗಿದೆ.
ತಿ.ನರಸೀಪುರದಲ್ಲಿ 190 ಜನರಲ್ಲಿ 181 ಜನ ಮತದಾನ ಮಾಡುವ ಮೂಲಕ ಶೇ.95.26ರಷ್ಟು ಮತದಾನವಾಗಿದೆ. ವರಣಾದಲ್ಲಿ 146 ಜನ ನೋಂದಣಿ ಮಾಡಿಕೊಂಡಿದ್ದು, 140 ಜನ ಮತದಾನ ಮಾಡಿದ್ದಾರೆ. ಶೇ.95.89ರಷ್ಟು ಮತದಾನ ಅಗಿದೆ.
ಕೃಷ್ಣರಾಜನಗರದಲ್ಲಿ 274 ಜನ ನೋಂದಣಿ ಮಾಡಿಸಿಕೊಂಡಿದ್ದು, 266 ಜನ ಮತದಾನ ಮಾಡುವ ಮೂಲಕ ಶೇ.97.08ರಷ್ಟು ಮತದಾನ ನಡೆದಿದೆ. ಚಾಮರಾಜ ಕ್ಷೇತ್ರದಲ್ಲಿ 173 ಜನ ನೋಂದಣಿ ಮಾಡಿಕೊಂಡು 168 ಜನರು ಮನೆಯಲ್ಲಿಯೇ ಮತದಾನ ಮಾಡಿದ್ದಾರೆ. ಇಲ್ಲಿ ಶೇ.97.11ರಷ್ಟು ಮತದಾನ ನಡೆದಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 196 ಜನಕ್ಕೆ 190 ಜನ ಮತದಾನ ಮಾಡುವ ಮೂಲಕ ಶೇ.96.94ರಷ್ಟು ಮತದಾನವಾಗಿದೆ. ಹುಣಸೂರಿಲ್ಲಿ 101 ಜನಕ್ಕೆ 96 ಜನ ಮತದಾನ ಮಾಡಿದ್ದು, ಶೇ.95.05ರಷ್ಟು ಮತದಾನ ನಡೆದಿದೆ.

ಕೃಷ್ಣರಾಜ ಕ್ಷೇತ್ರದಲ್ಲಿ 271 ಜನಕ್ಕೆ 260 ಜನ ಮತದಾನ ಮಾಡಿದ್ದು, ಶೇ.95.94ರಷ್ಟು ಮತದಾನವಾಗಿದೆ. ನರಸಿಂಹರಾಜ ಕ್ಷೇತ್ರದಲ್ಲಿ 112 ಜನ ನೋಂದಣಿ ಮಾಡಿಸಿಕೊಂಡಿದ್ದು, 107 ಜನ ಮತದಾನ ಮಾಡುವ ಮೂಲಕ ಶೇ.95.54ರಷ್ಟು ಮತದಾನವಾಗಿದೆ. ಪಿರಿಯಾಪಟ್ಟಣದಲ್ಲಿ 148 ಜನ ನೋಂದಣಿ ಮಾಡಿಸಿಕೊಂಡಿದ್ದು, 145 ಜನ ಮತದಾನ ಮಾಡುವ ಮೂಲಕ ಶೇ.97.97ರಷ್ಟು ಮತದಾನವಾಗಿದೆ.

ಪತ್ತೆಯಾಗದ 28 ಮತದಾರರು

ಮನೆಯಲ್ಲಿಯೇ ಮತದಾನ ಮಾಡುವುದಾಗಿ ನೋಂದಣಿ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಸಿಕೊಂಡಿದ್ದವರಲ್ಲಿ 28 ಜನ ಪತ್ತೆಯಾಗಿಲ್ಲ. ಮತದಾನಕ್ಕೆ ಈ ಮೊದಲೇ ನೋಂದಣಿ ಮಾಡಿಸಿಕೊಂಡಿದ್ದ ಇವರು ಪತ್ತೆಯಾಗಿಲ್ಲ. ಜಿಲ್ಲಾ ಚುನಾವಣಾ ಅಧಿಕಾರಿಗಳು ನೋಂದಣಿ ಮಾಡಿಸಿಕೊಂಡಿದ್ದವರ ಮನೆಗಳಿಗೆ ಎರಡು ಬಾರಿ ತೆರಳಿದರೂ ಇವರ ಸುಳಿವಿಲ್ಲ. ನೋಂದಣಿ ಮಾಡಿಸಿಕೊಂಡಿದ್ದವರಲ್ಲಿ 62 ಜನರು ನಾನಾ ಕಾರಣದಿಂದ ಮತದಾನ ಮಾಡಿಲ್ಲ.

ಅಂಗವಿಕಲರಿಂದ ಶೇ.97.79ರಷ್ಟು ಮತದಾನ
ಮನೆಯಲ್ಲಿಯೇ ಮತದಾನ ಮಾಡಲು ನೋಂದಣಿಯಾಗಿದ್ದ 587 ಅಂಗವಿಕಲರಲ್ಲಿ 574 ಜನ ಮತದಾನ ಮಾಡುವ ಮೂಲಕ ಶೇ.97.79ರಷ್ಟು ಮತದಾನವಾಗಿದೆ.
ಎಚ್.ಡಿ.ಕೋಟೆಯಲ್ಲಿ 23, ಕೆ.ಆರ್.ನಗರದಲ್ಲಿ 84, ಕೃಷ್ಣರಾಜದಲ್ಲಿ 20 ನೋಂದಣಿ ಮಾಡಿಸಿಕೊಂಡಿದ್ದ ಎಲ್ಲರೂ ತಮ್ಮ ಹಕ್ಕು ಚಲಾಯಿಸಿದ್ದು, ಶೇ.100ರಷ್ಟು ಮತದಾನ ಮಾಡಿದಂತಾಗಿದೆ. ನೋಂದಣಿ ಮಾಡಿಕೊಂಡಿದ್ದವರಲ್ಲಿ 8 ಜನರು ಮೃತಪಟ್ಟಿದ್ದರೆ 5 ಜನರ ವಿಳಾಸ ಪತ್ತೆಯಾಗಿಲ್ಲ. ಇನ್ನು 13 ಜನ ಮತದಾನ ಮಾಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net