

ಉಪ್ಪಿನಂಗಡಿ: ಕೆಲವು ದಿನಗಳಿಂದ ಸುರಿದ ಮಳೆಯಿಂದ ಸಂಪೂರ್ಣ ಕೆಸರುಗದ್ದೆಯಾಗಿ, ನಡೆದಾಡಲೂ ಕಷ್ಟಕರವಾಗಿದ್ದ 34 ನೆಕ್ಕಿಲಾಡಿಯಲ್ಲಿ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಸರ್ವೀಸ್ ರಸ್ತೆಗೆ ಜಲ್ಲಿ ಡಾಂಬರು ಮಿಶ್ರಣ ಹಾಕಿ ಸಮಸ್ಯೆ ಸರಿಪಡಿಸಲಾಗಿದೆ.
ಈ ಸಂಕಷ್ಟದ ಬಗ್ಗೆ ವಿಜಯವಾಣಿ ವರದಿ ಮಾಡಿದ್ದು ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ರಸ್ತೆಗೆ ಜಲ್ಲಿ ಡಾಂಬರು ಮಿಶ್ರಣ ಹಾಕಿದ್ದಾರೆ. ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಹೋಗುವ ಹೆದ್ದಾರಿ ಬದಿಯಲ್ಲಿ 34 ನೆಕ್ಕಿಲಾಡಿ ಪೇಟೆಯಲ್ಲಿ ರಾಘವೇಂದ್ರ ಮಠ ಸಮೀಪದಿಂದ ಕುಡಿಪ್ಪಾಡಿ ತನಕ 1 ಕಿ.ಮೀ. ತನಕ ಮಣ್ಣು ಹಾಸಿ ಸರ್ವೀಸ್ ರಸ್ತೆ ನಿರ್ಮಿಸಲಾಗಿತ್ತು. ಆದರೆ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿರಲಿಲ್ಲ. ಒಂದಿಷ್ಟು ಜಾಗದಲ್ಲಿ ಚರಂಡಿ ಇದ್ದರೂ ಅದು ರಸ್ತೆಯಿಂದ ಎತ್ತರದಲ್ಲಿತ್ತು. ಮತ್ತೊಂದಿಷ್ಟು ಕಡೆ ಚರಂಡಿ ನಿರ್ಮಿಸಿದ್ದರೂ ಅಪೂರ್ಣ ಸ್ಥಿತಿಯಲ್ಲಿ ಬಿಡಲಾಗಿತ್ತು.
ಹೀಗಾಗಿ ಮಳೆ ನೀರು ಹರಿದು ಹೋಗುವುದಕ್ಕೆ ಇಲ್ಲಿ ವ್ಯವಸ್ಥೆಯೇ ಇಲ್ಲದಂತಾಗಿದ್ದು, ಮಳೆ ನೀರು ರಸ್ತೆಯಲ್ಲೇ ನಿಂತು ರಸ್ತೆ ಸಂಪೂರ್ಣವಾಗಿ ಕೆಸರುಗದ್ದೆಯಾಗಿತ್ತು. ಇದರಿಂದ ಪರಿಸರದ ಜನ ಸಮಸ್ಯೆಗೆ ಸಿಲುಕಿದ್ದರು.