ಕರೊನಾಕ್ಕೆ ದ.ಕ.ಜಿಲ್ಲೆಯಲ್ಲಿ ಇಬ್ಬರು ಬಲಿ

coronaaa
Published on

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸೋಮವಾರ 34 ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಇಬ್ಬರು ಬಲಿಯಾಗಿದ್ದಾರೆ.

ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 52 ವರ್ಷದ ಗಂಡಸು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅವರ ಗಂಟಲ ದ್ರವ ಪರೀಕ್ಷೆಯಲ್ಲಿ ಕರೊನಾ ದೃಢಪಟ್ಟಿದೆ. ತೊಕ್ಕೊಟ್ಟಿನ 62 ವರ್ಷದ ಗಂಡಸು ಹೃದಯರೋಗ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೂ ಕರೊನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಕರೊನಾಕ್ಕೆ ಬಲಿಯಾದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10ರಲ್ಲಿ ಆರು ಮಂದಿ ಚೇತರಿಸಿಕೊಂಡಿದ್ದು ಅವರನ್ನು ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ. ಪ್ರಸ್ತುತ ಇಬ್ಬರು ಮಹಿಳೆಯರು ಹಾಗೂ ಓರ್ವ ವೃದ್ಧ ಐಸಿಯುನಲ್ಲಿದ್ದು, ಇಬ್ಬರನ್ನು ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕಿತ್ಸೆ ಪೂರೈಸಿದ 29 ಮಂದಿ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಸೋಮವಾರದ ವರದಿಯಂತೆ 9 ಮಂದಿ ಇನ್‌ಫ್ಲುಯೆಂಜಾ ಮಾದರಿ ಸಮಸ್ಯೆ ಹೊಂದಿದ್ದು ಪಾಸಿಟಿವ್ ಆಗಿದ್ದಾರೆ. 17 ಮಂದಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿಸಿಕೊಂಡಿದ್ದಾರೆ. ರ‌್ಯಾಂಡಮ್ ಟೆಸ್ಟ್‌ನಲ್ಲಿ ಒಬ್ಬರಿಗೆ ಪಾಸಿಟಿವ್ ಆಗಿದೆ. ನಾಲ್ವರು ಗರ್ಭಿಣಿಯರು ಪ್ರಸವ ಪೂರ್ವ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ.

20 ಸಾವಿರ ದಾಟಿದ ಟೆಸ್ಟ್: ಜಿಲ್ಲೆಯಲ್ಲಿ 20,850 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಿದ್ದು 20,284 ವರದಿ ಸಿಕ್ಕಿರುತ್ತದೆ. 19008 ನೆಗೆಟಿವ್ ಇದ್ದರೆ ಒಟ್ಟು ಪಾಸಿಟಿವ್ ಸಂಖ್ಯೆ 1276 ಆಗಿದೆ. ಜನಸಂಖ್ಯೆಗೆ ಹೋಲಿಸಿದರೆ ಕರೊನಾ ಪ್ರಕರಣಗಳು ಶೇ 0.06 ಎಂದು ಡಿಸಿ ಪ್ರಕಟಣೆ ತಿಳಿಸಿದೆ. ಇದುವರೆಗೆ 584 ಮಂದಿ ಗುಣವಾಗಿ ತೆರಳಿದ್ದು 667 ಸಕ್ರಿಯ ಪ್ರಕರಣಗಳಿವೆ.

ತಪ್ಪಿಸಿಕೊಂಡಿದ್ದ ರೋಗಿ ಮತ್ತೆ ಆಸ್ಪತ್ರೆಗೆ

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೋವಿಡ್ ರೋಗಿಯನ್ನು ಮರುದಿನವೇ ಸೋಮವಾರ ಇಬ್ಬರು ಪೊಲೀಸರು ಪತ್ತೆ ಮಾಡಿ ಸಾರ್ವಜನಿಕರ ನೆರವಲ್ಲಿ ಮತ್ತೆ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಿಂದ ತಪ್ಪಿಸಿದ ಆರೋಪ ಎದುರಿಸುತ್ತಿರುವ ದೇವರಾಜ್(18) ಪುತ್ತೂರು ದರ್ಬೆ ನಿವಾಸಿ. ಸೋಮವಾರ ಮಧ್ಯಾಹ್ನ 3ರ ವೇಳೆಗೆ ಸ್ಥಳೀಯ ಕೆಲವರು ರೋಗಿ ಸ್ಟೇಟ್‌ಬ್ಯಾಂಕ್ ಬಳಿ ತಿರುಗಾಡುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದರು. ಕೈಯಲ್ಲಿ ಹಣವಿಲ್ಲದ ದೇವರಾಜ್ ನೆಹರು ಮೈದಾನದಲ್ಲಿ ಅಲೆದಾಡಿ, ಬಳಿಕ ಹತ್ತಿರದ ಬಾರ್‌ವೊಂದರಲ್ಲಿ ಪೊಲೀಸರಿಗೆ ಸಿಕ್ಕಿದ. ಪೊಲೀಸರಾದ ಶಂಕರಪ್ಪ ಲಮಾಣಿ ಮತ್ತು ಶಂಕರಪ್ಪ ನಂದ್ಯಾಳ್ ಈತನನ್ನು ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಈತ ಅನೇಕರಿಗೆ ರೋಗ ಹರಡುವುದನ್ನು ತಪ್ಪಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಶ್ ತಿಳಿಸಿದ್ದಾರೆ.

ದೇವರಾಜ್ ಮಂಗಳೂರಿನ ಅಜ್ಜಿ ಮನೆಗೆ ಬಂದಿದ್ದು ಜುಲೈ 1ರಂದು ಸ್ವಯಂ ವೆನ್ಲಾಕ್‌ಗೆ ಹೋಗಿ ಟೆಸ್ಟ್ ಮಾಡಿಸಿಕೊಂಡಿದ್ದಾನೆ. ಆತನಿಗೆ ರೋಗ ಲಕ್ಷಣ ಇರುವುದರಿಂದ ಕೋವಿಡ್ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಭಾನುವಾರ ಟೆಸ್ಟ್ ವರದಿ ಪಾಸಿಟಿವ್ ಬಂದದ್ದು ಗೊತ್ತಾದ ಕೂಡಲೇ ಅಲ್ಲಿಂದ ಪರಾರಿಯಾಗಿದ್ದ.

ಬೆಳ್ತಂಗಡಿಯಲ್ಲಿ ನಾಲ್ಕು ಕರೊನಾ ಪಾಸಿಟಿವ್

ಬೆಳ್ತಂಗಡಿ: ತಾಲೂಕಿನಲ್ಲಿ ಸೋಮವಾರ ಒಂದೇ ದಿನ ನಾಲ್ಕು ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಉಜಿರೆ ಪೆಟ್ರೋಲ್ ಬಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಳ್ತಂಗಡಿ ಜೈನ್ ಪೇಟೆಯ 42 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಮತ್ತೊಂದೆಡೆ ಮುಂಬೈಯಿಂದ ಊರಿಗೆ ಮರಳಿ ಸರ್ಕಾರಿ ಕ್ವಾರಂಟೈನ್‌ಗೆ ಒಳಗಾಗಿದ್ದ ಸುಲ್ಕೇರಿ ಗ್ರಾಮದ ಬಳಿದಡ್ಡ ಒಂದೇ ಮನೆಯ ನಿವಾಸಿಗಳಾದ 35 ಹಾಗೂ 58 ವರ್ಷದ ಮಹಿಳೆಯರಿಗೆ ಸೋಂಕು ದೃಢವಾಗಿದೆ. ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ 28 ವರ್ಷದ ವ್ಯಕ್ತಿಗೂ ಸೋಂಕು ದೃಢಟ್ಟಿದೆ.

ಬೇಕಲಕೋಟೆ ಪ್ರವಾಸಿ ತಾಣ ಬಂದ್

ಕಾಸರಗೋಡು: ಬೇಕಲಕೋಟೆ ಸಹಿತ ಕಾಸರಗೋಡು ಜಿಲ್ಲೆಯ ಪ್ರವಾಸಿ ತಾಣಗಳನ್ನು ಜುಲೈ 31ವರೆಗೆ ತೆರೆಯಕೂಡದು ಎಂದು ಕಾಸರಗೋಡು ಜನಪ್ರತಿನಿಧಿಗಳ ಸಭೆ ನಿರ್ಧರಿಸಿದೆ. ರಾಣಿಪುರಂ, ಪೊಸಡಿಗುಂಪೆ ಸಹಿತ ಪ್ರವಾಸಿ ತಾಣಗಳಲ್ಲಿ ಅಕ್ರಮವಾಗಿ ಜನ ಗುಂಪು ಸೇರುತ್ತಿದ್ದು, ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆ ಪೊಲೀಸರಿಗೆ ಆದೇಶ ನೀಡಿದೆ.

ಸೀಲ್‌ಡೌನ್ ವಿಳಂಬ ಆರೋಪ

ಮಂಗಳೂರು: ಹೆಚ್ಚುತ್ತಿರುವ ಕರೊನಾ ಪ್ರಕರಣಗಳು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮೇಲೆ ಒತ್ತಡ ತರುತ್ತಿರುವುದು ಕರೊನಾ ನಿರ್ವಹಣೆ ಮೇಲೆ ಪರಿಣಾಮ ಬೀರತೊಡಗಿದೆ.

ಹಿಂದೆ ಪ್ರಕರಣಗಳು ಕಡಿಮೆ ಇದ್ದು, ಪಾಸಿಟಿವ್ ಎಂದು ತಿಳಿದ ಕೂಡಲೇ ನಿಯೋಜಿತ ತಂಡದವರು ಆಯಾ ರೋಗಿಯ ಮನೆಗೆ ತೆರಳಿ ಆ ಪ್ರದೇಶವನ್ನು ಸೀಲ್‌ಡೌನ್ ಮಾಡುತ್ತಿದ್ದರು. ಇದಕ್ಕೆಂದೇ ಜಿಲ್ಲಾಡಳಿತ ಮಂಗಳೂರು ಮಹಾನಗರಪಾಲಿಕೆ ಅಥವಾ ಜಿಲ್ಲೆಯ ಇತರ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳಿರುವ ತಂಡ ರಚಿಸಿದ್ದರು.

ಪ್ರಸ್ತುತ ದಿನದಿಂದ ದಿನಕ್ಕೆ ಕರೊನಾ ಸಂಖ್ಯೆ ಏರಿಕೆಯಾಗಿರುವುದರಿಂದ ಮನೆ, ಕಟ್ಟಡವನ್ನು ಸೀಲ್‌ಡೌನ್ ಮಾಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರತೊಡಗಿದೆ. ಫೋನ್ ಮಾಡಿ ಕರೆದರೂ ಯಾರೂ ಸೀಲ್‌ಡೌನ್ ಮಾಡುವವರಿಲ್ಲ ಎಂಬಂತಾಗಿದೆ. ಇದರಿಂದಾಗಿ ಸೋಂಕಿತರು, ಅವರ ಪ್ರಥಮ ಸಂಪರ್ಕ, ದ್ವಿತೀಯ ಸಂಪರ್ಕದಿಂದಾಗಿ ಬೇಗ ಕರೊನಾ ಪಸರಿಸುವ ಭೀತಿ ಹೆಚ್ಚಾಗಿದೆ. ಪ್ರಾರಂಭದಲ್ಲಿ ಸೀಲ್‌ಡೌನ್ ವಿವರಗಳನ್ನು ಹಂಚಿಕೊಳ್ಳುತ್ತಿದ್ದ ಜಿಲ್ಲಾಡಳಿತ ಈಗ ಅದನ್ನು ನಿಲ್ಲಿಸಿದೆ.

ಕಾವೂರಲ್ಲಿ ವೃದ್ಧೆ ಮೃತಪಟ್ಟರೂ ಸೀಲ್‌ಡೌನ್ ಇಲ್ಲ!

ಕಾವೂರು ಸಮೀಪದ ಗುಡ್ಡೆಯಂಗಡಿಯ ವೃದ್ಧೆಯೊಬ್ಬರು ಶುಕ್ರವಾರ ಮೃತಪಟ್ಟಿದ್ದರು. ಅವರಿಗೆ ಕೋವಿಡ್ ಟೆಸ್ಟ್ ನಡೆಸಿದಾಗ ವರದಿ ಪಾಸಿಟಿವ್ ಬಂದಿತ್ತು. ನಾಲ್ಕು ದಿನ ಕಳೆದರೂ ಅವರ ಮನೆಯನ್ನು ಸೀಲ್‌ಡೌನ್ ಮಾಡಿಲ್ಲ. ಸ್ಥಳೀಯರ ಪ್ರಕಾರ ಮಂಗಳೂರು ಮಹಾನಗರಪಾಲಿಕೆ, ಸ್ಥಳೀಯ ಕಾರ್ಪೊರೇಟರ್‌ಗೆ ಮಾಹಿತಿ ನೀಡಲಾಗಿದೆ. ಆದದೂ ಕ್ರಮ ಕೈಗೊಂಡಿಲ್ಲ. ಕಾವೂರು ಪೊಲೀಸರಿಗೆ ದೂರು ನೀಡಿದ ಬಳಿಕ ಅವರು ಜೀಪ್‌ನಲ್ಲಿ ಬಂದು ದೂರದಲ್ಲಿ ನಿಂತು ಧ್ವನಿವರ್ಧಕದಲ್ಲಿ ಯಾರೂ ಹೊರಗೆ ಬರಬಾರದು ಎಂದು ಸೂಚಿಸಿ ತೆರಳಿದ್ದು ಬಿಟ್ಟರೆ, ಬೇರೇನೂ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಡಿಸಿ ಕಚೇರಿ ಪ್ರವೇಶ ನಿರ್ಬಂಧ ತೆರವು

ಮಂಗಳೂರು: ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರದಿಂದ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ನಾಲ್ಕು ದಿನಗಳಿಂದ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು.

ಭಾನುವಾರ ಡಿಸಿ ಕಚೇರಿ ಸಂಕೀರ್ಣದ ವಿವಿಧ ಇಲಾಖೆಗಳ ಕಚೇರಿಗಳಿಗೆ ಸ್ಯಾನಿಟೈಸಿಂಗ್ ಪ್ರಕ್ರಿಯೆ ನಡೆದಿತ್ತು. ಸೋಮವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತಾದರೂ, ಆಗಮಿಸಿದ ಜನರ ಸಂಖ್ಯೆ ಕಡಿಮೆಯಿತ್ತು. ಎಲ್ಲರನ್ನೂ ಥರ್ಮಲ್ ಸ್ಕಾೃನಿಂಗ್‌ಗೆ ಒಳಪಡಿಸಿ, ಕೈಗಳನ್ನು ಸ್ಯಾನಿಟೈಸ್ ಮಾಡಿ ಪ್ರವೇಶಕ್ಕೆ ಅನುಮತಿ ನೀಡಲಾಯಿತು.

ಇದೇ ವೇಳೆ ಜೂನ್ 30ರಿಂದ ಸೇವೆ ಸ್ಥಗಿತಗೊಳಿಸಲಾಗಿದ್ದ ಲೇಡಿಗೋಷನ್ ಆಸ್ಪತ್ರೆಯಲ್ಲೂ ಸೋಮವಾರದಿಂದ ಗರ್ಭಿಣಿಯರ ದಾಖಲಾತಿ ಆರಂಭವಾಗಿದೆ. ಆರೋಗ್ಯ ಇಲಾಖೆ ಕಚೇರಿಯಲ್ಲಿ ಡಿಎಚ್‌ಒ ಸಹಿತ ಇತರ ವೈದ್ಯಾಧಿಕರಿಗಳಿಗೆ ಕರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಡಿಎಚ್‌ಒ ಕಚೇರಿ ಸಂಕೀರ್ಣದಲ್ಲಿರುವ ಅರಣ್ಯ ಇಲಾಖೆ, ವಾರ್ತಾಇಲಾಖೆ ಸೇರಿದಂತೆ ವಿವಿಧ ಕಚೇರಿಗಳಿಗೆ ಸಾರ್ವಜನಿಕರ ಪ್ರವೇಶಕ್ಕಿರುವ ನಿರ್ಬಂಧವನ್ನು ಮುಂದುವರಿಸಲಾಗಿದೆ.

ಪಾಲಿಕೆ ಇನ್ನೂ ನಿರ್ಧಾರವಾಗಿಲ್ಲ

ಮಂಗಳೂರು ಮಹಾನಗರ ಪಾಲಿಕೆಗೆ ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಲಾಗಿದ್ದ ಒಂದು ವಾರ ನಿರ್ಬಂಧದ ಗಡುವು ಮುಗಿದಿದೆ. ಒಮ್ಮೆ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೇಯರ್ ದಿವಾಕರ್ ಪಾಂಡೇಶ್ವರ ತಿಳಿಸಿದ್ದಾರೆ.

ದ.ಕ ಸ್ವಯಂಪ್ರೇರಿತ ಲಾಕ್‌ಡೌನ್ ಸುಳ್ಳು ಸುದ್ದಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಜುಲೈ 8ರಿಂದ 25ರವರೆಗೆ ಸ್ವಯಂಪ್ರೇರಿತ ಲಾಕ್‌ಡೌನ್ ಇರಲಿದೆ ಎಂಬ ಸುಳ್ಳು ಸುದ್ದಿ ಹರಿದಾಡಿದ್ದು ಅಂತಹ ಯಾವುದೇ ಪ್ರಸ್ತಾಪ ಇಲ್ಲ.

ಜುಲೈ 8ರಿಂದ 25ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸ್ವಯಂಪ್ರೇರಿತ ಲಾಕ್‌ಡೌನ್ ಮಾಡಲು ಜಿಲ್ಲೆಯ ವಿವಿಧ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಜಿಲ್ಲೆಯ ಎಲ್ಲ ರೀತಿಯ ವ್ಯಾಪಾರ ವಹಿವಾಟು, ಆಟೋ ರಿಕ್ಷಾ, ಕ್ಯಾಬ್ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮಧ್ಯಾಹ್ನ 1ರವರೆಗೆ ಮಾತ್ರ ಲಭ್ಯವಿರಲಿದೆ. ಮಧ್ಯಾಹ್ನ 1ರಿಂದ ಸ್ವಯಂಪ್ರೇರಿತ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದ್ದು, ಜಿಲ್ಲೆಯ ಜನತೆ, ವ್ಯಾಪಾರಸ್ಥರು, ಬಸ್ ಮಾಲೀಕರು, ಆಟೋ ರಿಕ್ಷಾ ಚಾಲಕರು, ಅಂಗಡಿಗಳ ಮಾಲೀಕರು ಹಾಗೂ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು ಸ್ವಯಂಪ್ರೇರಿತ ಲಾಕ್‌ಡೌನ್ ಬೆಂಬಲಿಸಿ ಕರೊನಾ ವಿರುದ್ಧ ಹೋರಾಟದಲ್ಲಿ ಭಾಗಿಯಾಗಲು ಕೋರಲಾಗಿದೆ ಎನ್ನುವ ಸಂದೇಶ ವಾಟ್ಸಾಪ್‌ನಲ್ಲಿ ಸೋಮವಾರ ಬೆಳಗ್ಗಿನಿಂದಲೇ ಹರಿದಾಡಿತ್ತು.

ಸ್ವಯಂಪ್ರೇರಿಯ ಲಾಕ್‌ಡೌನ್ ಪ್ರಸ್ತಾಪ ನನ್ನ ಗಮನಕ್ಕೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಪ್ರತಿಕ್ರಿಯಿಸಿದ್ದಾರೆ. ಅಂತಹ ಯಾವ ಸಭೆಯೂ ಆಗಿಲ್ಲ, ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ದ.ಕ ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net