

DK Shivakumar : ನಗರದ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಸವಾರಿ ಮಾಡಿದ್ದ ದ್ವಿಚಕ್ರ ವಾಹನದ ಮಾಲೀಕರ ಮೇಲೆ 18,500 ರೂ. ದಂಡ ಬಾಕಿ ಇರುವುದು ಬೆಳಕಿಗೆ ಬಂದಿದೆ.
ಕೆಎ04ಜೆಜಡ್2087 ಸಂಖ್ಯೆಯ ವಾಹನದ ಸವಾರ 2020ರಿಂದ 34 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಸಂಚಾರ ಪೊಲೀಸ್ ಇಲಾಖೆಯ ದತ್ತಾಂಶಗಳಿಂದ ತಿಳಿದುಬಂದಿದೆ.
ಬಿಡಿಎ ವತಿಯಿಂದ ಹೆಬ್ಬಾಳ ಜಂಕ್ಷನ್ನಲ್ಲಿ ನಿರ್ವಿುಸುತ್ತಿರುವ ಹೊಸ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಲು ಮಂಗಳವಾರ ಬೆಳಗ್ಗೆ ಶಿವಕುಮಾರ್ ಅವರು ಅಧಿಕಾರಿಗಳೊಂದಿಗೆ ಬಂದಿದ್ದರು. ಅರ್ಧ ಹೆಲ್ಮೆಟ್ ಹಾಕಿಕೊಂಡು ಡಿಯೋ ಸ್ಕೂಟರ್ನಲ್ಲಿ ಒಂದು ಸುತ್ತು ಹಾಕಿದ್ದರು. ಈ ವೇಳೆ ಸಚಿವ ಬೈರತಿ ಸುರೇಶ್ ಕೂಡ ಹಾಫ್ ಹೆಲ್ಮೆಟ್ ಧರಿಸಿದ್ದರು.
ಐಎಸ್ಐ ಗುರುತು ಇಲ್ಲದ, ಗುಣಮಟ್ಟವಲ್ಲದ ಹೆಲ್ಮೆಟ್ ಧರಿಸಿ ಡಿಸಿಎಂ ನಿಯಮ ಉಲ್ಲಂಘಿಸಿದ್ದಾರೆ. ಅಲ್ಲದೆ ಅವರ ಹಿಂದೆಯೇ ಮತ್ತೊಂದು ಸ್ಕೂಟರ್ನಲ್ಲಿ ಬರುತ್ತಿದ್ದ ಶಾಸಕ ಎನ್.ಎ. ಹ್ಯಾರೀಸ್ ಅವರು ಹೆಲ್ಮೆಟ್ ಧರಿಸದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.