

ಸಿದ್ದಾಪುರ: ತಾಲೂಕಿನ ಲಂಬಾಪುರದ ವ್ಯವಸಾಯ ಸೇವಾ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 34,84, 857ರೂ. ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಐ.ನಾಯ್ಕ ಕೆಳಗಿನಸಸಿ ಹೇಳಿದರು.
ಲಂಬಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ 64ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
2022-23ನೇ ಸಾಲಿನಲ್ಲಿ ಲಂಬಾಪುರ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಪೋ›ತ್ಸಾಹ ಧನ ನೀಡಲಾಯಿತು.
ಸತ್ಯಸಾಯಿ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಯ ಕನ್ನಡ ವಿಭಾಗದಲ್ಲಿ ಬಂಗಾರದ ಪದಕವನ್ನು ಪಡೆದ ವಿದ್ಯಾ ಅಣ್ಣಪ್ಪ ನಾಯ್ಕ ಸುತ್ತಲಮನೆ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಂಗಾರದ ಪದಕವನ್ನು ಪಡೆದ ಗುರುಪ್ರಸಾದ ಹೆಗಡೆ ಸುಂಗೋಳಿಮನೆ ಅವರನ್ನು ಸನ್ಮಾನಿಸಲಾಯಿತು.
ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದ ಕೆಡಿಸಿಸಿ ಬ್ಯಾಂಕ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ ಮಾತನಾಡಿ ಕೆಡಿಸಿಸಿ ಬ್ಯಾಂಕ್ ಇವರು ನೀಡುವ ಸಿದ್ದಾಪುರ ತಾಲೂಕಿನ ಲಂಬಾಪುರ ವ್ಯವಸಾಯ ಸೇವಾ ಸಹಕಾರಿ ಉತ್ತಮ ಸಹಕಾರಿ ಸಂಘವಾಗಿ ಈ ಬಾರಿ ಆಯ್ಕೆ ಆಗಿದೆ ಎಂದು ಹೇಳಿದರು.
ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ,ಸಂಘದ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಾಹಕ ಬಿ.ಜಿ.ಭಟ್ಟ ವಾರ್ಷಿಕ ವರದಿ ವಾಚಿಸಿದರು. ಎಂ.ಎನ್.ಹೆಗಡೆ ತಲೆಕೇರಿ ಸ್ವಾಗತಿಸಿದರು. ಗಣಪತಿ ಗೋವಿಂದ ನಾಯ್ಕ ವಂದಿಸಿದರು. ಸಂಘದ ಸಿಬ್ಬಂದಿ ಸಹಕರಿಸಿದರು.