10 ಸಸ್ಯಪಾಲನೆ ಕೇಂದ್ರಗಳಲ್ಲಿ 34.31ಲಕ್ಷ ಸಸಿ

SIRSI SASSYA PALANA
Published on

ಶಿರಸಿ: ಇಲ್ಲಿಯ ಅರಣ್ಯ ವಿಭಾಗವು ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳನ್ನು ಒಳಗೊಂಡಿದ್ದು, 6 ವಲಯಗಳನ್ನು ಹೊಂದಿದೆ. ಒಟ್ಟೂ 1,71,828.17 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ವಿಭಾಗದ ವಿವಿಧ ವಲಯಗಳಲ್ಲಿ ಒಟ್ಟು 10 ಸಸ್ಯಪಾಲನಾ ಕ್ಷೇತ್ರಗಳಿದ್ದು, ಗುಣಮಟ್ಟದ ಸಸಿಗಳನ್ನು ಬೆಳೆಸಲಾಗಿದೆ ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹೇಳಿದರು.

ತಾಲೂಕಿನ ಕೆಂಗ್ರೆಯ ಸಸ್ಯಪಾಲನಾ ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 2022-23ನೇ ಸಾಲಿನಲ್ಲಿ ಇಲಾಖೆ ಬಳಕೆಗೆ 29,80,574 ಸಸಿಗಳನ್ನು ಮತ್ತು ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಗೆ ವಿತರಿಸಲು 45100 ಸಸಿಗಳನ್ನು ಬೆಳೆಸಲಾಗಿದೆ. ಮಾವು, ಹಲಸು,ನೇರಳೆ, ವಾಟೆ, ಉಪ್ಪಗೆ, ಮುರುಗಲು, ದಿಮ್ಮಿ ಆಧಾರಿತ ಸಸಿಗಳಾದ ಸಾಗವಾನಿ, ಸೀಸಂ, ಮತ್ತಿ, ನಂದಿ, ಕಿಂದಳ ಜಾತಿಯ ಸಸಿಗಳು ಹಾಗೂ ಅಳಿವಿನಂಚಿನಲ್ಲಿರುವ ಸಸ್ಯಗಳಾದ ಸರಾಕಾ, ಅಶೋಕಾ, ದೇವದಾರಾ ಮತ್ತಿತರ ಸಸಿಗಳನ್ನು ಬೆಳೆಸಲಾಗಿದೆ. ಆರ್​ಎಸ್​ಪಿಡಿ ಯೋಜನೆಯಡಿ ಬೆಳೆಸಲಾಗಿರುವ ಸಸಿಗಳನ್ನು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯೂ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ರೈತರು ಖಾಸಗಿ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಮೂರು ವರ್ಷ ಪೋಷಿಸಿದ್ದಲ್ಲಿ ಮೊದಲ ವರ್ಷ 35 ರೂಪಾಯಿಗಳು ಎರಡು ಹಾಗೂ ಮೂರನೇ ವರ್ಷ 45 ರೂಪಾಯಿಗಳು ಸೇರಿ 125 ರೂಪಾಯಿಗಳನ್ನು ನೀಡಲಾಗುವುದು ಎಂದರು.

ಬನವಾಸಿ, ಹುಲೇಕಲ್, ಗವಿನಗುಡ್ಡ ಮತ್ತಿಹಳ್ಳಿ ಭಾಗದಲ್ಲಿ ಸಾಗವಾನಿ ಪ್ಲಾಂಟೇಶನ್ ಮಾಡುತ್ತಿದ್ದೇವೆ. ಅಕೇಶಿಯಾ ಗಿಡಗಳನ್ನು ಆಯ್ದ ಪ್ರದೇಶಗಳಲ್ಲಿ ಮಾತ್ರ ನಾಟಿ ಮಾಡುತ್ತಿದ್ದೇವೆ. ಅಕೇಶಿಯಾ ಗಿಡಗಳು ಇರುವುದರಿಂದ ಬೇರೆ ಜಾತಿಯ ಗಿಡಗಳ ಸಂರಕ್ಷಣೆಯಾಗುತ್ತಿದೆ ಎಂದರು.

ಡಿಸಿಎಫ್ ಅಜ್ಜಯ್ಯ, ಎಸಿಎಫ್ ರಘು ಡಿ., ಆರ್​ಎಫ್​ಒ ಉಷಾ ಕಬ್ಬೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net