3342 ಕೋಟಿ ರೂ.ವೆಚ್ಚದ ರೈಲ್ವೆ ಡಬ್ಲಿಂಗ್‌ಗೆ ಹಸಿರು ನಿಶಾನೆ

Indian-Railway-Canceled-30-Train
Published on

ಚಿತ್ರದುರ್ಗ: ಚಿಕ್ಕಜಾಜೂರು-ಚಿತ್ರದುರ್ಗ-ಚಳ್ಳಕೆರೆ-ಬಳ್ಳಾರಿವರೆಗಿನ 185 ಕಿ.ಮೀ. ಉದ್ದದ ರೈಲ್ವೆ ಮಾರ್ಗವನ್ನು 3342 ಕೋಟಿ ರೂ.ವೆಚ್ಚದಲ್ಲಿ ದ್ವಿಪಥಗೊಳಿಸುವ (ಡಬ್ಲಿಂಗ್)ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

ಈ ಯೋಜನೆಗೆ ರೈಲ್ವೆ ಮಂಡಳಿ ಕೇಂದ್ರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಅನುಮೋದಿಸುವಂತೆ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿತ್ತು. ಈಗ ಕೇಂದ್ರದ ಅನುಮೋದನೆ ದೊರಕಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವರಾದ ಅಶ್ವಿನಿವೈಷ್ಣವ್, ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಈ ಮಾರ್ಗದಲ್ಲಿ 174 ಹೆಕ್ಟೇರ್ ಭೂಸ್ವಾಧೀನ ಅಗತ್ಯವಿದೆ. ಚಿತ್ರದುರ್ಗ ಲೋಸಕಭಾ ಕ್ಷೇತ್ರ ವ್ಯಾಪ್ತಿಯ ಹೊಳಲ್ಕೆರೆ ತಾಲೂಕು ಅಮೃತಾಪುರದಲ್ಲಿ ಹೊಸ ರೈಲು ನಿಲ್ದಾಣದೊಂದಿಗೆ ಈ ಮಾರ್ಗದಲ್ಲಿ 29 ಪ್ರಮುಖ ಸೇತುವೆಗಳು, 230 ಸಣ್ಣ ಸೇತುವೆಗಳು, 12 ಲೆವೆಲ್ ಕ್ರಾಸಿಂಗ್‌ಗಳು ನಿರ್ಮಾಣವಾಗಲಿವೆ. ಈ ಯೋಜನೆಯನ್ನು 4 ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ರೈಲ್ವೆ ಇಲಾಖೆ ಮುಂದಿದೆ.

ಮಂಗಳೂರು ಬಂದರಿನೊಂದಿಗೆ ಹೈದರಾಬಾದ್, ಹೊಸಪೇಟೆ, ಬಳ್ಳಾರಿ, ಕೈಗಾರಿಕಾ ಪ್ರದೇಶಗಳಿಗೆ ಹಾಗೂ ಬಳ್ಳಾರಿ - ಚಿತ್ರದುರ್ಗ ಗಣಿ ಪ್ರದೇಶಗಳಿಗೆ ನೇರ ಸಂಪರ್ಕ ಕಲ್ಪಿಸುವ ಈ ಮಾರ್ಗವು ಹೆಚ್ಚು ಉಪಯುಕ್ತವಾಗಲಿದೆ. ಹೈದರಾಬಾದ್, ಬಳ್ಳಾರಿ, ಹಂಪಿ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಹೆಚ್ಚು ಸಹಕಾರಿಯಾಗಲಿದೆ.

ಮಂಗಳೂರು ಬಂದರಿಗೆ ಕಬ್ಬಿಣದ ಅದಿರು ಸಾಗಾಟಕ್ಕೆ ಹಾಗೂ ಹೈದರಾಬಾದ್ ಕರ್ನಾಟಕವನ್ನು ಮಧ್ಯ ಕರ್ನಾಟಕದೊಂದಿಗೆ ಕರಾವಳಿ ಕರ್ನಾಟಕಕ್ಕೆ ಬೆಸೆಯುವ ಈ ಮಾರ್ಗ ಸಾರ್ವಜನಿಕವಾಗಿ ಹೆಚ್ಚು ಅನುಕೂಲವಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net