ಎಸ್ಸೆಸ್ಸೆಲ್ಸಿಗೆ ಒಂದೇ ಶಾಲೆಯ 333 ವಿದ್ಯಾರ್ಥಿಗಳು!

Exam
Published on

ಬಂಡೀಮಠ ಶಿವರಾಮ ಆಚಾರ್ಯ

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕಡಿಮೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಗುಣಮಟ್ಟದ ಶಿಕ್ಷಣದಿಂದ ಬ್ರಹ್ಮಾವರ ಸರ್ಕಾರಿ ಪದವಿಪೂರ್ವ ಕಾಲೇಜು ಉಡುಪಿ ಜಿಲ್ಲೆಯಲ್ಲೇ ಮಾದರಿ ಎನಿಸಿದೆ.

ಇದಕ್ಕೆ ನಿದರ್ಶನವೆಂಬಂತೆ ಈ ಬಾರಿ ಬ್ರಹ್ಮಾವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 333 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಬ್ರಹ್ಮಾವರ ನಗರದ ಮಧ್ಯಭಾಗದಲ್ಲಿರುವ ಈ ಶಾಲೆಗೆ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚು ಬರುತ್ತಿದ್ದು ಈ ಬಾರಿ ಇಲ್ಲಿ 159 ವಿದ್ಯಾರ್ಥಿಗಳು ಹಾಗೂ 174 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ಉಡುಪಿ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಇಷ್ಟೊಂದು ಮಕ್ಕಳು ಪರೀಕ್ಷೆ ಬರೆಯುತ್ತಿರುವುದು ದಾಖಲೆ. ಕಳೆದ ವರ್ಷ 285 ಮಂದಿ ಹಾಜರಾಗಿದ್ದರು.

ಇಲ್ಲಿನ ಪ್ರೌಢಶಾಲೆಯಲ್ಲಿ ಪ್ರಸ್ತುತ 900 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಬಡವರ, ಮಧ್ಯಮ ವರ್ಗದ ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚು ವ್ಯಾಸಂಗ ಮಾಡುತ್ತಿದ್ದು, 10ನೇ ತರಗತಿಯಲ್ಲಿ ಪ್ರತಿ ಬಾರಿ ಶೇ.95ಕ್ಕಿಂತಲೂ ಅಧಿಕ ಫಲಿತಾಂಶ ದಾಖಲಿಸಿದೆ.

ಉತ್ತಮ ಸೌಲಭ್ಯ: ಸುಸಜ್ಜಿತ ಕಟ್ಟಡ, ಅಟಲ್ ಟಿಂಕರಿಂಗ್ ಲ್ಯಾಬ್ ಸೌಲಭ್ಯ, ಆಟೋಮೊಬೈಲ್, ಬ್ಯೂಟಿ ಮತ್ತು ವೆಲ್‌ನೆಸ್ ತರಬೇತಿ, ಕ್ರೀಡಾ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹ ಇಲ್ಲಿ ಸಿಗುತ್ತಿದೆ. ಜ್ಞಾನ, ದಾನದ ಜತೆ ಅನ್ನದಾನ ಕೂಡ ಇಲ್ಲಿ ವಿಶೇಷ. ದೇಶದಲ್ಲಿ ಕರಾವಳಿ ಜಿಲ್ಲೆಯ ಶಿಕ್ಷಣ ಕ್ರಾಂತಿಗೆ ಬ್ರಹ್ಮಾವರ ಸರ್ಕಾರಿ ಶಾಲೆ ಇಂದಿಗೂ ಸಾಕ್ಷಿಯಾಗಿದೆ.

ಜಿಲ್ಲೆಯಲ್ಲೇ ಹೆಚ್ಚಿನ ವಿದ್ಯಾರ್ಥಿಗಳ ಸರ್ಕಾರಿ ಸಂಸ್ಥೆ: 30 ವರ್ಷಗಳ ಹಿಂದೆ ಪ್ರಾರಂಭವಾದ ಬ್ರಹ್ಮಾವರ ಸರ್ಕಾರಿ ಪ್ರೌಢಶಾಲೆಯಲ್ಲಿ ಮೊದಲ ವರ್ಷ 18 ವಿದ್ಯಾರ್ಥಿಗಳಿದ್ದು, ಇಂದು ಉಡುಪಿ ಜಿಲ್ಲೆಯಲ್ಲೇ ಅತಿಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆ ಈ ಶಾಲೆಯದು. ಶಾಲೆಯ ಇನ್ನೊಂದು ಭಾಗದಲ್ಲಿ ಪಿಯು ವಿಭಾಗವಿದ್ದು ಅಲ್ಲಿ 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಒಟ್ಟು ಒಂದೇ ಆವರಣದಲ್ಲಿ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ವಿದ್ಯಾರ್ಥಿಗಳ ಪಾಲಕರು, ಜನಪ್ರತಿನಿಧಿಗಳು, ಎಸ್‌ಡಿಎಂಸಿ ಉತ್ತಮ ಸ್ಪಂದನೆಯಿಂದ ಮತ್ತು ಸಹೋದ್ಯೋಗಿಗಳ ಸಹಕಾರದಿಂದ ಇಂಂಥ ಸಾಧನೆಗೆ ಕಾರಣವಾಗಿದೆ.

ಬಿ.ಟಿ.ನಾಯ್ಕ

ಪ್ರೌಢಶಾಲಾ ವಿಭಾಗ ಮುಖ್ಯಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net