

ತುಮಕೂರು: ಜಿಲ್ಲೆಯಲ್ಲಿ ಕರೊನಾ ಆರ್ಭಟ ಸ್ವಲ್ಪಮಟ್ಟಿಗೆ ತಗ್ಗಿದೆ. ಹೊಸದಾಗಿ 14 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 333ಕ್ಕೇರಿದೆ. ಖಾಸಗಿ ಸುದ್ದಿ ವಾಹಿನಿ ಕ್ಯಾಮರಾಮನ್‌ಗೂ ಸೋಂಕು ತಗಲಿದ್ದು, ಮಾಧ್ಯಮ ವಲಯದಲ್ಲಿ ಆತಂಕ ಸೃಷ್ಟಿಸಿದೆ.
ತುಮಕೂರು ನಗರದಲ್ಲಿ 9, ತಿಪಟೂರು-3, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಓರ್ವರಿಗೆ ಸೋಂಕು ದೃಢವಾಗಿದೆ. ತಿಪಟೂರು ನಗರಸಭೆಯ ಸಿಬ್ಬಂದಿಗೂ ಸೋಂಕು ಹರಡಿದೆ. ನಗರಸಭಾ ಕಚೇರಿಯ ಸ್ವಚ್ಛತಾ ಸಿಬ್ಬಂದಿ ಹಾಗೂ ಮೂವರು ವಾಟರ್‌ಮನ್‌ಗಳಲ್ಲಿ ಕರೊನಾ ಪಾಸಿಟಿವ್ ಪತ್ತೆ ಆಗಿದೆ. 56 ವರ್ಷದ ವ್ಯಕ್ತಿ ಚಿಕ್ಕನಾಯಕನಹಳ್ಳಿ ಶೆಟ್ಟಿಕೆರೆಯ ಮೂಲದವರಾಗಿದ್ದು, ತಿಪಟೂರು ನಗರಸಭೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ.
ತಿಪಟೂರು ಕೆ.ಆರ್.ಬಡಾವಣೆಯ 50 ವರ್ಷದ ವ್ಯಕ್ತಿ ಆತನ ಸಂಪರ್ಕದಲ್ಲಿದ್ದ ಐವರು ಪ್ರಾಥಮಿಕ, ಐವರು ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆಹಚ್ಚಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ರಾಮಚಂದ್ರಾಪುರದ 52 ವರ್ಷದ ವ್ಯಕ್ತಿ ಹಾಗೂ ಅರಸುನಗರದ 48 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ನಗರಸಭೆಯಲ್ಲಿ ಆತಂಕ ಮನೆಮಾಡಿದೆ. ತುರುವೇಕೆರೆ ತಾಲೂಕಿನ ದಬ್ಬೇಘಟ್ಟದ 23 ವರ್ಷದ ಮಹಿಳೆಗೂ ಸೋಂಕು ತಗುಲಿದೆ.
ಪತ್ರಿಕಾರಂಗಕ್ಕೆ ನಡುಕ: ತುಮಕೂರು ನಿವಾಸಿ, ಖಾಸಗಿ ಸುದ್ದಿ ವಾಹಿನಿ ಕ್ಯಾಮರಾಮನ್‌ಗೆ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ ತೆರಳಿದಾಗ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಂಕು ತಗುಲಿರುವುದು ದೃಢವಾಗಿದ್ದು, ಸಹಜವಾಗಿ ಪತ್ರಿಕಾವಲಯದಲ್ಲಿ ನಡುಕ ಉಂಟುಮಾಡಿದೆ. ಕ್ಯಾಮರಾಮನ್ ತಂದೆ, ತಾಯಿಯನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ನೆಲಮಂಗಲ, ಬೆಂಗಳೂರು ಪ್ರಯಾಣ ಹಿನ್ನೆಲೆ ಇದೆ. ಮಹಾಲಕ್ಷ್ಮೀನಗರದ 30 ವರ್ಷದ ವ್ಯಕ್ತಿ ಹಾಗೂ 28 ವರ್ಷದ ಮಹಿಳೆಗೂ ಸೋಂಕು ತಗುಲಿದೆ. ಅವರ ಸಂಪರ್ಕಿತರ, ಪ್ರಯಾಣ ಹಿನ್ನೆಲೆಯನ್ನು ಪತ್ತೆಹಚ್ಚಲಾಗುತ್ತಿದೆ.
ಬಿ.ಜಿ.ಪಾಳ್ಯ ಬಳಿಯ ಪ್ರಸನ್ನಕುಮಾರ ಬಡಾವಣೆಯ 47 ವರ್ಷದ ವ್ಯಕ್ತಿಗೂ ಸೋಂಕು ದೃಢವಾಗಿದೆ. ಸಪ್ತಗಿರಿ ಬಡಾವಣೆಯ 47 ವರ್ಷದ ವ್ಯಕ್ತಿ, ಶೆಟ್ಟಿಹಳ್ಳಿಗೇಟ್ ಬಳಿ 46 ವರ್ಷದ ವ್ಯಕ್ತಿ ಹಾಗೂ ದೇವನೂರು ಚರ್ಚ್ ಸಮೀಪದ 64 ವರ್ಷದ ವೃದ್ಧರೊಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಎಸ್‌ಐಟಿ ಬಡಾವಣೆಯ 13ನೇ ಕ್ರಾಸ್‌ನ 64 ವರ್ಷದ ವೃದ್ಧರಲ್ಲು ಸೋಂಕು ಇರುವುದು ದೃಢವಾಗಿದೆ. ಬೆಂಗಳೂರಿನ ವಿಜಯನಗರ, ಮಧುಗಿರಿ ಪ್ರಯಣ ಹಿನ್ನೆಲೆಹೊಂದಿದ್ದಾರೆ. ಇಬ್ಬರು ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
ಗುಜರಾತ್, ಬರೋಡ, ಬೆಂಗಳೂರು-ತುಮಕೂರು ಪ್ರಯಾಣ ಹಿನ್ನೆಲೆ ಹೊಂದಿದ್ದು, ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಸಪ್ತಗಿರಿ ಬಡಾವಣೆಯ 40 ವರ್ಷದ ವ್ಯಕ್ತಿಗೂ ಸೋಂಕು ತಗುಲಿದೆ.
ವಾಲ್‌ಮನ್‌ಗಳಿಗೂ ಸೋಂಕು: ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆಯ 54 ವರ್ಷದ ವ್ಯಕ್ತಿಗೆ ಕರೊನಾ ಸೋಂಕು ತಗುಲಿದೆ. ತಿಪಟೂರು ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೆಟ್ಟಿಕೆರೆಯ ವ್ಯಕ್ತಿಗೆ ಸೋಂಕು ಗುರುವಾರ ದೃಢಪಟ್ಟಿದ್ದು, ಈ ವ್ಯಕ್ತಿಯು ಜೂ.29 ರಂದು ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆಗೆ ನೀಡಿದ್ದರು. ತಿಪಟೂರು ನಿವಾಸಿಗಳಾದ ಮೂವರು ವಾಲ್‌ಮನ್‌ಗಳಿಗೂ ಸೋಂಕು ತಗುಲಿದೆ.