3328 ಸಂಜೀವಿನಿ ಒಕ್ಕೂಟ ರಚನೆ ಗುರಿ

nrp okkuta
ಸೀತೂರಿನಲ್ಲಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷೆ ಜ್ಯೋತಿ ಉದ್ಘಾಟಿಸಿದರು. ಎನ್.ಪಿ.ರಮೇಶ್, ಎಚ್.ಇ.ದಿವಾಕರ, ಸಂಧ್ಯಾ, ಪೂರ್ಣಿಮಾ, ಆಶಾ, ಪೂಜಶ್ರೀ, ರಾಜೇಶ್, ಸುಬ್ರಹ್ಮಣ್ಯ, ಗಿರೀಶ್, ಕಿಶೋರ್ ಇತರರಿದ್ದರು.
Published on

ನ್.ಆರ್.ಪುರ: ಮುಂದಿನ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 3328 ಸಂಜೀವಿನಿ ಸ್ವಸಹಾಯ ಗುಂಪುಗಳ ರಚನೆ ಮಾಡುವ ಗುರಿ ಹೊಂದಲಾಗಿದೆ ಎಂದು ಎಲ್‌ಆರ್‌ಎಂ ಜಿಲ್ಲಾ ವ್ಯವಸ್ಥಾಪಕ ರಾಜೇಶ್ ತಿಳಿಸಿದರು.

ಶುಕ್ರವಾರ ನಾಗರಮಕ್ಕಿ ದೇವಸ್ಥಾನದಲ್ಲಿ ಸೀತೂರು ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, 2023-24 ಆರ್ಥಿಕ ವಷರ್ದಲ್ಲಿ ಪ್ರತಿ ಮಹಿಳೆಯನ್ನು ಸಂಜೀವಿನಿ ಒಕ್ಕೂಟದ ವ್ಯಾಪ್ತಿಗೆ ತರುವ ಗುರಿ ಇಟ್ಟುಕೊಳ್ಳಲಾಗಿದೆ. 2021ರಲ್ಲಿ ಸೀತೂರಿನಲ್ಲಿ ಸಂಜೀವಿನಿ ಒಕ್ಕೂಟ ರಚನೆಯಾಗಿದೆ. ಪ್ರಾರಂಭದಲ್ಲಿ 26 ಸ್ವಸಹಾಯ ಸಂಘಗಳಿದ್ದು, ಈಗ 33 ಸ್ವಸಹಾಯ ಸಂಘಗಳಿವೆ. 4 ವಾರ್ಡುಗಳಲ್ಲಿ 432 ಸದಸ್ಯರಿದ್ದಾರೆ. ಮುಂದಿನ 6 ತಿಂಗಳಲ್ಲಿ 15 ಸ್ವಸಹಾಯ ಸಂಘ ರಚನೆಯಾಗಬೇಕಾಗಿದೆ. 5 ಸಿಬ್ಬಂದಿ ಇದ್ದಾರೆ. 2 ವರ್ಷಕ್ಕೆ ಪದಾಧಿಕಾರಿಗಳ ಆಯ್ಕೆಯಾಗಬೇಕಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಸೀತೂರು ಸಂಜೀವಿನಿ ಒಕ್ಕೂಟದ ಕಚೇರಿ ಕಟ್ಟಡ ಕಟ್ಟಲು ಕಳೆದ ವರ್ಷ 17 ಲಕ್ಷ ರೂ. ಮಂಜೂರಾಗಿತ್ತು ಎಂದರು.
ಎನ್‌ಆರ್‌ಎಲ್‌ಎಂ ತಾಲೂಕು ವ್ಯವಸ್ಥಾಪಕ ಸುಬ್ರಹ್ಮಣ್ಯ ಮಾತನಾಡಿ, ತಾಲೂಕಿನ 14 ಗ್ರಾಪಂನಲ್ಲೂ ಸಂಜೀವಿನಿ ಒಕ್ಕೂಟ ರಚನೆಯಾಗಿದೆ. 11 ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ನಡೆದಿದೆ. ಸದಸ್ಯರು ಮಾಸಿಕ ಸಭೆಯಲ್ಲಿ ಭಾಗವಹಿಸುವುದು ಕಷ್ಟವಾಗುತ್ತದೆ ಎಂದು ಮಹಾಸಭೆ ಏರ್ಪಡಿಸುತ್ತೇವೆ. ಎನ್‌ಆರ್‌ಎಲ್‌ಎಂ ಯೋಜನೆಯಲ್ಲಿ ಎಲ್ಲ ಸ್ವಸಹಾಯ ಸಂಘಗಳನ್ನು ಒಗ್ಗೂಡಿಸಿ ಗ್ರಾಮ ಮಟ್ಟದಲ್ಲಿ ಒಕ್ಕೂಟ ರಚನೆ ಮಾಡಿದ್ದೇವೆ. ಇದರಲ್ಲಿ ಕಾರ್ಯಕಾರಿ ಸಮಿತಿ ರಚನೆಯಾಗಿದೆ. 5 ಸಿಬ್ಬಂದಿ ನೇಮಕವಾಗಿದೆ. ಮಹಾ ಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಯಬೇಕಾಗಿದೆ. 1960ರ ಸಹಕಾರ ಕಾಯ್ದೆಯಡಿ ಒಕ್ಕೂಟ ನೋಂದಣಿಯಾಗಿದೆ ಎಂದು ಮಾಹಿತಿ ನೀಡಿದರು.
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಜ್ಯೋತಿ ಮಾತನಾಡಿ, ಎನ್‌ಆರ್‌ಎಲ್‌ಎಂ ಮೇಲಾಧಿಕಾರಿಗಳು ನೀಡಿದ ಮಾಹಿತಿ ಸದಸ್ಯರಿಗೆ ಹೆಚ್ಚು ಪರಿಣಾಮಕಾರಿಯಾಗಲಿದೆ. 3 ವರ್ಷದಿಂದ ನಾನು ಅಧ್ಯಕ್ಷೆಯಾಗಿದ್ದು, ಎಲ್ಲ ಪದಾಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದರು.
ಗ್ರಾಪಂ ಸದಸ್ಯ ಎನ್.ಪಿ.ರಮೇಶ್ ಮಾತನಾಡಿ, ಸಂಜೀವಿನಿ ಒಕ್ಕೂಟ ಚೆನ್ನಾಗಿ ನಡೆದುಕೊಂಡು ಹೋಗುತ್ತಿದ್ದು ಗ್ರಾಮ ಪಂಚಾಯಿತಿಯಿಂದ ಎಲ್ಲ ಸಹಕಾರ ನೀಡುತ್ತೇವೆ ಎಂದರು.
ಗ್ರಾಪಂ ಸದಸ್ಯ ಎಚ್.ಇ.ದಿವಾಕರ ಮಾತನಾಡಿ, ಮೋಟಮ್ಮ ಸಚಿವೆ ಆಗಿದ್ದಾಗ ಸ್ತ್ರೀಶಕ್ತಿ ಗುಂಪುಗಳು ರಚನೆಯಾಗಿದ್ದವು. ಮುಂದೆ ಸಂಜೀವಿನಿ ಒಕ್ಕೂಟ ಉತ್ತಮ ಕೆಲಸ ಮಾಡಿ ಆರ್ಥಿಕ ಸ್ವಾವಲಂಬನೆ ಗಳಿಸಬೇಕು ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಒಕ್ಕೂಟದ ಸದಸ್ಯರ 3 ಮಕ್ಕಳನ್ನು ಪುರಸ್ಕರಿಸಲಾಯಿತು. ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಸಂಧ್ಯಾ, ಉಪಾಧ್ಯಕ್ಷೆ ಪೂರ್ಣಿಮಾ, ಖಚಾಂಚಿ ಆಶಾ, ಉಪ ಕಾರ್ಯದರ್ಶಿ ಪೂಜಾಶ್ರೀ, ವಲಯ ಮೇಲ್ವಿಚಾರಕ ಗಿರೀಶ್, ಕೌಶಲ ಅಭಿವೃದ್ಧಿ ಮೇಲ್ವಿಚಾರಕ ಕಿಶೋರ್, ಅರ್ಪಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net