ನಗರದಲ್ಲಿ ಒಟ್ಟು 33 ಬಲಿ:  ಕಂಟೇನ್ಮೆಂಟ್ ಸ್ಥಳಗಳು 191

Corona
Published on

ಬೆಂಗಳೂರು: ನಗರದಲ್ಲಿ ಸೋಮವಾರ 35 ಮಂದಿಗೆ ಹೊಸದಾಗಿ ಕರೊನಾ ಸೋಂಕು ದೃಢಪಟ್ಟಿದ್ದು, ವೃದ್ಧೆ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಒಟ್ಟು 33 ಮಂದಿ ಬಲಿಯಾದಂತಾಗಿದೆ. ನಗರದಲ್ಲಿ ಸೋಂಕಿತರ ಸಂಖ್ಯೆ 725ಕ್ಕೆ ತಲುಪಿದ್ದು, ಕಂಟೇನ್ಮೆಂಟ್ ಪ್ರದೇಶಗಳು 142ಕ್ಕೆ ಏರಿದೆ.

ಮಹಾರಾಷ್ಟ್ರದಿಂದ ಬಂದ 7 ಮಂದಿ ಹಾಗೂ ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದ ಬಂದಿರುವ ಪೈಕಿ ತಲಾ ಒಬ್ಬರು ಸೋಂಕಿಗೆ ಒಳಗಾಗಿದ್ದಾರೆ. ಶೀತಜ್ವರ (ಐಎಲ್​ಐ) ಹೊಂದಿದ್ದ 13 ಮಂದಿ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಒಬ್ಬರು, ಕಂಟೇನ್ಮೆಂಟ್ ವಲಯದ ಸಂಪರ್ಕದಿಂದ ಒಬ್ಬರು, ಸೋಂಕಿತ ರೋಗಿಗಳ ಸಂಪರ್ಕ ಹೊಂದಿದ್ದ ಮೂವರಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ 8 ಸೋಂಕಿತರ ಸಂಪರ್ಕ ಮಾಹಿತಿ ತಿಳಿದು ಬಂದಿಲ್ಲ.

ಶೀತ ಜ್ವರದ ಭೀತಿ: ಹವಾಮಾನ ಬದಲಾವಣೆಯೊಂದಿಗೆ ಬೆಂಗಳೂರು ನಗರದಲ್ಲಿ ಶೀತಜ್ವರ (ಐಎಲ್​ಐ) ಸಮಸ್ಯೆಯಿಂದ ಕರೊನಾ ಸೋಂಕಿಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಸೋಮವಾರ ವರದಿಯಾಗಿರುವ 35

ಪ್ರಕರಣಗಳಲ್ಲಿ ಹೆಚ್ಚು ಮಂದಿ ಶೀತಜ್ವರ ಹಿನ್ನೆಲೆ ಹೊಂದಿದವರಾಗಿದ್ದಾರೆ.

ಮಳೆಗಾಲದಲ್ಲಿ ಶೀತಜ್ವರ ಸಮಸ್ಯೆ ಸಾಮಾನ್ಯವಾಗಿದ್ದು, ಇದರ ಬಾಧೆಗೆ ಒಳಗಾದವರಲ್ಲಿ ಸೋಂಕು ಕಂಡುಬರುತ್ತಿದೆ. ಸೋಮವಾರ ಶೀತಜ್ವರ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 75 ವರ್ಷದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ನಗರದ ಜನರಲ್ಲಿ ಮತ್ತಷ್ಟು ಭೀತಿ ಮೂಡಿಸಿದೆ.

191ಕ್ಕೆ ಏರಿದ ಕಂಟೇನ್ಮೆಂಟ್ ಸ್ಥಳ: ನಗರದಲ್ಲಿ ಸೋಂಕಿತ ಪ್ರಕರಣ ಗಳು ಏರಿಕೆಯೊಂದಿಗೆ ಕಂಟೇನ್ಮೆಂಟ್ ಪ್ರದೇಶಗಳ ಸಂಖ್ಯೆ 191ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಆತಂಕವಿದೆ.

106 ಮಂದಿಗೆ ಸಾಂಸ್ಥಿಕ ಕ್ವಾರಂಟೈನ್

ಬೆಂಗಳೂರು: ಮುಂಬೈ-ಬೆಂಗಳೂರು ‘ಉದ್ಯಾನ್ ಎಕ್ಸ್​ಪ್ರೆಸ್’ ವಿಶೇಷ ರೈಲಿನಲ್ಲಿ ಸೋಮವಾರ ರಾಜಧಾನಿಗೆ ಆಗಮಿಸಿದ ಒಟ್ಟು 647 ಪ್ರಯಾಣಿಕರ ಪೈಕಿ 106 ಮಂದಿ ಸಾಂಸ್ಥಿಕ ಕ್ವಾರಂಟೈನ್ ಹಾಗೂ 143 ಮಂದಿಯನ್ನು ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಉಳಿದವರಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ 159 ಮಂದಿ ಹಾಗೂ ರಾಜ್ಯದ ವಿವಿಧೆಡೆಗೆ ತೆರಳುವ 221 ಮಂದಿಯನ್ನು ತಪಾಸಣೆಗೆ ಒಳಪಡಿಸಿದ ನಂತರ ನಿಲ್ದಾಣದಿಂದ ಹೊರಹೋಗಲು ಅವಕಾಶ ನೀಡಲಾಯಿತು.

ಕತಾರ್​ನಿಂದ 185 ಮಂದಿ ರಾಜ್ಯಕ್ಕೆ

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಕತಾರ್​ನಲ್ಲಿ ಸಿಲುಕಿದ್ದ 185 ಕನ್ನಡಿಗರು ಖಾಸಗಿ ವಿಮಾನದಲ್ಲಿ ಸೋಮವಾರ ಬೆಂಗಳೂರಿಗೆ ಬಂದಿಳಿದರು. ದೋಹಾದ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.30ಕ್ಕೆ ಹೊರಟಿದ್ದ ವಿಮಾನ ಸಂಜೆ 6 ಗಂಟೆಗೆ ಕೆಐಎಗೆ ಆಗಮಿಸಿತು. ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಿಸಿದರು. ನಂತರ ಪ್ರಯಾಣದ ವಿವರ, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿ ಸಂಗ್ರಹಿಸಿದರು. ಹಿರಿಯ ನಾಗರಿಕರು, ಮಕ್ಕಳು, ಗರ್ಭಿಣಿಯರನ್ನು ಹೊರತುಪಡಿಸಿ ಉಳಿದ ವರನ್ನು ಬಿಎಂಟಿಸಿ ಬಸ್​ಗಳಲ್ಲಿ ಖಾಸಗಿ ಹೋಟೆಲ್​ಗಳಿಗೆ ಸಾಂಸ್ಥಿಕ ಕ್ವಾರಂಟೈನ್​ಗೆ ಕಳುಹಿಸಲಾಯಿತು.

ವಿಮಾನ ಸಿಗದೆ ಪರದಾಟ: ಕತಾರ್​ನಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕರೆಸಿಕೊಳ್ಳಲು ವಿಶೇಷ ವಿಮಾನ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ಮೇ 22ರಂದು ವಿಮಾನ ವ್ಯವಸ್ಥೆ ಮಾಡಿತ್ತು. ನಂತರ ಯಾವುದೇ ವಿಮಾನ ಕಲ್ಪಿಸಿರಲಿಲ್ಲ. ಇದೀಗ ಭಾರತೀಯ ಸಮುದಾಯ ಹಿತೈಷಿ ಸಮಿತಿ ಹಾಗೂ ಕರ್ನಾಟಕ ಸಂಘದ ನೆರವಿನಿಂದ ತಾಯ್ನಾಡು ತಲುಪಿದ್ದಾರೆ.

ಮಹಿಳಾ ಪೇದೆಗೆ ಕರೊನಾ

ಬೆಂಗಳೂರು: ಕಲಾಸಿಪಾಳ್ಯ ಠಾಣೆ ಮಹಿಳಾ ಪೇದೆಗೆ ಸೋಂಕು ದೃಢಪಟ್ಟಿದೆ. 35 ವರ್ಷದ ಪೇದೆ ಠಾಣೆಯಲ್ಲಿ ರೈಟರ್ ಆಗಿದ್ದು, ದೊಡ್ಡಮಾವಳ್ಳಿಯ ಪಿ.ಜಿ.ಯಲ್ಲಿ ವಾಸಿಸುತ್ತಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಈಚೆಗೆ 3 ದಿನ ರಜೆ ಪಡೆದಿದ್ದ ಅವರು, ಶನಿವಾರ ಕರೊನಾ ಪರೀಕ್ಷೆಗೆ ಒಳಗಾಗಿದ್ದರು. ಸೋಮವಾರ ಬಂದ ವರದಿ ಯಲ್ಲಿ ಪಾಸಿಟಿವ್ ಬಂದಿದೆ. ಪೇದೆ ವಾಸಿಸುತ್ತಿದ್ದ ಪಿ.ಜಿ. ರೆಡ್ ಜೋನ್ನಲ್ಲಿ ಇದ್ದುದರಿಂದ ಅಲ್ಲಿಂದಲೇ ಸೋಂಕು ತಗುಲಿದೆ ಎನ್ನಲಾಗಿದೆ. ಪೇದೆ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್​ಗೆ ಒಳಪಡಿಸಲು ಪಾಲಿಕೆ ಮುಂದಾಗಿದ್ದು, ಠಾಣೆಯನ್ನು ಸೀಲ್​ಡೌನ್ ಮಾಡಲಾಗುತ್ತದೆ. ಪೇದೆ ಠಾಣೆಯಿಂದ ಹೊರಗೆ ಕರ್ತವ್ಯಕ್ಕೆ ನಿಯೋಜನೆ ಗೊಂಡಿರಲಿಲ್ಲ. ಆದರೂ, ಇತರ ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net