ಉಡುಪಿಯಲ್ಲಿ 33 ಮಂದಿಗೂ ನೆಗೆಟಿವ್

covid 19
Published on

ಉಡುಪಿ: ಜಿಲ್ಲಾಡಳಿತ ಭಾನುವಾರ ಸ್ವೀಕರಿಸಿದ ಎಲ್ಲ 33 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ.

ಈ ನಡುವೆ ಸರ್ಕಾರ ಗುರುತಿಸಿರುವ ದಿಲ್ಲಿಯ ತಬ್ಲಿಘಿ ಜಮಾತ್ ಹಾಟ್‌ಸ್ಪಾಟ್ ಪ್ರದೇಶಕ್ಕೆ ತೆರಳಿದ್ದಾರೆ ಎನ್ನಲಾದ ಇಬ್ಬರು ವ್ಯಕ್ತಿಗಳ ಮಾದರಿ ಸೇರಿದಂತೆ, ತೀವ್ರ ತರದ ಶ್ವಾಸಕೋಶದ ಸೋಂಕಿನ ಸಮಸ್ಯೆ ಇಬ್ಬರು, ಕೊವಿಡ್ -19 ಸೋಂಕಿತರ ಸಂಪರ್ಕವಾದ 29, ಇಲ್‌ನೆಸ್‌ಗೆ ಸಂಬಂಧಿಸಿ ಮೂವರ ಸಹಿತ ಒಟ್ಟು 36 ಮಂದಿಯ ಮಾದರಿಯನ್ನು ಭಾನುವಾರ ಸಂಗ್ರಹಿಸಲಾಗಿದೆ.

ಭಾನುವಾರ ಇಬ್ಬರು ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 44 ಮಂದಿಯ ವರದಿ ಬರಲು ಬಾಕಿ ಇದೆ. ಭಾನುವಾರಕ್ಕೆ 105 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 15 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಿಂದ 9 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊಬೈಲ್ ಲೊಕೇಶನ್ ಜಾಡು: ದೆಹಲಿಗೆ ತೆರಳಿದ ಜಿಲ್ಲೆಯ ಇಬ್ಬರು ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ಈ ಇಬ್ಬರು ಕಳೆದ ತಿಂಗಳು, ಸರ್ಕಾರ ಈಗ ಕೊವಿಡ್-19 ಹಾಟ್‌ಸ್ಪಾಟ್ ಎಂದು ಘೋಷಿಸಿರುವ ದಿಲ್ಲಿ ತಬ್ಲಿಘಿ ಜಮಾತ್ ಪ್ರದೇಶಕ್ಕೆ ತೆರಳಿದ್ದರು. ಆದರೆ ಆಗ ಅಲ್ಲಿ ನಡೆಯುತ್ತಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎನ್ನಲಾಗಿದ್ದು, ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿ ಅವರನ್ನು ಪತ್ತೆ ಮಾಡಲಾಗಿದೆ. ಬಳಿಕ ಇಬ್ಬರನ್ನು ಆಸ್ಪತ್ರೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಭಯಬೇಡ, ಎಚ್ಚರ ವಹಿಸಿ, ಗುಣಮುಖನಾದ ಯುವಕ ಸಂದೇಶ

ಕರೊನಾ ವೈರಸ್ ಬಗ್ಗೆ ಆತಂಕಕ್ಕೆ ಒಳಗಾಗದೆ ಎಚ್ಚರ ವಹಿಸಿ. ವಿದೇಶದಿಂದ ಬಂದವರು ಅಥವಾ ಯಾವುದಾದರೂ ಸಭೆಯಲ್ಲಿ ಭಾಗವಹಿಸಿ ಬಂದವರು ಯಾರೇ ಇರಲಿ, ಸ್ವಯಂಪ್ರೇರಿತರಾಗಿ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿ ಎಂದು ಕರೊನಾ ವೈರಸ್ ಸೋಂಕಿನಿಂದ ಜಿಲ್ಲೆಯ ಗುಣಮುಖರಾಗಿರುವ ಮೊದಲ ವ್ಯಕ್ತಿ ಆಡಿಯೋ ಸಂದೇಶ ಕಳಿಸಿದ್ದಾರೆ.

ಶನಿವಾರ ಟಿಎಂಎ ಪೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ 34 ವರ್ಷ ವಯಸ್ಸಿನ ಇವರು ಪ್ರಸ್ತುತ ಸಂಪೂರ್ಣ ಚೇತರಿಸಿಕೊಂಡಿದ್ದು, 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ‘ದುಬೈಯಿಂದ ನಾನು ಉಡುಪಿಗೆ ಬಂದ ನಂತರ ಸ್ವಯಂಪ್ರೇರಿತನಾಗಿ ನೇರವಾಗಿ ಆಸ್ಪತ್ರೆಗೆ ಬಂದು ದಾಖಲಾದೆ. ವೈರಸ್ ಬಗ್ಗೆ ಪರೀಕ್ಷೆ ಮಾಡಿಸಿ ಪಾಸಿಟಿವ್ ಎಂದು ವರದಿ ಬಂದ ನಂತರ ಆತಂಕಕ್ಕೆ ಒಳಗಾಗದೆ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕರೊನಾ ಪಾಸಿಟಿವ್ ಬಂದ ವ್ಯಕ್ತಿಗೆ ಸಾಧ್ಯವಾದರೆ ಧೈರ್ಯ ತುಂಬಿರಿ. ಅವರ ಧೈರ್ಯ ಕುಗ್ಗಿಸುವಂತಹ ಕೆಲಸ ಮಾಡಬೇಡಿ’ ಎಂದು ಕೋರಿದ್ದಾರೆ. ಚಿಕಿತ್ಸೆ ನೀಡಿದ ಕೆಎಂಸಿ ಮಣಿಪಾಲ ಆಸ್ಪತ್ರೆ, ಆರೋಗ್ಯ ಇಲಾಖೆ ಅಧಿಕಾರಿ ವರ್ಗ, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net