

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 33 ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 142ಕ್ಕೆ ಏರಿಕೆಯಾಗಿದ್ದು, ಐವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಗುರುವಾರ 33 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 500 ಗಡಿ ದಾಟಿದೆ. ಹಾಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಪ್ರಕರಣಗಳಲ್ಲಿ 5 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವೆನ್ಲಾಕ್ ಅಧೀಕ್ಷಕ ಡಾ. ಸದಾಶಿವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಡೆಸಿದ ಸಭೆಗೆ ಮಾಹಿತಿ ನೀಡಿದರು.
ಇವರಲ್ಲಿ ನಾಲ್ವರು ರೋಗಿಗಳು ಐಸಿಯುನಲ್ಲಿದ್ದು, ಡಯಾಬಿಟಿಸ್, ನ್ಯುಮೋನಿಯಾ, ಹೃದಯರೋಗ, ಅಧಿಕ ರಕ್ತದೊತ್ತಡ ಮುಂತಾದ ಬಹುವಿಧದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಬ್ಬರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಎಲ್ಲರೂ 49 ವರ್ಷಕ್ಕಿಂತ ಮೇಲಿನವರು ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ತಿಳಿಸಿದೆ.
ಶುಕ್ರವಾರ ಸೋಂಕು ಪತ್ತೆಯಾದ 33 ಮಂದಿ ಪೈಕಿ 15 ಮಂದಿ ಸೌದಿ ದರೇಬಿಯಾ, ದಮಾಮ್, ಕತಾರ್ ಮುಂತಾದ ಕೊಲ್ಲಿ ರಾಷ್ಟ್ರಗಳಿಂದ ಆಗಮಿಸಿದವರು. 4 ಮಂದಿ ಐಎಲ್‌ಐ, ಇಬ್ಬರು ಸಾರಿ ಮತ್ತು 10 ಮಂದಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದವರು. ಎರಡು ಪ್ರಕರಣಗಳು ಶೋಧನೆ ಹಂತದಲ್ಲಿ ಇದೆ. ನೌಕರನೋರ್ವನಿಗೆ ಕರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಮಂಗಳೂರಿನ ವಸ್ತ್ರ ಮಳಿಗೆಯೊಂದನ್ನು ಸೀಲ್‌ಡೌನ್ ಮಾಡಲಾಗಿದೆ.
270 ಮಂದಿಗೆ ನೆಗೆಟಿವ್ ವರದಿ ಬಂದಿದ್ದು, 34 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಇತರ ಸಿಬ್ಬಂದಿಯಲ್ಲಿ ಕರೊನಾ ಸೋಂಕು ಹೊಸ ಪ್ರಕರಣಗಳಿಲ್ಲ. ಐವರು ವೈದ್ಯರಲ್ಲಿ ಸೋಂಕು ಬುಧವಾರ ಪತ್ತೆಯಾದ ಪ್ರಕರಣಗಳಿಗೆ ಸಂಬಂಧಿಸಿ ಐದು ದಿನಗಳ ಬಳಿಕ ಅವರ ಪ್ರಾಥಮಿಕ ಸಂಪರ್ಕಗಳ ಬಗ್ಗೆ ಪರೀಕ್ಷೆ ನಡೆಯಲಿದೆ.
ಬಲ್ಲಾಣದ ನರ್ಸ್‌ಗೆ ಪಾಸಿಟಿವ್
ಕಿನ್ನಿಗೋಳಿ: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಮೆನ್ನಬೆಟ್ಟು ಗ್ರಾಪಂ ವ್ಯಾಪ್ತಿಯ ಮಾರಡ್ಕ ಬಲ್ಲಾಣದ ಮಹಿಳೆಗೆ ಕರೊನಾ ಪಾಸಿಟಿವ್ ಬಂದಿದೆ. ಈ ಆಸ್ಪತ್ರೆ ಸಿಬ್ಬಂದಿಗೆ ಮೂರು ದಿನ ಹಿಂದೆ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಎಲ್ಲರನ್ನೂ ತಪಾಸಣೆಗೊಳಪಡಿಸಲಾಗಿತ್ತು. ಮಹಿಳೆಯ ಮನೆ ಸಹಿತ ಮೂರು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಪುತ್ತೂರಿನ ವ್ಯಾಪಾರಿ: ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ನಡೆಸುತ್ತಿದ್ದು, ಲಾಕ್‌ಡೌನ್ ಬಳಿಕ ಉದಯಗಿರಿ ಮನೆಯಲ್ಲೇ ಇದ್ದರು. ಲಾಕ್‌ಡೌನ್ ಸಡಿಲಿಕೆ ಬಳಿಕ ಇತ್ತೀಚೆಗೆ ಬೆಂಗಳೂರಿಗೆ ಹೋಗಿ ಬಂದವರಿಗೆ ಶೀತ, ಜ್ವರ ಬಂದಿತ್ತು. ಪರೀಕ್ಷೆ ನಡೆಸಿದಾಗ ಕರೊನಾ ದೃಢಪಟ್ಟಿದೆ. ಅವರ ಮನೆಯಲ್ಲಿರುವ ಅಜ್ಜ, ತಾಯಿ, ಸಹೋದರನನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಶನಿವಾರ ಮನೆಯನ್ನು ಸೀಲ್‌ಡೌನ್ ಮಾಡಲಾಗುವುದು ಎಂದು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ರೈ ತಿಳಿಸಿದ್ದಾರೆ.
ಉಳ್ಳಾಲದಲ್ಲಿ ಆತಂಕ
ಉಳ್ಳಾಲ: ಮಹಿಳೆಯ ಜೀವ ಬಲಿ ಪಡೆದಿರುವ ಕರೊನಾ ಈಗ ಎಎಸ್‌ಐ ಸಹಿತ ಮತ್ತೆ ಇಬ್ಬರಿಗೆ ತಗುಲಿದೆ. ಉಳ್ಳಾಲ ಕೋಡಿ ನಿವಾಸಿ ಮಹಿಳೆ ಎದೆನೋವು ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಕೆಲದಿನಗಳ ಹಿಂದೆ ಎಸ್‌ಐಗೆ ಕರೊನಾ ತಗುಲಿತ್ತು. ಈಗ ಎಎಸ್‌ಐಗೂ ದೃಢಗೊಂಡಿದೆ. ಇಬ್ಬರಿಗೂ ತಲಪಾಡಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ತಗುಲಿರಬಹುದು ಎಂದು ಶಂಕಿಸಲಾಗಿದೆ. ಉಳ್ಳಾಲ ವ್ಯಾಪ್ತಿಯಲ್ಲಿ 5 ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶಾಸಕ ಯು.ಟಿ.ಖಾದರ್ ಸಭೆ ನಡೆಸಿದ್ದಾರೆ. ಉಳ್ಳಾಲ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಿದೆ. ಉಳ್ಳಾಲ ಭಾಗದ ಹೆಚ್ಚಿನ ಮಸೀದಿಗಳಲ್ಲಿ ಗುರುವಾರದಿಂದ ಸಾಮೂಹಿಕ ನಮಾಜ್ ಸ್ಥಗಿತಗೊಳಿಸಲಾಗಿದ್ದು, ಶುಕ್ರವಾರದ ನಮಾಜ್ ನಡೆದಿಲ್ಲ.
ಕ್ವಾರಂಟೈನ್ ಉಲ್ಲಂಘನೆ 54 ಪ್ರಕರಣ: ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 54 ಮಂದಿಯ ಮೇಲೆ ದ.ಕ. ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಪೈಕಿ 10 ಪ್ರಕರಣ ಪುತ್ತೂರು ತಾಲೂಕು ಹಾಗೂ ಉಳಿದ ಪ್ರಕರಣಗಳು ಮಂಗಳೂರು ತಾಲೂಕಿಗೆ ಸಂಬಂಧಿಸಿವೆ. ಕ್ವಾರಂಟೈನ್ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದ್ದು, ಎಲ್ಲರ ಮೇಲೂ ನಿಗಾ ಇಡಲಾಗುತ್ತಿದೆ. ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕೇಸು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಕಚೇರಿ ಸ್ಯಾನಿಟೈಸ್
ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಸ್ಯಾನಿಟೈಸ್ ಮಾಡಲಾಗಿದೆ. ಕರೊನಾ ಸೋಂಕು ಇರುವ ವ್ಯಕ್ತಿಯೋರ್ವರು ಕಚೇರಿಗೆ ಭೇಟಿ ನೀಡಿರುವ ಶಂಕೆ ಇದೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ದಿನನಿತ್ಯ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸ್ಯಾನಿಟೈಸ್ ಮಾಡಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಕಾಸರಗೋಡಿನ ಇಬ್ಬರಿಗೆ ಕರೊನಾ
ಕಾಸರಗೋಡು: ಜಿಲ್ಲೆಯ ಇಬ್ಬರ ಸಹಿತ ಕೇರಳದಲ್ಲಿ ಶುಕ್ರವಾರ 150 ಮಂದಿಯಲ್ಲಿ ಕೋವಿಡ್-19 ರೋಗ ಪತ್ತೆಯಾಗಿದೆ. ಕೇರಳದಲ್ಲಿ ಒಟ್ಟು 114 ಹಾಟ್‌ಸ್ಪಾಟ್ ಕೇಂದ್ರಗಳನ್ನು ಗುರುತಿಸಲಾಗಿದೆ.